ADVERTISEMENT

ಚಿಕ್ಕಬಳ್ಳಾಪುರ | ಹಾಲು ಹಂಚಿ ಪಂಚಮಿ ಆಚರಣೆ

ತಾಲ್ಲೂಕಿನ ಚೀಗಟೇನಹಳ್ಳಿಯಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಬಸವ ಪಂಚಮಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 9:42 IST
Last Updated 25 ಜುಲೈ 2020, 9:42 IST
ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಮಾನವ ಬಂಧುತ್ವ ವೇದಿಕೆ ಪದಾಧಿಕಾರಿಗಳು ಬಸವ ಪಂಚಮಿ ಆಚರಿಸಿದರು.
ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಮಾನವ ಬಂಧುತ್ವ ವೇದಿಕೆ ಪದಾಧಿಕಾರಿಗಳು ಬಸವ ಪಂಚಮಿ ಆಚರಿಸಿದರು.   

ಚಿಕ್ಕಬಳ್ಳಾಪುರ: ಮಾನವ ಬಂಧುತ್ವ ವೇದಿಕೆ ಜಿಲ್ಲಾ ಘಟಕ ವತಿಯಿಂದ ಶನಿವಾರ ತಾಲ್ಲೂಕಿನಚೀಗಟೇನಹಳ್ಳಿಯಲ್ಲಿ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಬಸವ ಪಂಚಮಿ ಆಚರಿಸಲಾಯಿತು.

ವೇದಿಕೆಯ ಜಿಲ್ಲಾ ಘಟಕದ ಸಂಚಾಲಕ ಡಿ.ವಿ.ನಾರಾಯಣಸ್ವಾಮಿ, ‘ನಾಗರ ಪಂಚಮಿ ಹಬ್ಬದಲ್ಲಿ ಜನರು ಹಾವಿನ ಹುತ್ತ ಮತ್ತು ನಾಗರ ಕಲ್ಲುಗಳಿಗೆ ಹಾಲು ಎರೆದು ವ್ಯರ್ಥ ಮಾಡುತ್ತಾರೆ. ವಾಸ್ತವದಲ್ಲಿ ಹಾವು ಹಾಲು ಕುಡಿಯುವುದಿಲ್ಲ. ಹುತ್ತಕ್ಕೆ ಹಾಲು ಎರೆಯುವುದರಿಂದ ಹಾವಿಗೆ ತೊಂದರೆಯಾಗುತ್ತದೆ’ ಎಂದು ಹೇಳಿದರು.

‘ನಾವು ವೈಜ್ಞಾನಿಕವಾಗಿ ಎಷ್ಟೊಂದು ಮುಂದುವರಿದರೂ ನಮ್ಮಲ್ಲಿ ಇಂದಿಗೂ ಮೌಢ್ಯಗಳ ಆಚರಣೆ ನಿಂತಿಲ್ಲ. ಬದಲು ಹೆಚ್ಚುತ್ತಿದೆ. ಡೊಂಗಿ ಜೋತಿಷಿಗಳು ಜನರನ್ನು ವಂಚಿಸುವುದನ್ನೇ ದೊಡ್ಡ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತರುವ ಮೂಲಕ ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು’ ಎಂದು ತಿಳಿಸಿದರು.

ADVERTISEMENT

‘ಪಂಚಮಿ ಹಬ್ಬದಂದು ಪೋಲು ಮಾಡುವ ಹಾಲನ್ನೇ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗಾದರೂ ನೀಡಿದರೆ ಹಬ್ಬದ ಆಚರಣೆ ಅರ್ಥಪೂರ್ಣವಾಗಿರುತ್ತದೆ. ಈ ಬಗ್ಗೆ ಮಕ್ಕಳಲ್ಲಿ ಚಿಕ್ಕಂದಿನಲ್ಲಿಯೇ ವೈಜ್ಞಾನಿಕ ಚಿಂತನೆ ಮೂಡಿಸುವ ಅಗತ್ಯವಿದೆ’ ಎಂದರು.

‘ಹಿರಿಯರು ಪಾಲಿಸಿಕೊಂಡು ಬಂದಿದ್ದಾರೆ ಎಂಬ ಏಕೈಕ ಕಾರಣಕ್ಕೆ ಮೌಢ್ಯಾಚರಣೆಗಳನ್ನು ಕಣ್ಮುಚ್ಚಿಕೊಂಡು ಪಾಲಿಸಬಾರದು. ಯಾವುದೇ ಕೆಲಸ ಮಾಡುವ ಮೊದಲು ಅದರ ಬಗ್ಗೆ ವೈಜ್ಞಾನಿಕ ಚಿಂತನೆ ನಡೆಸಿ ನಿರ್ಧಾರಕ್ಕೆ ಬರಬೇಕು. ಇಂದಿಗೂ ಗ್ರಾಮೀಣ ಭಾಗದಲ್ಲಿ ಮೌಢ್ಯ ಹೆಚ್ಚಿನ ಪ್ರಮಾಣದಲ್ಲಿದೆ. ಸಂಘ ಸಂಸ್ಥೆಗಳು ಈ ವಿಚಾರದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

ವೇದಿಕೆ ಪದಾಧಿಕಾರಿಗಳಾದ ನರಸಿಂಹಮೂರ್ತಿ, ಹರೀಶ್, ಅಂಗನವಾಡಿ ಕಾರ್ಯಕರ್ತೆ ಸಿ.ಎನ್.ಲಕ್ಷ್ಮಿದೇವಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.