ADVERTISEMENT

ಶಿಡ್ಲಘಟ್ಟ: ಪಕ್ಷದ ನಿಷ್ಠರಿಗೆ ಮಣೆ ಹಾಕಲು ಒತ್ತಾಯ

ಜಿಲ್ಲೆಯ ವಿವಿಧ ಇಲಾಖೆ, ನಿಗಮಗಳ ನಾಮನಿರ್ದೇಶನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 6:27 IST
Last Updated 6 ಜುಲೈ 2025, 6:27 IST
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಹಾಗೂ ಕುರುಬರ ಸಂಘದ ಜಿಲ್ಲಾಧ್ಯಕ್ಷ ಎ.ನಾಗರಾಜ್, ಮುರಳಿ, ನಾರಾಯಣಸ್ವಾಮಿ, ಮಂಜುನಾಥ್, ಶ್ರೀನಾಥ್, ರಾಮಾಂಜಿ ಹಾಜರಿದ್ದರು
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಹಾಗೂ ಕುರುಬರ ಸಂಘದ ಜಿಲ್ಲಾಧ್ಯಕ್ಷ ಎ.ನಾಗರಾಜ್, ಮುರಳಿ, ನಾರಾಯಣಸ್ವಾಮಿ, ಮಂಜುನಾಥ್, ಶ್ರೀನಾಥ್, ರಾಮಾಂಜಿ ಹಾಜರಿದ್ದರು   

ಶಿಡ್ಲಘಟ್ಟ: ಜಿಲ್ಲೆಯಲ್ಲಿನ ವಿವಿಧ ಇಲಾಖೆ, ನಿಗಮ, ಸ್ಥಳೀಯ ಸಂಸ್ಥೆಗಳಲ್ಲಿನ ನಾಮನಿರ್ದೇಶನ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ನೇಮಿಸಬೇಕು ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಮತ್ತು ಕುರುಬರ ಸಂಘದ ಜಿಲ್ಲಾಧ್ಯಕ್ಷ ಎ. ನಾಗರಾಜ್ ಒತ್ತಾಯಿಸಿದರು. 

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಮಾತನಾಡಿದ ಅವರು, ‘ನಾಮ ನಿರ್ದೇಶನ ಸ್ಥಾನಗಳಿಗೆ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರನ್ನು ಪರಿಗಣಿಸಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಬಹುದೊಡ್ಡ ಪೆಟ್ಟು ಬೀಳಲಿದೆ. ಅಲ್ಲದೆ, ಹಿಂದುಳಿದ ವರ್ಗಗಳ ಕಾರ್ಯಕರ್ತರು ಪಕ್ಷದ ನಾಯಕರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. 

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಯಿತು. ಇದುವರೆಗೂ ಶಿಡ್ಲಘಟ್ಟ ಸೇರಿ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ನಾಮ ನಿರ್ದೇಶನ ಸ್ಥಾನಗಳನ್ನು ಭರ್ತಿ ಮಾಡಿಲ್ಲ ಎಂದು ದೂರಿದರು. 

ADVERTISEMENT

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ನಾಮನಿರ್ದೇಶನಕ್ಕಾಗಿ 3–4 ಬಾರಿ ಪಟ್ಟಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಅವರಿಗೆ ಕೊಡಲಾಗಿದೆ. ಆದರೆ, ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ಅವರ ಬಣಗಳು ಇವೆ ಎಂಬ ನೆಪವೊಡ್ಡಿ ನೇಮಕ ಮಾಡುತ್ತಿಲ್ಲ ಎಂದು ಆರೋಪಿಸಿದರು. 

ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳು ಇಲ್ಲ. ಆದರೆ ನೀವೇ ಬಣಗಳ ನೆಪ ಹೇಳಿ ನಾಮ ನಿರ್ದೇಶಕ ಸ್ಥಾನಗಳ ನೇಮಕಕ್ಕೆ ಅಡ್ಡಿಯಾಗಿದ್ದೀರಿ. ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ನೀವೇ ಬಣಗಳನ್ನು ಸೃಷ್ಟಿ ಮಾಡಿ, ನಮ್ಮ ತಾಲ್ಲೂಕು ಹಿಂದುಳಿಯಲು ಕಾರಣರಾಗಿದ್ದೀರಿ ಎಂದು ಸಚಿವ ಡಾ.ಎಂ.ಸಿ. ಸುಧಾಕರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. 

ಪೌರಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ಮುರಳಿ, ಕೆಪಿಸಿಸಿ ರಾಜ್ಯ ಸಂಚಾಲಕ ಪರಿಶಿಷ್ಟ ಜಾತಿ ಘಟಕದ ನಾರಾಯಣಸ್ವಾಮಿ, ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಮಂಜುನಾಥ್, ಕೆ.ಶ್ರೀನಾಥ್, ರಾಮಾಂಜಿ, ಅಫೀಸ್‌ಉಲ್ಲಾ, ಎಂ.ನಾಗರಾಜ್, ಎಂ. ಮಂಜುನಾಥ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.