
ಚಿಕ್ಕಬಳ್ಳಾಪುರ: ಕರ್ನಾಟಕ ಮಾದರ ಮಹಾಸಭಾ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಮಹಾಸಭಾ ಜಿಲ್ಲಾ ಅಧ್ಯಕ್ಷರಾಗಿ ಪಟ್ರೇನಹಳ್ಳಿ ಕೃಷ್ಣಪ್ಪ ನೇಮಕವಾಗಿದ್ದಾರೆ.
ನಗರದಲ್ಲಿ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಹಾಸಭಾ ರಾಜ್ಯ ನಾಯಕರು ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಪಟ್ರೇನಹಳ್ಳಿ ಕೃಷ್ಣಪ್ಪ, ಜಿಲ್ಲೆಯಲ್ಲಿ ಮಾದಿಗ ಸಮಾಜವು ದೊಡ್ಡ ಸಂಖ್ಯೆಯಲ್ಲಿ ಇದೆ. ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ ಎರಡು ಸಾವಿರ ಮಂದಿಯನ್ನು ಮಹಾಸಭಾ ಸದಸ್ಯರನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ಹಿರಿಯರ ಸಹಕಾರದಲ್ಲಿ ಮಹಾಸಭಾಕ್ಕೆ ಸದಸ್ಯತ್ವ ಮಾಡಿಸಲಾಗುವುದು. ಸಮುದಾಯ ಒಗ್ಗೂಡಿಸಲಾಗುವುದು. ಸಹೋದರ ಸಮುದಾಯಗಳ ಜೊತೆ ಸಾಮಾಜಿಕ ಸಾಮರಸ್ಯ ಸಾಧಿಸಲಾಗುವುದು. ನಮ್ಮ ಸಮಾಜವನ್ನು ಗಟ್ಟಿಗೊಳಿಸುವಲ್ಲಿ ಯುವಕರ ಪಾತ್ರ ಹಿರಿದು. ಈ ದಿಕ್ಕಿನಲ್ಲಿ ಎಲ್ಲರೂ ಒಗ್ಗೂಡಿ ಮುನ್ನಡೆಯಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿಯೇ 10 ಸಾವಿರಕ್ಕೂ ಹೆಚ್ಚು ಸದಸ್ಯತ್ವ ಮಾಡುವ ಗುರಿ ಇದೆ. ಸಮಾಜದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುನ್ನಲೆಗೆ ಬರಬೇಕು. ಈ ದಿಕ್ಕಿನಲ್ಲಿ ಮಹಾಸಭಾ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಮಹಾಸಭಾ ರಾಜ್ಯ ಕಾರ್ಯಕಾರಿ ಸದಸ್ಯ ಶಿವಣ್ಣ ಮಾತನಾಡಿ, ರಾಜ್ಯದಲ್ಲಿ ವಿವಿಧ ಜಾತಿ, ಸಮುದಾಯಗಳು ಸಂಘ ರೂಪಿಸಿಕೊಂಡು ಅಭಿವೃದ್ಧಿ ಹೊಂದುತ್ತಿವೆ. ಪರಿಶಿಷ್ಟ ಜಾತಿಯಲ್ಲಿಯೇ ಮಾದಿಗ ಸಮುದಾಯ ಬಹುಸಂಖ್ಯೆಯಲ್ಲಿದೆ ಎಂದು ಹೇಳಿದರು.
ಸಮುದಾಯದ 18 ವರ್ಷ ಮೇಲ್ಪಟ್ಟವರು ಸದಸ್ಯರಾಗಬಹುದು. ಸದಸ್ಯತ್ವದ ವಿಚಾರದಲ್ಲಿ ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಮಹಾಸಭಾ ಮೊದಲ ಸ್ಥಾನದಲ್ಲಿ ಇದೆ. ಮಾದಿಗ ಸಮಾಜ ಮುಖ್ಯವಾಹಿನಿಗೆ ಬರಬೇಕು ಎನ್ನುವ ದೃಷ್ಟಿಯಿಂದ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಮಾಜಿ ಶಾಸಕಿ ಅನಸೂಯಮ್ಮ, ಮುಖಂಡರಾದ ತಿರುಮಲಪ್ಪ, ಕಮಲಮ್ಮ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಪದಾಧಿಕಾರಿಗಳು
ಅಧ್ಯಕ್ಷರಾಗಿ ಪಟ್ರೇನಹಳ್ಳಿ ಕೃಷ್ಣಪ್ಪ ಉಪಾಧ್ಯಕ್ಷರಾಗಿ ಮಾದನಹಳ್ಳಿ ಮುನಿಯಪ್ಪ ಕಾರ್ಯದರ್ಶಿಯಾಗಿ ಭಕ್ತರಹಳ್ಳಿ ಬಿ.ಇ.ವಿಶ್ವನಾಥ್ ಖಜಾಂಚಿಯಾಗಿ ಹೊಸಹುಡ್ಯ ನಾಗಪ್ಪ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಮಲಮ್ಮ ಸಿ.ಎನ್.ಜಯರಾಮ್ ಟಿ.ನಾರಾಯಣಸ್ವಾಮಿ ಪೂಜಪ್ಪ ಸಿ.ಎನ್.ಮುರಳಿಮೋಹನ್ ವಿಶೇಷ ಆಹ್ವಾನಿತರಾಗಿ ಅನಸೂಯಮ್ಮ ನಟರಾಜ್ ಕೃಷ್ಣಮೂರ್ತಿ ವೆಂಕಟೇಶಪ್ಪ ಬಿ.ವಿ ವೆಂಕಟರವಣಪ್ಪ ಸುಬ್ಬರಾಯಪ್ಪ ನೇಮಕವಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.