
ಬಾಗೇಪಲ್ಲಿ: ಕಿತ್ತುತಿನ್ನುವ ಬಡತನ, 1 ವರ್ಷದಿಂದ 5 ವರ್ಷದ ಒಳಗಿನ ಮಕ್ಕಳು, ತಂದೆ, ತಾಯಿ ಬೆವರು ಸುರಿಸಿ ಕಾಲುವೆ ಅಗೆಯುತ್ತಿದ್ದಾರೆ. ಇಕ್ಕೆಲಗಳಲ್ಲಿನ ಮಣ್ಣಿನಲ್ಲೇ ಆಟ, ಅಪೌಷ್ಠಿಕತೆಯಿಂದ ನರಳುವ ಮಕ್ಕಳು, ಊಟ, ವಸತಿಗೆ ಪರದಾಟ... ಹೀಗೆ ಹತ್ತಾರು ಸಂಕಷ್ಟಗಳಲ್ಲಿ ಬದುಕುತ್ತಿರುವವರು ಪಟ್ಟಣದ ಪೈಪ್‍ಲೈನ್‍ಗೆ ಕಾಲುವೆ ಅಗೆಯಲು ಆಂಧ್ರಪ್ರದೇಶದ ವಲಸೆ ಬಂದ ಕಾರ್ಮಿಕರು.
ಪಟ್ಟಣದ 3, 4 ಮತ್ತು 5ನೇ ವಾರ್ಡ್‍ಗಳಲ್ಲಿ ಕುಡಿಯುವ ನೀರಿಗೆ ಹಾಗೂ ದಿನಬಳಕೆಯ ನೀರಿಗೆ ಹಾಹಾಕಾರ ಉಂಟಾಗಿತ್ತು. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪಟ್ಟಣದ ರಾಘವೇಂದ್ರ ಚಲನಚಿತ್ರ ಮಂದಿರದ ಮುಂದೆ ಕುಡಿಯುವ ನೀರಿನ ಪೈಪ್‍ಲೈನ್ ಕಾಮಗಾರಿ ಕೈಗೊಂಡಿದ್ದಾರೆ. ಇದರ ಕೆಲಸಕ್ಕಾಗಿ ಆಂಧ್ರಪ್ರದೇಶದಿಂದ ಪಟ್ಟಣಕ್ಕೆ ವಲಸೆ ಕಾರ್ಮಿಕರು ಬಂದಿದ್ದಾರೆ.
ವಲಸೆ ಕಾರ್ಮಿಕರು ತಮ್ಮೊಂದಿಗೆ ಪುಟ್ಟ ಕಂದಮ್ಮಗಳನ್ನು ಕರೆತಂದಿದ್ದಾರೆ. ಪಟ್ಟಣದ ಹೊರವಲಯದ ಶಿರಿಡಿಸಾಯಿಬಾಬಾ ಮಂದಿರದ ಬಂಡೆ ಮೇಲೆ ಮೈಕೊರೆಯುವ ಚಳಿಯಲ್ಲೂ ಟೆಂಟ್‍ಗಳಲ್ಲಿ ವಾಸವಾಗಿದ್ದಾರೆ.
ಕಾರ್ಮಿಕರು ಬೆಳಗ್ಗೆಯಿಂದ ಸಂಜೆವರೆಗೂ ಪೈಪ್‍ಲೈನ್‍ನ ಗುಂಡಿ ತೆಗೆಯುತ್ತಾರೆ. ಮಕ್ಕಳನ್ನು ಅಂಗಡಿ, ಖಾಲಿ ಜಾಗದ ನೆಲದ ಮೇಲೆ ಬಟ್ಟೆ ಹಾಕಿ ಮಲಗಿಸುತ್ತಾರೆ.
ವಲಸೆ ಕಾರ್ಮಿಕರನ್ನು ಕರೆತರುವ ಗುತ್ತಿಗೆದಾರರು ಕಾರ್ಮಿಕರಿಗೆ ಸೂಕ್ತವಾದ ಊಟ, ವಸತಿ ಕಲ್ಪಿಸಿಲ್ಲ. ಕಾರ್ಮಿಕರ ಮಕ್ಕಳ ಪೋಷಣೆ, ರಕ್ಷಣೆಗೆ ಗಮನಹರಿಸಿಲ್ಲ. ಕಾರ್ಮಿಕರ ಮಕ್ಕಳನ್ನು ಮುಖ್ಯವಾಗಿಸಿಕೊಂಡು ಇಲಾಖೆಗಳು ‘ಕಾರ್ಮಿಕ ಕುಟೀರ’ ಆರಂಭಿಸಬೇಕು ಎಂಬುದು ಸ್ಥಳೀಯರ ಒತ್ತಾಯ.
ವಲಸೆ ಕಾರ್ಮಿಕರು ಪೈಪ್‍ಲೈನ್‍ಗೆ ಗುಂಡಿ ಅಗೆಯುತ್ತಿದ್ದಾರೆ. ಸಣ್ಣ ಮಕ್ಕಳು ರಸ್ತೆ, ಮಣ್ಣಿನಲ್ಲಿ ಆಟವಾಡುತ್ತಿದ್ದಾರೆ. ಮಕ್ಕಳಿಗೆ ಸೂಕ್ತವಾದ ವಸತಿ ಇಲ್ಲ. ಮಕ್ಕಳಿಗೆ ಶಿಕ್ಷಣ ಇಲ್ಲ. ಸಣ್ಣ ಮಕ್ಕಳ ಪಾಡು ಹೇಳತೀರದು ಎಂದು ಸೆಲೂನ್ ಅಂಗಡಿ ಮಾಲೀಕ ಗಜೇಂದ್ರ ಹೇಳಿದರು.
ಮಕ್ಕಳಿಗೂ ಜೀವಿಸುವ, ರಕ್ಷಣೆ ಪಡೆಯುವ, ವಿದ್ಯಾಭ್ಯಾಸ ಪಡೆಯುವ, ಬೆಳವಣಿಗೆ, ಅಭಿವೃದ್ಧಿ ಹೊಂದುವ ಹಕ್ಕು ಇವೆ. ಮಕ್ಕಳ ಬಾಲ್ಯ ಬೀದಿಬದಿಯಲ್ಲೇ ಕಮರುತ್ತಿವೆ. ವಲಸೆ ಕಾರ್ಮಿಕರಿಗೆ ಸಂಬಂಧಪಟ್ಟ ಇಲಾಖೆಗಳು ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ, ತಾಲ್ಲೂಕು ಸಮಿತಿ ಸದಸ್ಯ ಎ.ಜಿ.ಸುಧಾಕರ್ ತಿಳಿಸಿದರು.
ಕೂಲಿಕಾರ್ಮಿಕರಿಗೆ ಮನರೇಗಾದಲ್ಲಿ ಕೆಲಸ ನೀಡುವ ಜತೆಗೆ ಸಾಮಾಜಿಕ ಭದ್ರತೆ, ಮಕ್ಕಳಿಗೆ ಶಿಕ್ಷಣ, ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಸರ್ಕಾರದ ಆದೇಶ ಇದೆ. ಆದರೆ ಅಧಿಕಾರಿಗಳು, ಗುತ್ತಿಗೆದಾರರು ವಲಸೆ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸುತ್ತಾರೆ. ಮಕ್ಕಳ ಬದುಕು ಹೇಳತೀರದು. ಕಾರ್ಮಿಕರ ಮಕ್ಕಳಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಪ್ರಾಂತ ಕೂಲಿಕಾರ್ಮಿಕರ ಸಂಘದ ರಾಜ್ಯ ಸಹಕಾರ್ಯದರ್ಶಿ ಬಿಳ್ಳೂರುನಾಗರಾಜ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.