ADVERTISEMENT

ಉಳ್ಳವರಿಗೆ ಹಾಲು, ನಿರ್ಗತಿಕರು ಬೀದಿಪಾಲು

ಬಡವರ ಹೊಟ್ಟೆ ಸೇರಬೇಕಾದ ಹಾಲು ಕುಡಿದು ತೇಗುತ್ತಿರುವ ಸಿರಿವಂತರು, ಊಟಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುವ ಬಡವರು

ಈರಪ್ಪ ಹಳಕಟ್ಟಿ
Published 6 ಏಪ್ರಿಲ್ 2020, 19:30 IST
Last Updated 6 ಏಪ್ರಿಲ್ 2020, 19:30 IST
ಚಿಕ್ಕಬಳ್ಳಾಪುರದ ಎಪಿಎಂಸಿಯಲ್ಲಿರುವ ಇಂದಿರಾ ಕ್ಯಾಂಟಿನ್‌ ಎದುರು ಸೋಮವಾರ ಊಟ ಮಾಡಲು ಹಣವಿಲ್ಲದೆ ಕಾಯ್ದು ಕುಳಿತ ನಿರ್ಗತಿಕ, ಬಡಜನರು
ಚಿಕ್ಕಬಳ್ಳಾಪುರದ ಎಪಿಎಂಸಿಯಲ್ಲಿರುವ ಇಂದಿರಾ ಕ್ಯಾಂಟಿನ್‌ ಎದುರು ಸೋಮವಾರ ಊಟ ಮಾಡಲು ಹಣವಿಲ್ಲದೆ ಕಾಯ್ದು ಕುಳಿತ ನಿರ್ಗತಿಕ, ಬಡಜನರು   

ಚಿಕ್ಕಬಳ್ಳಾಪುರ: ಲಾಕ್‌ಡೌನ್‌ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಅತ್ತ ಕೂಲಿಯೂ ಇಲ್ಲದೆ, ಇತ್ತ ಹೊಟ್ಟೆಗೆ ಸರಿಯಾಗಿ ಊಟವೂ ಸಿಗದೆ ಪರದಾಡುತ್ತಿರುವ ಅನೇಕ ಕಡುಬಡವರು, ನಿರ್ಗತಿಕರು, ನಿರಾಶ್ರಿತರು ಈವರೆಗೂ ಸರಿಯಾಗಿ ಹೊತ್ತಿನ ತುತ್ತು ಸಿಗುತ್ತಿಲ್ಲ.

ಲಾಕ್‌ಡೌನ್‌ನಿಂದಾಗಿ ಹಾಲು ಒಕ್ಕೂಟಗಳಲ್ಲಿ ಹೆಚ್ಚುವರಿಯಾಗಿ ಉಳಿದ ಹಾಲನ್ನು ಸರ್ಕಾರವೇನೋ ಕೊಳೆಗೇರಿ ಪ್ರದೇಶದ ಜನರಿಗೆ ಉಚಿತ ಹಾಲು ಸರಬರಾಜು ಮಾಡಿ ಎಂದು ಆದೇಶಿಸಿತು. ಆದರೆ, ದೈನ್ಯದಲ್ಲಿರುವವ ಹೊಟ್ಟೆ ಸೇರಿ ನಿಟ್ಟುಸಿರು ಹೊರಡಿಸಬೇಕಿದ್ದ ಹಾಲು, ಕೆಲವೆಡೆ ಉಳ್ಳವರ ಉದರದ ಪಾಲಾಗಿ ತೇಗು ತರಿಸುತ್ತಿದ್ದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಉಚಿತ ವಿತರಣೆಗಾಗಿ ಚಿಕ್ಕಬಳ್ಳಾಪುರ ನಗರಕ್ಕೆ ನಿತ್ಯ 3,000 ಲೀಟರ್ ಹಾಲು ಬರುತ್ತಿದೆ. ಅದನ್ನು ನಗರಸಭೆಯ 31 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ನೀರುಗಂಟಿಗಳ ಮೂಲಕ ಹಂಚಿಕೆ ಮಾಡಿಸಲಾಗುತ್ತಿದೆ. ಆದರೆ, ಅನೇಕ ವಾರ್ಡ್‌ಗಳಲ್ಲಿ ನಗರಸಭೆ ಸದಸ್ಯರ ಮಧ್ಯಪ್ರವೇಶದಿಂದಾಗಿ ಬೇಕಾಬಿಟ್ಟಿ ಹಂಚಿಕೆಯಾಗಿ, ಅರ್ಹರಿಗೆ ಹಾಲು ಸಿಗದಂತಾಗಿದೆ ಎಂಬ ಆರೋಪಗಳು ವ್ಯಕ್ತವಾಗುತ್ತಿವೆ.

ADVERTISEMENT

ಇನ್ನು, ನಗರದ ನಿವಾಸಿಗಳಲ್ಲೇ ಕೆಲ ಉದಾರಿಗಳು ತಮ್ಮ ಕೈಲಾದ ಮಟ್ಟಿಗೆ ಹಸಿದವರ ಹೊಟ್ಟೆ ತುಂಬಿಸುವ, ದಿನಸಿ ಸಾಮಗ್ರಿ ಕೊಡಿಸುವ ಕೆಲಸ ಮಾಡಿದ್ದಾರೆ. ಆದರೆ ಸರ್ಕಾರದ ವತಿಯಿಂದ ಎಲ್ಲಿಯೂ ನಿರಂತರವಾಗಿ ಕಡುಬಡವರು, ನಿರ್ಗತಿಕರು, ನಿರಾಶ್ರಿತರಿಗೆ ನಿಯಮಿತವಾಗಿ ಊಟ ನೀಡುವ ಪ್ರಯತ್ನ ನಡೆದಿಲ್ಲ.

ಸದ್ಯ, ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾಧಿಕಾರದ ವತಿಯಿಂದ ನಿತ್ಯ ಜಿಲ್ಲೆಗೆ ಮಧ್ಯಾಹ್ನ, ಸಂಜೆಗೆ 2,500 ಊಟ ಕಳುಹಿಸುತ್ತಿದ್ದಾರೆ. ಅದನ್ನು ಕೊರೊನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಪೊಲೀಸ್‌, ಕಂದಾಯ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಹಂಚಿಕೆ ಮಾಡಲಾಗುತ್ತಿದೆ. ಜತೆಗೆ, ಅಲ್ಲಲ್ಲಿ ಬಡವರಿಗೆ ವಿತರಿಸುವ ಕೆಲಸ ಮಾಡಲಾಗುತ್ತಿದೆ.

ನಿತ್ಯ ನಗರವನ್ನು ಒಂದು ಸುತ್ತು ಹಾಕಿದರೆ ಇಂದಿಗೂ ಅಲ್ಲಲ್ಲಿ ಊಟಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯ್ದು ಕುಳಿತ ಜನರು ಗೋಚರಿಸುತ್ತಾರೆ. ಕೆಲವರು ಹಸಿವೆ ತಾಳದೆ ಎಪಿಎಂಸಿಯಲ್ಲಿರುವ ಇಂದಿರಾ ಕ್ಯಾಂಟಿನ್‌ಗೆ ಹೋಗಿ ಊಟ ಕೇಳಿ, ಅಲ್ಲಿ ನೀಡಲು ಹಣವಿಲ್ಲದೆ ನೀರು ಕುಡಿದು ವಾಪಾಸಾಗುವ ಕರುಳು ಹಿಂಡುವ ದೃಶ್ಯಗಳು ಗೋಚರಿಸುತ್ತಿವೆ.

‘ನಗರದ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಇತ್ತೀಚೆಗೆ ಹೋಟೆಲ್‌ ಕೂಡ ಬೀಗ ಹಾಕಿದೆ. ಮಾಲೀಕರು ಊರಿಗೆ ಹೋಗಲು ಹೇಳಿದರು. ಊರಿನವರು ಕೊರೊನಾ ಕಾಯಿಲೆ ಹೋಗುವವರೆಗೂ ಊರಿಗೆ ಕಾಲಿಡಬೇಡ ಎಂದಿದ್ದಾರೆ. ಹೀಗಾಗಿ, ನಗರದಲ್ಲಿಯೇ ಅವರಿವರ ಬಳಿ ಬೇಡಿ, ಊಟ ಮಾಡಿ ಹೊಟ್ಟೆ ಹೊರೆಯುತ್ತಿರುವೆ’ ಎಂದು ತಿಪ್ಪೇನಹಳ್ಳಿ ನಿವಾಸಿ ಶಾರದಮ್ಮ ತಿಳಿಸಿದರು.

‘ನಗರದಲ್ಲಿ ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡುತ್ತೇನೆ. ಇತ್ತೀಚೆಗೆ ಕೆಲಸಗಳು ಇಲ್ಲದಂತಾಗಿವೆ. ಹಸಿವು ತಾಳದೆ ಇಂದಿರಾ ಕ್ಯಾಂಟಿನ್‌ಗೆ ಹೋಗಿ ಊಟ ಕೇಳಿದರೆ ದುಡ್ಡು ಕೇಳಿದರು. ನನ್ನ ಬಳಿ ಇದ್ದ ಕಾಸೆಲ್ಲ ಖಾಲಿಯಾಗಿದೆ. ಊಟಕ್ಕಾಗಿ ಪರದಾಡುವ ಸ್ಥಿತಿ ಬಂದಿದೆ’ ಎಂದು ಎಪಿಎಂಸಿಯಲ್ಲಿನ ಇಂದಿರಾ ಕ್ಯಾಂಟಿನ್‌ ಬಳಿ ಸಪ್ಪೆ ಮುಖ ಹೊತ್ತು ನಿಂತಿದ್ದ ಮಂಚೇನಹಳ್ಳಿ ನಿವಾಸಿ ಮುಕ್ತಿಯಾರ್ ಹೇಳಿದರು.

ಈ ಬಗ್ಗೆ ನಗರಸಭೆ ಆಯುಕ್ತ ಲೋಹಿತ್‌ ಅವರನ್ನು ವಿಚಾರಿಸಿದರೆ, ‘ನಗರದಲ್ಲಿ ಎಲ್ಲೆಡೆ ಸರಿಯಾಗಿ ಹಾಲು ವಿತರಣೆಯಾಗುತ್ತಿದೆ. ಊಟ ಸಿಗದವರಿಗೆ ಊಟ ವಿತರಿಸುವ ಕೆಲಸ ಕೂಡ ಮಾಡುತ್ತಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.