ADVERTISEMENT

ಜು.7 ರಂದು ಮಾದಿಗರ ಆತ್ಮಗೌರವ ಜಾತ್ರೆ

ಮಾದಿಗ ದಂಡೋರ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿಗೆ ರಜತ ಮಹೋತ್ಸವದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 16:33 IST
Last Updated 27 ಜೂನ್ 2019, 16:33 IST

ಚಿಕ್ಕಬಳ್ಳಾಪುರ: ‘ಮಾದಿಗ ದಂಡೋರ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ 25 ವರ್ಷ ಪೂರೈಸಿದ ಪ್ರಯುಕ್ತ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಈದುಮುಡಿ ಗ್ರಾಮದಲ್ಲಿ ಜುಲೈ 7 ರಂದು 25ನೇ ವಾರ್ಷಿಕೋತ್ಸವ ಅಂಗವಾಗಿ ಮಾದಿಗರ ಆತ್ಮಗೌರವ ಜಾತ್ರೆ ಹಾಗೂ ರಜತ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಸಮಿತಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜು ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಶೋಷಿತ ಸಮುದಾಯವಾದ ಮಾದಿಗರಿಗೆ ಸಾಮಾಜಿಕ ನ್ಯಾಯ ಒದಗಿಸುವ ದೃಷ್ಟಿಯಿಂದ ಆರಂಭಗೊಂಡ ಸಮಿತಿಯು ನಿರಂತರ ಹೋರಾಟಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯುತ್ತ ಬಂದಿದೆ’ ಎಂದು ಹೇಳಿದರು.

‘ಬಹು ದೊಡ್ಡ ಜನಸಂಖ್ಯೆ ಹೊಂದಿದರೂ ಸಮುದಾಯ ಇಂದಿಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿನ್ನಡೆ ಅನುಭವಿಸಿರುವುದು ದುರಂತ. ಇದಕ್ಕಾಗಿ ಸಮಿತಿಯಿಂದ ಅನೇಕ ಹೋರಾಟ, ಚಳವಳಿಗಳನ್ನು ರೂಪಿಸಿದ್ದು, ಸಮುದಾಯದ ನಾನಾ ಬೇಡಿಕೆಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಮಾದಿಗ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಕಲ್ಪಿಸಬೇಕು. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯ ಶಿಫಾರಸುಗಳನ್ನು ಜಾರಿ ಮಾಡಬೇಕು. ಈ ವಿಚಾರದಲ್ಲಿ ಸರ್ಕಾರ ಮೀನಾಮೇಷ ಎಣಿಸಿದರೆ ರಾಜ್ಯದಾದ್ಯಂತ ಹೋರಾಟ ರೂಪಿಸಲಾಗುವುದು’ ಎಂದು ಹೇಳಿದರು.

‘ಜುಲೈ 7 ರಂದು ನಡೆಯಲಿರುವ ಸಮಿತಿಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸಮುದಾಯದ ರಾಷ್ಟ್ರೀಯ ನಾಯಕರಾದ ಮಂದಕೃಷ್ಣ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಜಿಲ್ಲೆಯ ಸಮುದಾಯದ ಬಂಧುಗಳು, ಹೋರಾಟಗಾರರು, ಚಿಂತಕರು, ಮುಖಂಡರು ಭಾಗವಹಿಸಬೇಕು. ಜಿಲ್ಲೆಯಿಂದ ಸುಮಾರು 1,000 ಜನ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿ ಮಹಿಳಾ ಘಟಕದ ರಾಜ್ಯ ಘಟಕದ ಅಧ್ಯಕ್ಷೆ ಸಿ.ವಿ.ವೀಣಾ, ಉಪಾಧ್ಯಕ್ಷೆ ಧನಲಕ್ಷ್ಮೀ, ಮುಖಂಡರಾದ ರಾಮಕೃಷ್ಣಪ್ಪ, ಶಿವಪ್ಪ, ನರಸಿಂಹಪ್ಪ, ಕೃಷ್ಣಪ್ಪ, ಮಧುಕುಮಾರ್, ಮುನಿಯಪ್ಪ, ರಮಣ್ ಅಖಿಲೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.