ADVERTISEMENT

ಮನೆಗೊಂದು ಗ್ರಂಥಾಲಯ; ಜ್ಞಾನಾಧಾರಿತ ಸಮಾಜ ನಿರ್ಮಾಣ: ಮಾನಸ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 6:57 IST
Last Updated 1 ಫೆಬ್ರುವರಿ 2026, 6:57 IST
ಚಿಕ್ಕಬಳ್ಳಾಪುರದಲ್ಲಿ ಪುಸ್ತಕ ಪ್ರಾಧಿಕಾರವು ಹಮ್ಮಿಕೊಂಡಿದ್ದ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು
ಚಿಕ್ಕಬಳ್ಳಾಪುರದಲ್ಲಿ ಪುಸ್ತಕ ಪ್ರಾಧಿಕಾರವು ಹಮ್ಮಿಕೊಂಡಿದ್ದ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು   

ಚಿಕ್ಕಬಳ್ಳಾಪುರ: ಪ್ರತಿಯೊಂದು ಮನೆಯಲ್ಲಿ ಪುಸ್ತಕಗಳನ್ನು ಇರಿಸಿ ಕುಟುಂಬದ ಸದಸ್ಯರು ಹಾಗೂ ಬಂಧುಗಳು ಓದುವ ಹವ್ಯಾಸ ರೂಢಿಸಿಕೊಂಡರೆ ಜ್ಞಾನಾಧಾರಿತ ಸಮಾಜ ನಿರ್ಮಾಣವಾಗುತ್ತದೆ ಎಂದು ರಾಜ್ಯ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಪುಸ್ತಕ ಪ್ರಾಧಿಕಾರವು ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನರಲ್ಲಿ ಪುಸ್ತಕ ಸಂಸ್ಕೃತಿ ಓದುವ ಸಂಸ್ಕೃತಿ ಬೆಳೆಸಬೇಕು. ಓದುವ ಸಮಾಜ ನಿರ್ಮಾಣದ ಆಶಯ ಹೊಂದಿರುವ ಪುಸ್ತಕ ಪ್ರಾಧಿಕಾರವು ಪ್ರತಿ ಜಿಲ್ಲೆಯಲ್ಲಿ ಮನೆಗೊಂದು ಗ್ರಂಥಾಲಯ ನಿರ್ಮಾಣ ಕಾರ್ಯಕ್ರಮದ ಆಯೋಜಿಸುತ್ತಿದೆ. ಇದರ ಅಡಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪುಸ್ತಕ ಓದುವ ಹವ್ಯಾಸಿಗಳ ಜಾಗೃತಿ ಸಮಿತಿ ರಚಿಸಿ ಜಿಲ್ಲೆಯಾದ್ಯಂತ ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.

ADVERTISEMENT

ಮುಖ್ಯಮಂತ್ರಿ ಅವರ ಮನೆಯಿಂದ ಆರಂಭಿಸಿ ಈಗಾಗಲೇ ಕೆಲವು ಸಚಿವರು, ಶಾಸಕರು ಹಾಗೂ ಲೇಖಕರ ಮನೆಗಳಲ್ಲಿ ಗ್ರಂಥಾಲಯ ನಿರ್ಮಿಸಲಾಗಿದೆ. ಇದೇ ರೀತಿ ಎಲ್ಲಾ ಜಿಲ್ಲೆಗಳು ಹಾಗೂ ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂಘ ಸಂಸ್ಥೆಗಳ  ಸಹಕಾರದಲ್ಲಿ  ಗ್ರಂಥಾಲಯ ನಿರ್ಮಿಸಿ ಓದುಗರ ಸಂಖ್ಯೆ ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಆಶಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ಅಧ್ಯಕ್ಷ ಪ್ರೊ. ಕೋಡಿರಂಗಪ್ಪ, ಗ್ರಂಥಾಲಯಗಳು ದೇಶದ ಬೌದ್ಧಿಕ, ಸಾಹಿತ್ಯ ,ಶೈಕ್ಷಣಿಕ, ಸಾಂಸ್ಕೃತಿಕ ಮತ್ತು  ವೈಚಾರಿಕ ಉನ್ನತಿಯ ಕೇಂದ್ರಗಳಾಗಿವೆ. ಓದುವ ಸಮಾಜ ನಿರ್ಮಾಣಕ್ಕೆ ಬುನಾದಿಗಳಾಗುತ್ತವೆ ಎಂದರು.

ಶಾಲಾ ಹಂತದಿಂದಲೇ ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸವುಳ್ಳವರು ನಾಳಿನ ಸಮರ್ಥ ನಾಯಕರು ಹಾಗೂ ಅಧಿಕಾರಿಗಳಾಗುತ್ತಾರೆ. ಉತ್ತಮ ಕೃತಿಗಳನ್ನು ನಿರಂತರವಾಗಿ ಓದುವುದರಿಂದ ಜಗತ್ತಿನಲ್ಲಿ ಅಸಂಖ್ಯಾತ ಜನ ನಾಯಕರು ರೂಪುಗೊಂಡಿದ್ದಾರೆ. ಸರ್ಕಾರದ ಮನೆಗೊಂದು ಗ್ರಂಥಾಲಯ ನಿರ್ಮಾಣ ಯೋಜನೆ ಈ ಕಾಲದ ಅಗತ್ಯವಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬರು ಓದಿನ ಪ್ರಾಮುಖ್ಯ ಉತ್ತಮ ಕೃತಿಗಳ ಮಹತ್ವ ಮತ್ತು ಓದುವ ಕ್ರಮಗಳು ಹಾಗೂ ವಿವಿಧ ರೀತಿಯ ಓದುವ ,ಗ್ರಹಿಸುವ ತಂತ್ರಗಳನ್ನು ಅರಿಯಬೇಕು. ಆಗ ಮಾತ್ರ ಓದಿನ ಬಗ್ಗೆ ಅಭಿಮಾನ ಮೂಡುತ್ತದೆ. ಶ್ರೇಷ್ಠ ಕೃತಿಗಳನ್ನು ಓದುವುದರಿಂದ ಜ್ಞಾನಾರ್ಜನೆ  ಜೊತೆಗೆ ವ್ಯಕ್ತಿತ್ವ ವಿಕಸನ ಆಗುತ್ತದೆ. ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಶಕ್ತಿ ಬೆಳೆಯುತ್ತದೆ ಎಂದು ಕಿವಿಮಾತು ಹೇಳಿದರು.

ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಶಾಲಾ-ಕಾಲೇಜುಗಳು ಮಕ್ಕಳಿಗೆ ಯಾವ ರೀತಿಯ ಪಠ್ಯಕ್ರಮ ಆಧಾರಿತ ಪುಸ್ತಕಗಳನ್ನು ರೂಪಿಸಿಕೊಡುತ್ತವೆ ಎಂಬುದರ ಮೇಲೆ ಸಮಾಜ ಸಾಗುತ್ತದೆ. ಆದ್ದರಿಂದ ಪಠ್ಯಪುಸ್ತಕ ಆಧಾರಿತ ಪುಸ್ತಕಗಳು, ದಿನಪತ್ರಿಕೆಗಳು ನಿಯತಕಾಲಿಕೆಗಳನ್ನು ರೂಪಿಸಿ ಜನರಿಗೆ ಮುಟ್ಟಿಸುವ ಕೆಲಸವನ್ನು ಅತ್ಯಂತ ಕಾಳಜಿ ಬದ್ಧತೆ ಹಾಗೂ ದೂರ ದೃಷ್ಟಿಯಿಂದ ರೂಪಿಸಬೇಕು ಎಂದು ಸಲಹೆ ನೀಡಿದರು. 

ಎಸ್. ಎನ್ ಅಮೃತ್ ಕುಮಾರ್, ಯಲುವಹಳ್ಳಿ ಸೊಣ್ಣೇಗೌಡ, ಗಿರಿಧರ್ ವೈ.ಇ, ಎನ್ .ವಿ ಶ್ರೀನಿವಾಸ್, ಎಚ್.ಆರ್ ಸುಬ್ರಹ್ಮಣ್ಯ, ತ್ಯಾಗರಾಜ ಎ.ಎಂ, ಕೆ.ಎಂ ರೆಡ್ಡಪ್ಪ, ಪ್ರಮೀಳಾ ಬಿ.ಎಂ, ಮೀರಾ ಎಸ್., ಮಂಜುಳಾ ಬಿ.ಸಿ ಅವರ ಸಮಿತಿ ರಚಿಸಲಾಯಿತು.

ಪುಸ್ತಕ ಪ್ರಾಧಿಕಾರದ ಅಧಿಕಾರಿ ಶ್ರೀನಿವಾಸ್ ಕರಿಯಪ್ಪ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಚೆನ್ನಮಲ್ಲಿಕಾರ್ಜುನಯ್ಯ ಸತೀಶ್ ಮುನಿನಾರಾಯಣಪ್ಪ ಭಾಗವಹಿಸಿದ್ದರು. 

ಉದ್ಘಾಟನೆ ಅಂಗವಾಗಿ ಕೋಡಿರಂಗಪ್ಪ ಹಾಗೂ ಕೆ.ಎಂ ರೆಡ್ಡಪ್ಪ ಅವರ ಮನೆಗಳಲ್ಲೂ ಮನೆಗೊಂದು ಗ್ರಂಥಾಲಯಕ್ಕೆ ಚಾಲನೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.