ADVERTISEMENT

ಸಾಮಾನ್ಯ ಸಭೆಯಲ್ಲಿ ‘ಕೊರೊನಾ’ ಕಾವು

ಚಿಂತಾಮಣಿ ತಾಲ್ಲೂಕು ಪಂಚಾಯಿತಿ ಸಭೆ; ಅಧ್ಯಕ್ಷೆ, ಸ್ಥಾಯಿ ಸಮಿತಿ ಅಧ್ಯಕ್ಷರ ನಡುವೆ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 29 ಮೇ 2020, 16:41 IST
Last Updated 29 ಮೇ 2020, 16:41 IST
ಸಭೆಯಲ್ಲಿ ಹಾಜರಿದ್ದ ಅಧ್ಯಕ್ಷೆ ಕವಿತಾ ಹಾಗೂ ಸದಸ್ಯರು
ಸಭೆಯಲ್ಲಿ ಹಾಜರಿದ್ದ ಅಧ್ಯಕ್ಷೆ ಕವಿತಾ ಹಾಗೂ ಸದಸ್ಯರು   

ಚಿಂತಾಮಣಿ: ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಶುಕ್ರವಾರ ಅಧ್ಯಕ್ಷೆ ಕವಿತಾ ಮಂಜುನಾಥ್ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೊರೊನಾ ವಿಷಯವು ಆಡಳಿತ ಪಕ್ಷದ ಸದಸ್ಯರ ನಡುವೆಯೇ ವಾಗ್ವಾದಕ್ಕೆ ಕಾರಣವಾಯಿತು.

ಕವಿತಾ ಮಂಜುನಾಥ್ ಸಭೆಯ ಅಜೆಂಡಾದಂತೆ ವಿಷಯ ಮಂಡಿಸುತ್ತಿದ್ದಂತೆ ಸ್ಥಾಯಿ ಸಮಿತಿ ಅಧ್ಯಕ್ಷ ಡಾಬ ಮಂಜುನಾಥ್, ಮೊದಲು ಕೊರೊನಾ ಕುರಿತು ಚರ್ಚೆ ನಡೆಸಿ ವೈದ್ಯರನ್ನು ಕಳುಹಿಸಿಕೊಡಿ. ಈ ಸಂದರ್ಭದಲ್ಲಿ ಅವರಿಗೆ ಹೆಚ್ಚಿನ ಕೆಲಸ ಇರುತ್ತದೆ ಎಂದರು.

ಕವಿತಾ ಮತ್ತು ಆಡಳಿತ ಪಕ್ಷದ ನಡಂಪಲ್ಲಿ ಶ್ರೀನಿವಾಸ್ ಮತ್ತಿತರ ಸದಸ್ಯರು ಸಭಾ ಸೂಚಿಯಂತೆ ಚರ್ಚೆಯಾಗಲಿ ಎಂದರು. ಇದರಿಂದ ಕೆರಳಿದ ಮಂಜುನಾಥ್ ಸಾಮಾನ್ಯ ಸಭೆಯ ವಿಷಯಸೂಚಿಯಲ್ಲಿ ಕೊರೊನಾ ವಿಷಯವನ್ನು ಏಕೆ ಸೇರಿಸಲಿಲ್ಲ. ಕೊರೊನಾ ತಡೆಗೆ ತಾಲ್ಲೂಕು ಪಂಚಾಯಿತಿ ಯಾವುದೇ ಕ್ರಮಕೈಗೊಂಡಿಲ್ಲ. ಕನಿಷ್ಠ ಒಂದು ಮಾಸ್ಕ್ ಸಹ ನೀಡಿಲ್ಲ ಎಂದು ಟೀಕಿಸಿದರು. ಆಗ ವಾದ ವಿವಾದಗಳು ನಡೆದವು.

ADVERTISEMENT

ಹಲವು ಗ್ರಾಮಗಳಲ್ಲಿ ಜಾಗೃತಿ ಸಭೆಗಳನ್ನು ನಡೆಸಲಾಗಿದೆ. ಮಾಸ್ಕ್ ವಿತರಣೆ ಸೇರಿದಂತೆ ಕೆಲವು ಸಹಾಯ ಮಾಡಲು ತಾಲ್ಲೂಕು ಪಂಚಾಯಿತಿಯಲ್ಲಿ ಯಾವುದೇ ಅನುದಾನ ಇಲ್ಲ ಎಂದು ಅಧ್ಯಕ್ಷರು ವಿವರಣೆ ನೀಡಿದರು.

ಈ ಬಗ್ಗೆ ವಾಗ್ವಾದ ಮುಂದುವರಿದಾಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೊರೊನಾ ಬಗ್ಗೆ ಪೂರ್ಣ ಮಾಹಿತಿ ನೀಡಿ ಸದಸ್ಯರನ್ನು ಸಮಾಧಾನ ಪಡಿಸಿದರು.

ವಿರೋಧಪಕ್ಷದ ನರಸಿಂಹರಾಜು ಮಾತನಾಡಿ, ಅನುದಾನ ಮಂಜೂರಾತಿಯಲ್ಲಿ ವಿರೋಧಪಕ್ಷದ ಸದಸ್ಯರ ಕ್ಷೇತ್ರಗಳ ಬಗ್ಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ತಾಲ್ಲೂಕು ಪಂಚಾಯಿತಿ ಅನುದಾನದಿಂದ ನಮ್ಮ ಕ್ಷೇತ್ರಗಳಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ಈ ವರ್ಷವಾದರೂ ತಾರತಮ್ಯವಿಲ್ಲದೆ ಪಕ್ಷಾತೀತವಾಗಿ ಅನುದಾನ ಹಂಚಿಕೆ ಆಗಬೇಕು ಎಂದು ಒತ್ತಾಯಿಸಿದರು.

ಅಭಿವೃದ್ಧಿ ಕಾಮಗಾರಿಗಳಲ್ಲಿ ರಾಜಕೀಯವಿಲ್ಲ. ಪಕ್ಷಾತೀತವಾಗಿ ಅನುದಾನ ವಿತರಣೆ ಮಾಡಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು.

ಆಶಾ ಕಾರ್ಯಕರ್ತೆಯರಿಗೆ ತಾಲ್ಲೂಕು ಪಂಚಾಯಿತಿಯಿಂದ ಏನಾದರೂ ಕೊಡುಗೆ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ವಿವಿಧ ಇಲಾಖೆಗಳ ಪ್ರಗತಿಯನ್ನು ಪರಿಶೀಲನೆ ನಡೆಯಿತು.

2020-21 ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗುವ ಅನುದಾನದಲ್ಲಿ ಕುಡಿಯುವ ನೀರು ಹಾಗೂ ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡಿ ಕ್ರಿಯಾಯೋಜನೆ ತಯಾರಿಸಲು ಅನುಮೋದನೆ ನೀಡಲಾಯಿತು.

ಉಪಾಧ್ಯಕ್ಷ ನಾರಾಯಣಸ್ವಾಮಿ,ಸದಸ್ಯರು ಹಾಗೂ ಎಲ್ಲ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.