
ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿಯೂ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಸ್ಥಗಿತವಾಗಿರುವ ರಾಗಿ ಮತ್ತು ಮೆಕ್ಕೆಜೋಳ ನೋಂದಣಿ ಕಾರ್ಯವನ್ನು ಮತ್ತೆ ಆರಂಭಿಸಬೇಕು. ಪ್ರತಿ ಹೋಬಳಿಯಲ್ಲಿಯೂ ನೋಂದಣಿ ಕೇಂದ್ರ ತೆರೆಯಬೇಕು–ಹೀಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ನಗರದ ಜಿಲ್ಲಾಡಳಿತ ಭವನದ ಎದುರು ಅಖಿಲ ಕರ್ನಾಟಕ ರೈತ ಸಂಘಟನೆ (ಎಕೆಆರ್‌ಎಸ್) ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾ ಗ್ರಂಥಾಲಯದ ಮುಂಭಾಗ ಸಮಾವೇಶಗೊಂಡ ರೈತರು ಮತ್ತು ಸಂಘಟನೆ ಸದಸ್ಯರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಜಿಲ್ಲಾಧಿಕಾರಿ ಕಚೇರಿಗೆ ಕಾಲ್ನಡಿಗೆ ಜಾಥಾ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿಯ ಮುಖ್ಯದ್ವಾರ ಪ್ರವೇಶಿಸಲು ಮುಂದಾದರು. ಆಗ ಪೊಲೀಸರು ರೈತರನ್ನು ತಡೆದರು. ಭವನದ ಮೆಟ್ಟಿಲುಗಳ ಮೇಲೆ ಕುಳಿತು ರೈತರು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು.
ರೈತರು ಬೆಳೆದಿರುವ ಮೆಕ್ಕೆಜೋಳವನ್ನು ಯಾವುದೇ ಮಿತಿಯ ನಿರ್ಬಂಧವಿಲ್ಲದೆ ಸಂಪೂರ್ಣವಾಗಿ ಸರ್ಕಾರವೇ ಖರೀದಿಸಬೇಕು. ಬೆಂಬಲ ಬೆಲೆಯ ದರವನ್ನು ₹2,400ರಿಂದ ₹ 3,500 ನಿಗದಿಪಡಿಸಬೇಕು. ಈಗಾಗಲೇ ಜೋಳ ಮಾರಾಟ ಮಾಡಿರುವ ರೈತರಿಗೆ ಹಣ ನೀಡಬೇಕು ಎಂದು ಒತ್ತಾಯಿಸಿದರು.
ಮೆಕ್ಕೆಜೋಳ ಖರೀದಿ ಪ್ರಕ್ರಿಯೆಯ ಅವೈಜ್ಞಾನಿಕ ನಿಯಮಗಳನ್ನು ಸರಳೀಕರಿಸಬೇಕು. ಕೇಂದ್ರ ಸರ್ಕಾರವು ವಿದೇಶದಿಂದ ಮೆಕ್ಕೆಜೋಳ ಆಮದು ಮಾಡಿಕೊಳ್ಳುತ್ತಿದ್ದು ಇದನ್ನು ಕೈ ಬಿಡಬೇಕು. ಎಪಿಎಂಸಿಗಳಲ್ಲಿ ನಡೆಯುತ್ತಿರುವ ರೈತರ ಸುಲಿಗೆ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಎಕೆಆರ್‌ಎಸ್ ಜಿಲ್ಲಾ ಸಂಚಾಲಕ ಮಂಜುನಾಥ್ ರೆಡ್ಡಿ, ನರಸಿಂಹಪ್ಪ, ಹನುಮಂತರೆಡ್ಡಿ, ಲಕ್ಷ್ಮಿನಾರಾಯಣ, ಹೇಮಚಂದ್ರ, ಶ್ರೀನಿವಾಸ್, ಗೋಪಾಲ್ ರೆಡ್ಡಿ, ರಮೇಶ್ ರೆಡ್ಡಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.