ADVERTISEMENT

ಮಲೇರಿಯಾ ಮುಕ್ತಿಗೆ ವೈಯಕ್ತಿಕ ಜವಾಬ್ದಾರಿ ಅಗತ್ಯ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಬಿ.ಎಂ. ರವಿಶಂಕರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 19:46 IST
Last Updated 25 ಏಪ್ರಿಲ್ 2019, 19:46 IST

ಚಿಕ್ಕಬಳ್ಳಾಪುರ: ‘ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ’ ಎಂಬ ಘೋಷವಾಕ್ಯದೊಂದಿಗೆ ವಿಶ್ವದಾದ್ಯಂತ ಮಲೇರಿಯಾ ನಿಯಂತ್ರಣ ಹಾಗೂ ಮಲೇರಿಯಾ ಮುಕ್ತಗೊಳಿಸುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಬಿ.ಎಂ. ರವಿಶಂಕರ್ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಲ್ಲಿ ಮಲೇರಿಯಾ ಜ್ವರ ಬಂದ ಕೂಡಲೇ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜ್ವರವು ಹೆಚ್ಚಾಗಿ ಹೆಣ್ಣು ಸೊಳ್ಳೆಯ ಸೊಂಕಿನಿಂದ ಹರಡುತ್ತದೆ. ಮೊದಲಿಗೆ ವಿಪರೀತ ಜ್ವರ, ವಾಂತಿ, ಚಳಿ, ತಲೆ ಸುತ್ತು, ರಕ್ತ ಹೀನತೆ ರೋಗದ ಲಕ್ಷಣವಾಗಿವೆ. ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದರು.

ನಾವು ವೈಯಕ್ತಿಕವಾದ ಕೆಲವು ಜವಾಬ್ದಾರಿಗಳಿಂದ ಮಲೇರಿಯಾ ತಡೆಯಬಹುದು. ವ್ಯಕ್ತಿಗೆ ಹೆಣ್ಣು ಅನಾಫಿಲೀಸ್ ಸೊಳ್ಳೆ ಕಚ್ಚಿದಾಗ ಮಲೇರಿಯಾ ಜೀವಾಣುಗಳು ಪ್ರವೇಶಿಸಿ ಸಂಖ್ಯಾಭಿವೃದ್ಧಿ ಹೊಂದುತ್ತವೆ. ಆ ಹೆಣ್ಣು ಸೊಳ್ಳೆ ಮತ್ತೊಬ್ಬ ಆರೋಗ್ಯವಂತನಿಗೆ ಕಚ್ಚಿದಾಗ ಮಲೇರಿಯಾ ಜೀವಾಣುಗಳು ಆರೋಗ್ಯವಂತನ ಶರೀರವನ್ನು ಪ್ರವೇಶಿಸಿ ಕೆಲವು ದಿನಗಳ ನಂತರ ಆ ವ್ಯಕ್ತಿಯೂ ರೋಗಕ್ಕೆ ತುತ್ತಾಗುತ್ತಾನೆ ಎಂದು ವಿವರಿಸಿದರು.

ADVERTISEMENT

ಮಲೇರಿಯಾ ಹರಡದಂತೆ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳಿಗೆ ಸಾರ್ಜನಿಕರು ಸಹಕಾರ ನೀಡಬೇಕು. ನಿಮ್ಮ ಮನೆ ಮತ್ತು ಸುತ್ತಲಿನ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಮನೆಯ ಸುತ್ತಮುತ್ತ ಕಸ ಹಾಗೂ ಗಿಡಗಂಟಿಗಳನ್ನು ನಾಶಮಾಡಿ ಮನೆಯ ಬ್ಯಾರಲ್, ಡ್ರಂ, ತೊಟ್ಟಿಗಳು, ತಾಜ್ಯ ವಸ್ತುಗಳಾದ ಎಳನೀರು ಚಿಪ್ಪು, ಬಾಟಲಿ, ಟೈರ್, ಮಡಕೆ ಮುಂತಾದವುಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಬೇಕು.

ಪ್ರತಿ ದಿನ ಸಂಜೆಯ ಬೇವಿನ ಸೊಪ್ಪ ಹೊಗೆ ಹಾಕುವ ಮೂಲಕ ಸೊಳ್ಳೆ ನಿಯಂತ್ರಣ ಕೈಗೊಳ್ಳಬಹುದು. ವಾರಕ್ಕೆ ಒಮ್ಮೆ ನೀರಿನ ತಾಣಗಳನ್ನು ಸ್ವಚ್ಛಗೊಳಿಸಿ ಬಿಸಿಲಿನಲ್ಲಿ ಒಣಗಿಸಿ ನಂತರ ನೀರು ತುಂಬಿಕೊಂಡು ಸ್ವಯಂರಕ್ಷಣ ವಿಧಾನಗಳನ್ನು ಅನುಸರಿಸಬೇಕು ಎಂದು ನುಡಿದರು.

ಜಿಲ್ಲೆಯಲ್ಲಿ 2018ರಲ್ಲಿ ಮಲೇರಿಯಾ ಪ್ರಕರಣಗಳು 18 ಕಂಡುಬಂದಿವೆ. ಪ್ರಸ್ತುತ ಸಾಲಿನ 2019ರಲ್ಲಿ 2 ಮಲೇರಿಯಾ ಪ್ರಕರಣಗಳು ಕಂಡುಬಂದಿವೆ. ಮುಂಬರುವ 2025ರ ಒಳಗೆ ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಲು ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.