ADVERTISEMENT

ಶಿಡ್ಲಘಟ್ಟ | ಮದ್ದೂರು ಘಟನೆಗೆ ಆಕ್ರೋಶ: ವಿಎಚ್‌ಪಿ, ಬಜರಂಗದಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 5:04 IST
Last Updated 16 ಸೆಪ್ಟೆಂಬರ್ 2025, 5:04 IST
ಶಿಡ್ಲಘಟ್ಟದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ಪದಾಧಿಕಾರಿಗಳು ನಗರದ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಗಗನ ಸಿಂಧು ಅವರಿಗೆ ಮನವಿ ಸಲ್ಲಿಸಿದರು
ಶಿಡ್ಲಘಟ್ಟದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ಪದಾಧಿಕಾರಿಗಳು ನಗರದ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಗಗನ ಸಿಂಧು ಅವರಿಗೆ ಮನವಿ ಸಲ್ಲಿಸಿದರು   

ಶಿಡ್ಲಘಟ್ಟ: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಮೆರವಣಿಗೆಯಲ್ಲಿ ಭಾಗವಹಿಸಿದವರ ಮೇಲೆ ಎಂಜಲು ಉಗಿದು, ಕಲ್ಲು ಎಸೆದವರನ್ನು ಕೂಡಲೇ ಬಂಧಿಸಬೇಕು. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಚೆಲುವರಾಜ್ ಒತ್ತಾಯಿಸಿದರು. 

ಮದ್ದೂರು ಘಟನೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಪದಾಧಿಕಾರಿಗಳು ಸೋಮವಾರ ನಗರದ ತಾಲ್ಲೂಕು ಕಚೇರಿ ಮಂಭಾಗ ಪ್ರತಿಭಟನೆ ನಡೆಸಿದರು. 

ಗೌರಿ ಮತ್ತು ಗಣೇಶ ಹಬ್ಬವು ಹಿಂದೂಗಳ ಭಾವನಾತ್ಮಕ ಹಬ್ಬ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ದೇಶದ ಜನರನ್ನು ಒಗ್ಗೂಡಿಸಿ ಸಂಘಟಿಸಲು ಬಾಲಗಂಗಾಧರ ತಿಲಕ್ ಅವರು ಗಣೇಶ ಹಬ್ಬವನ್ನು ಸಾರ್ವಜನಿಕ ಹಬ್ಬವಾಗಿ ಪರಿವರ್ತಿಸಿದರು. ಅಂದಿನಿಂದ ಇಂದಿನವರೆಗೆ ಜನರು ಗಣೇಶ ಹಬ್ಬವನ್ನು ವಿಜೃಂಭಣೆಯಿಮದ ಆಚರಿಸುತ್ತಾ ಬಂದಿದ್ದಾರೆ. ಇಂತಹ ಹಬ್ಬಕ್ಕೆ ರಾಜ್ಯ ಸರ್ಕಾರವು ನಿಯಮಗಳ ಹೆಸರಿನಲ್ಲಿ ವಿಘ್ನಗಳನ್ನು ಉಂಟು ಮಾಡುತ್ತಿರುವುದು ಸರಿಯಲ್ಲ ಎಂದರು.

‘ನಮ್ಮ ಹಿಂದೂ ಧರ್ಮ, ಧಾರ್ಮಿಕ ಕೇಂದ್ರ, ಆಚಾರ, ಸಂಪ್ರದಾಯಗಳ ಮೇಲೆ ಕೆಲವು ಕಿಡಿಗೇಡಿಗಳು ವಿನಾಕಾರಣ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುವುದೇ ಕಾಯಕ ಮಾಡಿಕೊಂಡಿದೆ’ ಎಂದು ಪ್ರತಿಭಟನಕಾರರು ದೂರಿದರು. 

ಇಂಥ ಕಿಡಿಗೇಡಿಗಳಿಂದ ಧರ್ಮಗಳ ಮಧ್ಯೆ ಸಾಮರಸ್ಯದ ಬದಲಿಗೆ ವೈಷಮ್ಯ ಹೆಚ್ಚುತ್ತಿದೆ. ಅಭಿವೃದ್ಧಿ ಮತ್ತು ಮಾನವ ಕುಲದ ಪ್ರಗತಿಗೂ ಮಾರಕವಾಗುತ್ತಿದೆ. ಹೀಗಾಗಿ, ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ತಹಶೀಲ್ದಾರ್‌ ಗಗನ ಸಿಂಧೂ ಅವರಿಗೆ ಮನವಿ ಸಲ್ಲಿಸಿದರು. 

ಬಜರಂಗದಳದ ತಾಲ್ಲೂಕು ಸಂಯೋಜಕ ವೆಂಕೋಬರಾವ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಚೆಲುವರಾಜ್, ಸಹಕಾರ್ಯದರ್ಶಿ ನರೇಶ್‌ಯಾದವ್, ಡಿ.ಆರ್.ನಾರಾಯಣಸ್ವಾಮಿ, ಮಹೇಶ್, ರಮೇಶ್, ಜಯಂತಿಗ್ರಾಮ ನಾರಾಯಣಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.