ADVERTISEMENT

ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿಸಿದ ಎಲ್‌ಎಂಎಸ್‌

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಲ್ಯಾಪ್‌ಟಾಪ್‌ನಲ್ಲೇ ಪಾಠ, ಕಲಿಕೆ

ಪಿ.ಎಸ್.ರಾಜೇಶ್
Published 28 ಜನವರಿ 2021, 3:05 IST
Last Updated 28 ಜನವರಿ 2021, 3:05 IST
ಲ್ಯಾಪ್‌ಟಾಪ್‌ಗಳ ಮೂಲಕ ಕಲಿಕೆಯಲ್ಲಿ ತೊಡಗಿರುವ ಬಾಗೇಪಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು
ಲ್ಯಾಪ್‌ಟಾಪ್‌ಗಳ ಮೂಲಕ ಕಲಿಕೆಯಲ್ಲಿ ತೊಡಗಿರುವ ಬಾಗೇಪಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು   

ಬಾಗೇಪಲ್ಲಿ: ಎಲ್ಲರ ಕೈಗಳಲ್ಲಿಯೂ ಲ್ಯಾಪ್‌ಟಾಪ್, ನಿಶಬ್ದ ಕೊಠಡಿಗಳು. ಲ್ಯಾಪ್‌ಟಾಪ್‌ಗಳಲ್ಲಿ ಪಾಠಗಳನ್ನು ನೋಡುತ್ತಾ, ಕಲಿಕೆಯಲ್ಲಿರುತ್ತದೆ ಆಸಕ್ತ ವಿದ್ಯಾರ್ಥಿ ಸಮೂಹ. ಒಂದು ರೀತಿಯಲ್ಲಿ ಒಂದು ಸಣ್ಣ ಐಟಿ ಕಂಪನಿಯ ಕೊಠಡಿಯನ್ನು ಪ್ರವೇಶಿಸಿದ ಅನುಭವ. ಇಂತಹ ದೃಶ್ಯ ಕಂಡು ಬಂದದ್ದು ಪಟ್ಟಣದ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ.

ಕಂಪ್ಯೂಟರ್‌ಗಳನ್ನು ಕನಸುಗಳಲ್ಲಿ ಮಾತ್ರ ನೋಡುತ್ತಿದ್ದ ಅತ್ಯಂತ ಬಡ ಕುಟುಂಬಗಳ ಸರ್ಕಾರಿ ಕಾಲೇಜಿನ ಪದವಿ ವಿದ್ಯಾರ್ಥಿಗಳು ಇದೀಗ, ಲ್ಯಾಪ್‌ಟಾಪ್‌, ನೋಟ್‌ಪ್ಯಾಡ್‌ಗಳನ್ನು ಹಿಡಿದುಕೊಂಡು ಬರುತ್ತಿದ್ದಾರೆ. ತಮ್ಮ ದೈನಂದಿನ ಪಾಠ-ಪ್ರವಚನಗಳನ್ನು ಲೀಲಾಜಾಲವಾಗಿ ಅಭ್ಯಾಸ ಮಾಡುತ್ತಿದ್ದಾರೆ. ಇದರೊಂದಿಗೆ ಉನ್ನತ ಶಿಕ್ಷಣ ಇಲಾಖೆ ಜಾರಿಗೊಳಿಸಿರುವ ಕರ್ನಾಟಕ ಎಲ್ಎಂಎಸ್ ಅಂದರೆ ಕರ್ನಾಟಕ ಕಲಿಕಾ ನಿರ್ವಹಣಾ ವ್ಯವಸ್ಥೆ ವಿದ್ಯಾರ್ಥಿಗಳ ಕಲಿಕಾಸಕ್ತಿಯನ್ನು ಇಮ್ಮಡಿಗೊಳಿಸಿದೆ.

ಮೂರು ವರ್ಷಗಳಿಂದಲೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಉಚಿತವಾಗಿ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಾ ಬಂದಿದೆ. ಆದರೆ ಅದರ ಮಹತ್ವ ಅಂದಿನ ದಿನಗಳಲ್ಲಿ ಅಷ್ಟಾಗಿ ತಿಳಿದಿರಲಿಲ್ಲ. ಆದರೆ ಕೊರೊನಾದಂತಹ ಸಂಕಷ್ಟ ಕಾಲದಲ್ಲಿ ನೇರ ತರಗತಿಗಳು ಬಾಗಿಲು ಮುಚ್ಚಿದಾಗ ಇದೇ ಲ್ಯಾಪ್‌ಟಾಪ್‌ಗಳು ಬಡ, ಹಿಂದುಳಿದ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿವೆ.

ADVERTISEMENT

ಸದ್ಯ ನೇರ ತರಗತಿಗಳು ಪ್ರಾರಂಭವಾಗಿದ್ದರೂ ವಿದ್ಯಾರ್ಥಿಗಳು ಲ್ಯಾಪ್ ಟಾಪ್‌ನೊಂದಿಗೇ ಕಾಲೇಜಿಗೆ ಬರುತ್ತಿದ್ದಾರೆ. ಎಲ್ಎಂಎಸ್ ವ್ಯವಸ್ಥೆಯಲ್ಲಿ ಪ್ರತಿ ವಿದ್ಯಾರ್ಥಿಗೆ ಉನ್ನತ ಶಿಕ್ಷಣ ಇಲಾಖೆಯೇ ವೈಯಕ್ತಿಕ ಪಾಸ್‌ವರ್ಡ್‌ ನೀಡಿದೆ. ಇದನ್ನು ಬಳೆಸಿಕೊಂಡು ಲಾಗಿನ್ ಆದರೆ ಆಯಾ ತರಗತಿಯ ನೂರಾರು ವಿಡಿಯೊಗಳು ಲಭ್ಯವಾಗುತ್ತಿವೆ.

ಇದರೊಂದಿಗೆ ಪಿಪಿಟಿ, ಕಲಿಕಾ ಸಾಮಗ್ರಿಗಳು ಯಥೇಚ್ಛವಾಗಿ ಲಭ್ಯವಿವೆ. ಒಂದೇ ವಿಷಯದ ಬಗೆಗೆ ನುರಿತ ರಾಜ್ಯದ ಹಿರಿಯ ಹಾಗೂ ನುರಿತ ಪ್ರಾಧ್ಯಾಪಕರಿಂದ ಸಿದ್ಧಗೊಳಿಸಿ ಅಪ್ ಲೋಡ್ ಮಾಡಿರುವ ಪಾಠಗಳ ವಿಡಿಯೊಗಳು ಪರದೆಯ ಮೇಲೆ ಮೂಡುತ್ತಿದ್ದು, ಇದು ವಿದ್ಯಾರ್ಥಿಗಳ ಕಲಿಕೆಯಲ್ಲಿ ಉತ್ಸಾಹ ತುಂಬಿದೆ. ಇದರೊಂದಿಗೆ ಕಾಲೇಜಿನ ಪ್ರಾಧ್ಯಾಪಕರು ನಿರಂತರವಾಗಿ ಎಲ್ಎಂಎಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಲಾಗಿನ್ ಆಗುವಂತೆ ಪ್ರೇರೇಪಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.