ADVERTISEMENT

ಮಾನಸಿಕ ಅಸ್ವಸ್ಥನ ವೃಕ್ಷ ಪ್ರೀತಿ: ಪ್ರತಿದಿನವೂ ಸಸಿಗೆ ನೀರು ಹನಿಸುವ ಮೂಲಕ ಆರೈಕೆ

ಪಿ.ಎಸ್.ರಾಜೇಶ್
Published 5 ಮಾರ್ಚ್ 2021, 5:40 IST
Last Updated 5 ಮಾರ್ಚ್ 2021, 5:40 IST
ಬಾಗೇಪಲ್ಲಿ ಹೊರವಲಯದ ಕಾಲೇಜಿನ ಗಿಡಕ್ಕೆ ನೀರು ಹಾಕುತ್ತಿರುವ ಮಾನಸಿಕ ಅಸ್ವಸ್ಥ
ಬಾಗೇಪಲ್ಲಿ ಹೊರವಲಯದ ಕಾಲೇಜಿನ ಗಿಡಕ್ಕೆ ನೀರು ಹಾಕುತ್ತಿರುವ ಮಾನಸಿಕ ಅಸ್ವಸ್ಥ   

ಬಾಗೇಪಲ್ಲಿ: ಇಲ್ಲೊಬ್ಬ ಮಾನಸಿಕ ಅಸ್ವಸ್ಥ ಪ್ರತಿದಿನವೂ ಕಾಲೇಜು ಮುಂಭಾಗದಲ್ಲಿರುವ ಸಸಿಗೆ ನೀರು ಹನಿಸುವ ಮೂಲಕ ಆರೈಕೆ ಮಾಡುತ್ತಿದ್ದಾನೆ.

ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಎನ್.ಮಂಜುಳ ಅವರು ಡಾ.ಜಚನಿ ಕಲಾಕ್ಷೇತ್ರದ ಮುಂಭಾಗದಲ್ಲಿ ಸಸಿ ನೆಟ್ಟಿದ್ದರು. ಮಾನಸಿಕ ಅಸ್ವಸ್ಥ ಒಂದು ದಿನವೂ ತಪ್ಪಿಸದಂತೆ ಆ ಸಸಿಗೆ ನೀರು ಹಾಕುತ್ತಿದ್ದಾನೆ.

ಪ್ರತಿ ದಿನ ಟೋಲ್ ಗೇಟ್ ಬಳಿಯ ಶೌಚಾಲಯದಿಂದ ಜಗ್‌ ಮತ್ತು ಬಕೆಟ್ನಲ್ಲಿ ನೀರು ತಂದು ಗಿಡಕ್ಕೆ ಸುರಿಯುತ್ತಾನೆ. ಒಂದು ವೇಳೆ ಜಗ್‌, ಬಕೆಟ್‌ ಸಿಗದಿದ್ದರೆ ನೀರು ಕುಡಿದು ಬಿಸಾಡಿದ ಪ್ಲಾಸ್ಟಿಕ್ ಬಾಟಲಿ ಹುಡುಕುತ್ತಾನೆ. ಬಾಟಲಿಯಲ್ಲಿಯೇ ನೀರು ಹಿಡಿದು ಸಸಿಗೆ ಹನಿಸುತ್ತಾನೆ ಎಂದು ಅಕ್ಕ ಪಕ್ಕದ ಅಂಗಡಿಯವರು ಹೇಳುತ್ತಾರೆ.

ADVERTISEMENT

ಡಾ.ಶ್ರೀ ಜಚನಿ ಕಲಾಕ್ಷೇತ್ರಕ್ಕೆ ರಾತ್ರಿ ವೇಳೆ ಅಪರಿಚಿತರು ಸುಳಿಯದಂತೆ ಕಾವಲು
ಕಾಯುತ್ತಾನೆ. ಯಾರಾದರೂ ಬಂದರೆ ಅವರನ್ನು ಓಡಿಸುತ್ತಾನೆ ಎಂದು ಕಾಲೇಜಿನ ರಾತ್ರಿ ಕಾವಲುಗಾರ ಅಶ್ವತ್ಥಪ್ಪ ಹೇಳುತ್ತಾರೆ.

ರೋಚಕ ಕತೆ: ಈತನ ಕೆಲಸದ ಬಗ್ಗೆ ತಿಳಿದ 'ಪ್ರಜಾವಾಣಿ' ಆತನನ್ನು ಹುಡುಕಿಕೊಂಡು ಹೊರಟಾಗ ರೋಚಕ ಕತೆಯೊಂದು ತೆರೆದುಕೊಂಡಿತು. ಮೂಲತಃ ಆಂಧ್ರಪ್ರದೇಶದ ವಿಜಯವಾಡದ ಈತನಿಗೆ ಮೂವರು ಪತ್ನಿಯರು. ಆದರೆ, ಮೂವರಲ್ಲಿ
ಯಾರೂ ಆತನೊಂದಿಗೆ ಇಲ್ಲ. ಅವರೆಲ್ಲರೂ ಬಿಟ್ಟು ಹೋಗಿದ್ದಾರೆ.

ಬಾಗೇಪಲ್ಲಿಗೆ ಈತ ಬಂದು ಸುಮಾರು ನಾಲ್ಕು ತಿಂಗಳಾಯಿತು. ಅಂದಿನಿಂದಲೂ ಕಾಲೇಜಿನ ಮುಂಭಾಗದ ಟೋಲ್‌ಗೇಟ್‌ ಬಳಿಯೇ ಠಿಕಾಣಿ. ಹೆಸರು ಯಾರಿಗೂ ಗೊತ್ತಿಲ್ಲ. ಅವರಿವರು ನೀಡಿದ ಆಹಾರದಿಂದ ಹೊಟ್ಟೆ ತುಂಬುತ್ತದೆ. ಲಾರಿ ಚಾಲಕರು, ಕಾಲೇಜು ವಿದ್ಯಾರ್ಥಿಗಳು ಈತನ‌ ಮೆಚ್ಚಿನ ಸ್ನೇಹಿತರು. ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರಿಗೂ ಈತ ಅಚ್ಚುಮೆಚ್ಚು ಎನ್ನುತ್ತಾರೆ ಹೈವೆ ಪಕ್ಕ ಟೀ ಅಂಗಡಿ ಇಟ್ಟುಕೊಂಡಿರುವ ಅಶೋಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.