
ಚೇಳೂರು: ತಾಲ್ಲೂಕಿನಾದ್ಯಂತ ಈ ಬಾರಿ ಮಾವಿನ ಮರಗಳು ಮೈತುಂಬಾ ಹೂ ಬಿಟ್ಟು ನಳನಳಿಸುತ್ತಿವೆ. ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಮಾವು ಈ ಬಾರಿ ಬಂಪರ್ ಇಳುವರಿ ನೀಡುವ ಮುನ್ಸೂಚನೆ ನೀಡಿದೆ.
ಹೀಗಿದ್ದರೂ ರೈತರಲ್ಲಿ ಮಾತ್ರ ಸಂತಸಕ್ಕಿಂತ ಆತಂಕವೇ ಹೆಚ್ಚಾಗಿದೆ. ಏರುತ್ತಿರುವ ತಾಪಮಾನ, ರೋಗಬಾಧೆ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
ಚೇಳೂರು ಸುತ್ತಮುತ್ತಲಿನ ಗ್ರಾಮಗಳಾದ ಚಾಕವೇಲು, ರಾಶ್ಚೆರುವು, ನಲ್ಲಗುಟಪಲ್ಲಿ ಮತ್ತು ಬುರಡಗುಂಟೆ ಭಾಗದ ಮಾವಿನ ತೋಪುಗಳಲ್ಲಿ ಎಲ್ಲೆಡೆ ಹೂವಿನ ಘಮಲು ಹರಡಿದೆ. ಕಳೆದ ಎರಡು ವರ್ಷಗಳಿಂದ ಅಷ್ಟಾಗಿ ಫಸಲು ಬಾರದ ಕಾರಣ ಕಂಗಾಲಾಗಿದ್ದ ರೈತರಿಗೆ ಈ ಬಾರಿ ಮರಗಳು ಮೈತುಂಬಾ ಹೂ ಬಿಟ್ಟಿರುವುದು ಆಶಾದಾಯಕವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತಾಲ್ಲೂಕಿನ ಮಾವಿನ ತೋಪುಗಳಲ್ಲಿ ಹೂವಿನ ಪ್ರಮಾಣ ಹೆಚ್ಚಾಗಿದೆ. ಹವಾಮಾನ ಏರುಪೇರಿನ ನಡುವೆಯೂ ಮಾವು ಸಮೃದ್ಧವಾಗಿ ಹೂ ಬಿಟ್ಟಿದೆ. ಇದು ರೈತರಲ್ಲಿ ಸಂತಸ ಮೂಡಿಸಿದೆ. ಸರಿಯಾದ ಸಮಯಕ್ಕೆ ಮಳೆ ಮತ್ತು ಪೂರಕ ವಾತಾವರಣವಿದ್ದರೆ ಬಂಪರ್ ಇಳುವರಿ ಪಡೆಯಬಹುದು ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ ರೈತರು.
ಫೆಬ್ರವರಿ ತಿಂಗಳಲ್ಲೇ ತಾಪಮಾನ ಗಣನೀಯವಾಗಿ ಏರುತ್ತಿರುವುದು ಹೂವು ಉದುರಲು ಕಾರಣವಾಗುತ್ತಿದೆ. ಬಿಸಿ ಗಾಳಿಯ ಹೊಡೆತಕ್ಕೆ ಎಳೆಯ ಮಿಡಿಗಳು ಕಪ್ಪಾಗಿ ಉದುರುವ ಭೀತಿ ಎದುರಾಗಿದೆ.
ಜೊತೆಗೆ ಹೂವಿಗೆ ಜಿಗಿ ರೋಗ ಮತ್ತು ಬೂದಿ ರೋಗದ ಭೀತಿ ಎದುರಾಗಿದೆ. ರೋಗವನ್ನು ತಡೆಗಟ್ಟಲು ರೈತರು ಈಗಾಗಲೇ ದುಬಾರಿ ಕ್ರಿಮಿನಾಶಕಗಳನ್ನು ಸಿಂಪಡಿಸುತ್ತಿದ್ದು ವೆಚ್ಚ ಹೆಚ್ಚಾಗುತ್ತಿದೆ.
ಒಂದು ವೇಳೆ ಫಸಲು ಉತ್ತಮವಾಗಿ ಬಂದರೂ, ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತದೆಯೇ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಪ್ರತಿವರ್ಷ ಫಸಲು ಹೆಚ್ಚಾದಾಗ ಬೆಲೆ ಕುಸಿಯುವುದು ಮಾವು ಬೆಳೆಗಾರರಿಗೆ ಶಾಪವಾಗಿ ಪರಿಣಮಿಸಿದೆ.
ಸರ್ಕಾರದ ನೆರವಿಗೆ ಆಗ್ರಹ: ಮಾವಿನ ಹೂವು ಫಸಲಾಗಿ ಬದಲಾಗುವ ಈ ಹಂತದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಸೂಕ್ತ ತಾಂತ್ರಿಕ ಸಲಹೆ ನೀಡಬೇಕು. ಕೊಯ್ಲಿನ ಸಮಯದಲ್ಲಿ ಮಾವು ಸಂಸ್ಕರಣಾ ಘಟಕಗಳ ಮೂಲಕ ರೈತರಿಗೆ ನ್ಯಾಯೋಚಿತ ಬೆಲೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ.
ತಜ್ಞರ ಸಲಹೆ: ರೋಗಗಳನ್ನು ತಡೆಗಟ್ಟಲು ಅವಶ್ಯಕತೆಗೆ ತಕ್ಕಷ್ಟು ಮಾತ್ರ ಔಷಧ ಸಿಂಪಡಿಸಬೇಕು. ಹೆಚ್ಚುತ್ತಿರುವ ತಾಪಮಾನದಿಂದ ಮಿಡಿಗಳು ಉದುರುವುದನ್ನು ತಡೆಯಲು ತೋಟದಲ್ಲಿ ತೇವಾಂಶ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹೂವು ಪೂರ್ತಿ ಅರಳಿ ಮಿಡಿಗಟ್ಟಿದ ನಂತರ ಲಘುವಾಗಿ ನೀರು ಹಾಯಿಸಬೇಕು. ಹೂವು ಅರಳುವ ಸಮಯದಲ್ಲಿ ಅತಿಯಾದ ನೀರು ಕೊಡಬಾರದು ಎಂದು ತಜ್ಞರು ಕಿವಿಮಾತು ಹೇಳುವರು.
ಮಧ್ಯವರ್ತಿಗಳ ಮೊರೆ
ತಾಲೂಕಿನಲ್ಲಿ ಸುಸಜ್ಜಿತ ಮಾವಿನ ಸಂಸ್ಕರಣಾ ಘಟಕ ಅಥವಾ ಶೀತಲೀಕರಣ ಕೇಂದ್ರದ ಕೊರತೆ ಇದೆ. ರೈತರು ಅನಿವಾರ್ಯವಾಗಿ ಮಧ್ಯವರ್ತಿಗಳ ಮೊರೆ ಹೋಗುವರು. ಒಂದು ವೇಳೆ ಈ ಬಾರಿ ಫಸಲು ಹೆಚ್ಚಾದರೆ ಬೆಲೆ ಕುಸಿಯುವ ಭೀತಿ ಕಾಡುತ್ತಿದೆ. ಆದ್ದರಿಂದ ಸರ್ಕಾರವು ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.–ಎಂ.ಎಸ್.ನರಸಿಂಹಾರೆಡ್ಡಿ ರೈತ ಸಂಘದ ಅಧ್ಯಕ್ಷ
ಬಾಡುತ್ತಿದೆ ಹೂ
ಗಿಡಗಳು ಚೆನ್ನಾಗಿ ಹೂ ಬಿಟ್ಟಿವೆ. ಬಿಸಿಲು ಹೆಚ್ಚಾದಂತೆ ಹೂವು ಬಾಡುತ್ತಿದೆ. ರೋಗ ತಡೆಗಟ್ಟಲು ಔಷಧಿ ಹೊಡೆಯುತ್ತಿದ್ದೇವೆ. ಸರ್ಕಾರ ಈ ಬಾರಿ ಮಾವು ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.–ಚೌಡರೆಡ್ಡಿ ರೈತ
ಹೆಚ್ಚಿದ ವೆಚ್ಚ
ಔಷಧಿ ಸಿಂಪಡಣೆಗೇ ಸಾವಿರಾರು ರೂಪಾಯಿ ಖರ್ಚು ಮಾಡಿದ್ದೇವೆ. ಫಸಲು ಮಾರುಕಟ್ಟೆಗೆ ಬಂದಾಗ ಸರಿಯಾದ ಬೆಲೆ ಸಿಗದಿದ್ದರೆ ನಾವು ಸಾಲದ ಸುಳಿಗೆ ಸಿಲುಕುವುದು ಗ್ಯಾರಂಟಿ.–ವೆಂಕಟರಮಣ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.