ADVERTISEMENT

ಜೂ.30ರಂದು ಉಚಿತ ಸಾಮೂಹಿಕ ವಿವಾಹ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 16:32 IST
Last Updated 27 ಜೂನ್ 2019, 16:32 IST

ಚಿಕ್ಕಬಳ್ಳಾಪುರ: ‘ಸಮತಾ ಸೈನಿಕ ದಳ ಸಂಘಟನೆ ವತಿಯಿಂದ ನಗರದ ಹೊರವಲಯದ ಸಿ.ವಿ.ವಿ ಕ್ಯಾಂಪಸ್ ಬಳಿ ಜೂನ್ 30ರಂದು (ಭಾನುವಾರ) 51 ಜೋಡಿಯ ಉಚಿತ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಸಮತಾ ಸೈನಿಕ ದಳದ ಜಿಲ್ಲಾ ಘಟಕ ಅಧ್ಯಕ್ಷ ಜಿ.ಸಿ.ವೆಂಕಟರಮಣಪ್ಪ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ‘ಬಡ ಕುಟುಂಬಗಳು ಇವತ್ತು ಮದುವೆ ಶುಭ ಕಾರ್ಯಕ್ಕಾಗಿ ಲಕ್ಷಾಂತರ ರುಪಾಯಿ ದುಂದು ವೆಚ್ಚ ಮಾಡಿ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಪರಿಣಾಮ, ಬಡ ಕುಟುಂಬಗಳಿಗೆ ಆರ್ಥಿಕವಾಗಿ ಪೆಟ್ಟು ಬೀಳುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಎನ್.ಬಿ.ಕೆ ಹೆಲ್ಪಿಂಗ್ ಹ್ಯಾಂಡ್ ಸಂಘಟನೆ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಜೂ.30 ರಂದು ಬೆಳಿಗ್ಗೆ 9.30ಕ್ಕೆ ಬೌದ್ಧ ಧರ್ಮದ ಪದ್ಧತಿಯಂತೆ ವಿವಾಹಗಳು ನಡೆಯಲಿವೆ. ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಎರಡು ಅಂತರ್ಜಾತಿ ಜೋಡಿ ವಿವಾಹ ನೆರವೇರಿಸಲಾಗುತ್ತಿದೆ. ಈಗಾಗಲೇ ಹೆಸರು ನೋಂದಾಯಿಸಿಕೊಂಡ ಜೋಡಿಗಳಿಗೆ ಮಂಗಳ ಸೂತ್ರ, ಕಾಲುಂಗರ, ಬಟ್ಟೆ, ಸೀರೆ, ಪಂಚೆ ನೀಡಲಾಗಿದೆ’ ಎಂದರು.

ADVERTISEMENT

‘ಈ ಕಾರ್ಯಕ್ರಮದಲ್ಲಿ ಆಸಕ್ತರು ಹೆಸರು ನೋಂದಾಯಿಸಿಕೊಂಡು ವಿವಾಹ ಮಾಡಿಕೊಳ್ಳಬಹುದು. ಮದುವೆಯಾಗಲು ಬಯಸುವವರು ಪ್ರಾಪ್ತ ವಯಸ್ಕರಾಗಿರಬೇಕು. ಎರಡನೇ ಮದುವೆ ಮತ್ತು ಬಾಲ್ಯ ವಿವಾಹಕ್ಕೆ ಅವಕಾಶ ಇರುವುದಿಲ್ಲ’ ಎಂದು ಹೇಳಿದರು.

‘ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ, ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಸಂಸದ ಬಿ.ಎನ್. ಬಚ್ಚೇಗೌಡ, ಸಿ.ವಿ.ವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ವಿ.ನವೀನ್ ಕಿರಣ್, ಎನ್.ಬಿ.ಕೆ. ಹೆಲ್ಪಿಂಗ್ ಹ್ಯಾಂಡ್‌ ಸಂಘಟನೆ ಅಧ್ಯಕ್ಷ ಅನಂತಪುರಂ ಜಗನ್ ಹಾಗೂ ನಟ ನಂದಮೂರಿ ಬಾಲಕೃಷ್ಣ ಕುಟುಂಬದ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಚ್.ಎಂ.ನರಸಿಂಹಪ್ಪ, ಜಿಲ್ಲಾ ಕಾರ್ಯದರ್ಶಿ ಪಿಳ್ಳ ಅಂಜಿನಪ್ಪ, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಹರಿಪ್ರಸಾದ್, ಮಹಿಳಾ ಕಾರ್ಯದರ್ಶಿ ಸರಸ್ವತಮ್ಮ, ಮುಖಂಡರಾದ ಮಂಜು, ಮೂರ್ತಿ, ಶಿವು, ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.