
ಚಿಂತಾಮಣಿ: ನಗರದ ಹೊರವಲಯದ ಮಾಡಿಕೆರೆಯ ಮಾವು ಕೊಯ್ಲೋತ್ತರ ನಿರ್ವಹಣಾ ಕೇಂದ್ರದಲ್ಲಿ ಮಂಗಳವಾರ ‘ಮಾವು ಬೆಳೆಯ ಸಮಗ್ರ ಪೋಷಕಾಂಶ, ಕೀಟ ಮತ್ತು ರೋಗ ನಿಯಂತ್ರಣ ಹಾಗೂ ರಫ್ತು ಮಾರುಕಟ್ಟೆಗೆ ಉತ್ತೇಜನ’ ಕುರಿತು ಮಾವು ಬೆಳೆಗಾರರಿಗೆ ತರಬೇತಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಯಿತು.
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಅಪೆಡಾ ಹಾಗೂ ತೋಟಗಾರಿಕೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘ಮಾಡಿಕೆರೆಯ ಮಾವು ಕೊಯ್ಲೋತ್ತರ ನಿರ್ವಹಣಾ ಕೇಂದ್ರವನ್ನು 2011ರಲ್ಲಿ ಸ್ಥಾಪಿಸಲಾಗಿದೆ. ಈ ಕೇಂದ್ರದಲ್ಲಿ ಐರೋಪ್ಯ ರಾಷ್ಟ್ರಗಳಿಗೆ ಮಾವು ರಫ್ತು ಮಾಡಲು ಅವಕಾಶವಿರುವ ಬಿಸಿನೀರಿನ ಉಪಚಾರ ಘಟಕ, ಸುಸಜ್ಜಿತವಾದ ಹಣ್ಣು ಮಾಗಿಸುವ ಘಟಕಗಳು ಮತ್ತು ತರಬೇತಿ ಕೇಂದ್ರ ತೆರೆಯಲಾಗಿದೆ. ಈ ಎಲ್ಲ ವ್ಯವಸ್ಥೆಗಳನ್ನು ರೈತರು ಮತ್ತು ಮಾವು ಬೆಳೆಗಾರರು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.
ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಡಾ. ಬಿ.ಸಿ. ಮುದ್ದುಗಂಗಾಧರ್ ಮಾತನಾಡಿ, ತರಬೇತಿಯಲ್ಲಿ ಹಾಜರಿದ್ದ ಎಲ್ಲ ಅಧಿಕಾರಿಗಳು ಹಾಗೂ ಮಾವು ಬೆಳೆಗಾರರು ಇಲ್ಲಿ ಪಡೆದ ಮಾವು ಬೆಳೆಯುವ ವಿಧಾನದ ತಾಂತ್ರಿಕ ಮಾಹಿತಿಯನ್ನು ಪ್ರಾಯೋಗಿಕವಾಗಿ ತಮ್ಮ ತಾಕುಗಳಲ್ಲಿ ಅಳವಡಿಸಿಕೊಳ್ಳಬೇಕು. ಜೊತೆಗೆ ಇತರ ರೈತರಿಗೂ ಈ ಮಾಹಿತಿ ತಿಳಿಸಬೇಕು. ಈ ಮೂಲಕ ರೈತರನ್ನು ಪ್ರೋತ್ಸಾಹಿಸಬೇಕು ಎಂದರು.
ನಿವೃತ್ತ ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ, ಸಹ ಪ್ರಾಧ್ಯಾಪಕ ಡಾ. ಅಶ್ವತ್ಥನಾರಾಯಣ, ಉಪ ನಿರ್ದೇಶಕಿ ಲಾವಣ್ಯ, ಡಾ.ಸಿ.ಜಿ.ನಾಗರಾಜ್, ವ್ಯವಸ್ಥಾಪಕಿ ಮಧುಮತಿ ಅಂಡ್ರಿವ್ (ಅಪೆಡಾ) ಸಂಪನ್ಮೂಲ ವಕ್ತಿಗಳಾಗಿ ಮಾತನಾಡಿ, ಮಾವು ಬೆಳೆಯ ಗುಣಮಟ್ಟದ ಉತ್ಪಾದನೆ, ಕೀಟ ರೋಗ ನಿಯಂತ್ರಣ, ರಫ್ತು ಉಪಚಾರ ವಿಷಯಗಳ ಕುರಿತು ತಿಳಿಸಿಕೊಟ್ಟರು.
ವ್ಯವಸ್ಥಾಪಕ ನಿರ್ದೇಶಕ ಟಿ.ಆರ್.ವೇದಮೂರ್ತಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಗಾಯತ್ರಿ, ರೈತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲಾ ತಾಲ್ಲೂಕಿನ 300ಕ್ಕೂ ಹೆಚ್ಚು ಮಾವು ಬೆಳೆಗಾರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.