ಗೌರಿಬಿದನೂರು: ಇಲ್ಲಿನ ನಗರಸಭೆಗೆ ಬುಧವಾರ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಮತ್ತು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸ್ಥಳೀಯ ನಗರಸಭೆ ವ್ಯಾಪ್ತಿಯಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದರು.
ಈ ವೇಳೆ ಸ್ಥಳೀಯರು ಮತ್ತು ನಗರಸಭೆ ಸದಸ್ಯರು ನಗರ ವ್ಯಾಪ್ತಿಯಲ್ಲಿನ ಸಮಸ್ಯೆಗಳು ಮತ್ತು ನಗರೋತ್ಥಾನದಡಿಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕವಾಗಿ ಕಾಮಗಾರಿಗಳ ಬಗ್ಗೆ ಸಚಿವರಿಗೆ ಸಾಕಷ್ಟು ದೂರುಗಳನ್ನು ಹೇಳಿದರು.
ಬಳಿಕ ನಗರದ ಬಿ.ಎಚ್.ರಸ್ತೆಯಲ್ಲಿನ ಇಂದಿರಾ ಕ್ಯಾಂಟೀನ್‌ಗೆ ನೀಡಿ ಅನ್ನ ಸಾಂಬರ್ ರುಚಿ ಸವಿದು ಅಲ್ಲಿನ ಅವ್ಯವಸ್ಥೆಯ ಬಗ್ಗೆ ಮೊಬೈಲ್ ಟಾರ್ಚ್‌ನಲ್ಲೇ ಪರಿಶೀಲಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಅಭಿಲಾಷ್ ಬಡಾವಣೆಯಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದರು.
ಈ ವೇಳೆ ಮಾತನಾಡಿದ ಸಚಿವ ರಹೀಂ ಖಾನ್, ನಗರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಇದರ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕಾಗಿದೆ. ನಗರೋತ್ಥಾನ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಪಾರದರ್ಶಕವಾಗಿ ನಡೆಯಬೇಕಿದೆ. ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಲು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜಾಗೃತಿ ವಹಿಸಬೇಕಾಗಿದೆ. ನಗರದಲ್ಲಿ ಬಾಕಿ ಇರುವ ಇ ಖಾತೆಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಅಧಿಕಾರಿಗಳು ಕ್ರಮ ವಹಿಸಬೇಕಾಗಿದೆ.
ಇಂದಿರಾ ಕ್ಯಾಂಟೀನ್ ಅವೈಜ್ಞಾನಿಕವಾಗಿ ನಿರ್ವಹಣೆ ಮಾಡುತ್ತಿದ್ದು, ಕೂಡಲೇ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಚರ್ಚಿಸಿ ನಿತ್ಯ ಗುಣಮಟ್ಟದ ಆಹಾರ ನೀಡಬೇಕಾಗಿದೆ. ಇಂದಿರಾ ಕ್ಯಾಂಟೀನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾಗಿದೆ. ಆದರೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಅವ್ಯವಸ್ಥೆಯ ಕೂಪವಾಗಿರುವುದು ದುರ್ದೈವ. ಇಲ್ಲಿ ನಿತ್ಯ ಆಹಾರದ ಮೆನು, ಸಿಸಿ ಕ್ಯಾಮರಾ, ಹಾಜರಾತಿ ಪುಸ್ತಕ, ದೀಪದ ವ್ಯವಸ್ಥೆ ಸೇರಿದಂತೆ ಇತರ ಸೌಲಭ್ಯಗಳನ್ನು ಅಳವಡಿಸಬೇಕಾಗಿದೆ. ಶೀಘ್ರದಲ್ಲೇ ಅಧಿಕಾರಿಗಳು ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಿ ನಾಗರೀಕರಿಗೆ ನಿತ್ಯ ಗುಣಮಟ್ಟದ ಆಹಾರ ನೀಡಬೇಕಾಗಿದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ನಗರದಲ್ಲಿ ಕುಡಿಯುವ ನೀರಿಗೆ ಅಭಾವ ಬರದಂತೆ ನಿಗಾವಹಿಸಬೇಕಾಗಿದೆ. ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುವ ಇ ಖಾತೆಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಿಬೇಕಾಗಿದೆ. ನಗರೋತ್ಥಾನ ಕಾಮಗಾರಿಗಳಿಗೆ ಚುರುಕು ನೀಡಿ ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಪಾಡಬೇಕಾಗಿದೆ. ನಗರದ ರಸ್ತೆಗಳಲ್ಲಿನ ಧೂಳಿನ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಬೇಕಾಗಿದೆ ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್ ನಲ್ಲಿ ಗುತ್ತಿಗೆದಾರರು ನಾಗರಿಕರಿಗೆ ನಿಯಮಿತವಾಗಿ ಗುಣಮಟ್ಟದ ಆಹಾರ ನೀಡದೆ, ವ್ಯವಸ್ಥಿತವಾಗಿ ನಿರ್ವಹಣೆ ಮಾಡದೆ ದಂಧೆ ಮಾಡುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕಾಗಿದೆ ಎಂದು ಮುಖಂಡರಾದ ಕೆ.ಎಸ್.ಅನಂತರಾಜು ತಿಳಿಸಿದರು.
ನಗರಸಭೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಇಲ್ಲದ ಕಾರಣ ಕಳೆದ ಐದಾರು ತಿಂಗಳಿನಿಂದ ಯಾವುದೇ ಸಭೆ ನಡೆದಿಲ್ಲ, ಚಟುವಟಿಕೆಗಳು ಕುಂಠಿತಗೊಂಡಿವೆ. ಇದರಿಂದಾಗಿ ಸದಸ್ಯರುಗಳಿಗೆ ಗೌರವಧನ ನೀಡುವುದು ನ್ಯಾಯವೇ ಎಂದು ನಗರಸಭೆ ಸದಸ್ಯ ವಿ.ರಮೇಶ್ ಹೇಳಿದರು.
ಈ ವೇಳೆ ನಗರಸಭೆ ಪೌರಾಯುಕ್ತೆ ಡಿ.ಎಂ.ಗೀತಾ, ಗ್ರೇಡ್ 2 ತಹಶೀಲ್ದಾರ್ ಆಶಾ, ಇಂಜಿನಿಯರ್ ಗಳಾದ ಮಾಧವಿ, ಧಾನಿಯಾ, ನಗರಸಭೆ ಸಿಬ್ಬಂದಿ, ಸದಸ್ಯರು, ಮುಖಂಡರು ಸೇರಿದಂತೆ ಇತರರು ಭಾಗವಹಿಸಿದ್ದರು.
ನಗರಸಭೆಯಲ್ಲಿ ಅಧಿಕಾರಿಗಳು ಮತ್ತು ಮುಖಂಡರೊಂದಿಗೆ ಸಭೆ ನಡೆಸಿದ ಸಚಿವ ರಹೀಂಖಾನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.