
ಚಿಕ್ಕಬಳ್ಳಾಪುರ: ಲೋಕ ಅದಾಲತ್‌ನಲ್ಲಿ ನೀಡುವ ತೀರ್ಪು ನ್ಯಾಯಾಲಯದಲ್ಲಿ ಸಹಜವಾಗಿ ನಡೆಯುವ ಪ್ರಕರಣಗಳ ತೀರ್ಪುಗಳಿಗಿಂತ ಭಿನ್ನ. ಉಭಯ ಕಕ್ಷಿದಾರರಿಗೂ ಸಮಾಧಾನ, ನೆಮ್ಮದಿ ಹಾಗೂ ಸಮಯ ಉಳಿತಾಯ ಆಗುತ್ತದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ಅವರು ತಿಳಿಸಿದರು.
ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ಗೆ ಚಾಲನೆ ನೀಡಿ ಮಾತನಾಡಿದರು.
ಅಣ್ಣ ತಮ್ಮಂದಿರು ತಮ್ಮ ಜಮೀನು, ಆಸ್ತಿಗಳ ಸಮಸ್ಯೆಗಳನ್ನು ಮೂಲದಲ್ಲೇ ಬಗೆಹರಿಸಿಕೊಂಡರೆ ಸಮಸ್ಯೆಗಳು ಪ್ರಕರಣಗಳಾಗಿ ನ್ಯಾಯಾಲಯದ ಮೆಟ್ಟಿಲು ಹತ್ತುವ ಅವಶ್ಯಕತೆ ಇರುವುದಿಲ್ಲ. ಅಣ್ಣತಮ್ಮಂದಿರ ಆಸ್ತಿ ಸಮಸ್ಯೆಗಳು ನ್ಯಾಯಾಲಯದ ಮೆಟ್ಟಿಲು ಏರಿದಲ್ಲಿ ಸಂಬಂಧಗಳು ಹದಗೆಡುತ್ತವೆ ಎಂದು ಹೇಳಿದರು.
ನೆಮ್ಮದಿ ಹಾಳಾಗಿ ದ್ವೇಷ ಅಸೂಯೆ ಹೆಚ್ಚಳಕ್ಕೂ ಕಾರಣವಾಗುತ್ತದೆ. ಕುಟುಂಬಗಳ ಹಂತದಲ್ಲೇ ತಂದೆ ಸಂಪಾದನೆಯ ಆಸ್ತಿಗಳನ್ನು ನ್ಯಾಯಯುತ ರೀತಿಯಲ್ಲಿ ಮುಕ್ತವಾಗಿ ಹಂಚಿಕೊಂಡರೆ ಯಾವುದೇ ಸಮಸ್ಯೆ ಇರುವುದಿಲ್ಲ. ಸಣ್ಣ ಪುಟ್ಟ ವಿಸ್ತೀರ್ಣದ ಜಮೀನುಗಳಿಗಾಗಿ ಪ್ರತಿಷ್ಠೆಗಳಿಗೆ ಬಿದ್ದು ಅನೇಕರು ನ್ಯಾಯಾಲಯಗಳಲ್ಲಿ ಪ್ರಕರಣಗಳಿಗೆ ವರ್ಷಾನುಗಟ್ಟಲೆ ಓಡಾಡುತ್ತಿದ್ದಾರೆ ಎಂದು ಹೇಳಿದರು.
ಪ್ರತಿ ಸಣ್ಣಪುಟ್ಟ ವಿಚಾರಗಳನ್ನೂ ವ್ಯಾಜ್ಯಗಳನ್ನಾಗಿ ಪರಿವರ್ತಿಸಿಕೊಳ್ಳಬಾರದು. ಸಂಯಮದಿಂದ ಪರಿಸ್ಥಿತಿಗಳನ್ನು ನಿಭಾಯಿಸಿ ಮುಂದೆ ಎದುರಾಗುವ ಸಮಸ್ಯೆಗಳಿಗೆ ಮೂಲದಲ್ಲೇ ಕಡಿವಾಣ ಹಾಕಬೇಕು. ಪ್ರಕರಣಗಳು ದಾಖಲಾಗುವುದರಿಂದ ಅಮೂಲ್ಯವಾದ ಸಮಯ, ಹಣ, ನೆಮ್ಮದಿ ಹಾಳಾಗುತ್ತದೆ. ಜೊತೆಗೆ ನ್ಯಾಯಾಲಯಗಳಲ್ಲೂ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗಿರುವುದರಿಂದ ನ್ಯಾಯಾಲಯಗಳ ಮೇಲೂ ಒತ್ತಡ ಅಧಿಕವಾಗುತ್ತದೆ ಎಂದು ಹೇಳಿದರು.
ಇದರಿಂದ ಪ್ರಕರಣಗಳನ್ನು ಇತ್ಯರ್ಥಪಡಿಸುವುದು ಸಹಜವಾಗಿ ತಡವಾಗುತ್ತದೆ. ಕೆಲವೊಮ್ಮೆ ದೀರ್ಘಕಾಲ ಹಿಡಿಯುತ್ತದೆ. ಇದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ರಾಷ್ಟ್ರೀಯ ಲೋಕ ಅದಾಲತ್ ಆರಂಭಿಸಿದೆ. ಈ ಅದಾಲತ್ ಮೂಲಕ ನ್ಯಾಯಾಲಯದಲ್ಲಿ ಹಾಲಿ ಇರುವ ವಿವಿಧ ಕೆಲವು ಪ್ರಕರಣಗಳು, ವ್ಯಾಜ್ಯಪೂರ್ವ ಪ್ರಕರಣಗಳನ್ನು ವಕೀಲರ ಸಹಕಾರದಲ್ಲಿ ಕಕ್ಷಿದಾರರು ಪರಸ್ಪರ ಸಂಧಾನದೊಂದಿಗೆ ಇತ್ಯರ್ಥಪಡಿಸಲಾಗುತ್ತಿದೆ ಎಂದು ಹೇಳಿದರು.
ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಕಕ್ಷಿದಾರರು ಮುಂದಾಗುವುದರಿಂದ ಪ್ರಕರಣಗಳಿಗೆ ಶೀಘ್ರ ಮುಕ್ತಿ ದೊರೆಯುತ್ತದೆ. ಹಣ, ಸಮಯ ಉಳಿಯುವ ಜೊತೆಗೆ ಪದೇ ಪದೇ ನ್ಯಾಯಾಲಯಕ್ಕೆ ಅಲೆಯುವುದು ತಪ್ಪುತ್ತದೆ ಎಂದರು.
ಜಿಲ್ಲಾ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನ್ಯಾಯಾಧೀಶರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಭಿಲಾಷ್, ವಕೀಲರು, ಕಕ್ಷಿದಾರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.