ಜಮೀರ್ ಅಹಮದ್ ಹಾಗೂ ಪಿಎಸ್‌ಐ ಜಗದೀಶ್
– ಪ್ರಜಾವಾಣಿ ಚಿತ್ರಗಳು
ಚಿಕ್ಕಬಳ್ಳಾಪುರ: ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ವ್ಯಕ್ತಿ ಪರವಾಗಿ ಸಚಿವ ಸಚಿವ ಜಮೀರ್ ಅಹಮದ್ ಖಾನ್ ತಾಲ್ಲೂಕಿನ ಪೆರೇಸಂದ್ರ ಠಾಣೆ ಪಿಎಸ್‌ಐ ಜಗದೀಶ್ ರೆಡ್ಡಿ ಅವರ ಜೊತೆ ಮಾತನಾಡಿರುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಈ ವಿಚಾರವಾಗಿ ಜೆಡಿಎಸ್ ರಾಜ್ಯ ಘಟಕವು ‘ಎಕ್ಸ್’ನಲ್ಲಿ ಸಚಿವರ ವಿರುದ್ಧ ಟೀಕಾ ಪ್ರಹಾರ ನಡೆಸಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರದ ಕೃಷ್ಣಪ್ಪ ಮತ್ತಿತರರು ತೆಲಂಗಾಣದ ವ್ಯಾಪಾರಿಗಳಿಗೆ ಜೋಳ ಮಾರಾಟ ಮಾಡಿದ್ದರು. ಆದರೆ ವ್ಯಾಪಾರಿಗಳು ಹಣ ನೀಡದೆ ಸತಾಯಿಸುತ್ತಿದ್ದರು.
ಈ ಸಂಬಂಧ ಹೈದರಾಬಾದ್‌ನ ವ್ಯಾಪಾರಿಗಳಾದ ಅಬ್ದುಲ್ ರಜಾಕ್, ಅಕ್ಬರ್ ಪಾಷಾ, ನಾಸೀರ್ ಅಹಮದ್ ವಿರುದ್ಧ ಪೆರೇಸಂದ್ರ ಠಾಣೆಯಲ್ಲಿ ದೂರು ನೀಡಲಾಗಿತ್ತು.
ಆಡಿಯೊದಲ್ಲಿ ಏನಿದೆ: ಪಿಎಸ್‌ಐ ಜಗದೀಶ್ ರೆಡ್ಡಿ ಅವರಿಗೆ ಕರೆ ಮಾಡಿರುವ ಸಚಿವರು, ‘ನಮಸ್ತೆ ಬ್ರದರ್. ಹೈದರಾಬಾದ್‌ನ ನಮ್ಮ ಸಂಬಂಧಿ ಅಕ್ಬರ್ ಪಾಷಾ ಯಾರಿಗೊ ಹಣ ಕೊಡಬೇಕಿತ್ತಂತೆ. ಅವರನ್ನು ಕರೆದುಕೊಂಡು ಬಂದಿದ್ದೀರಂತೆ. ಸ್ವಲ್ಪ ಸಹಾಯ ಮಾಡಿ ಬ್ರದರ್’ ಎಂದು ಕೇಳಿದ್ದಾರೆ.
ಆಗ ಪಿಎಸ್‌ಐ ಜಗದೀಶ್ ರೆಡ್ಡಿ, ‘ಸೆಟ್ಲು ಮಾಡಿಕೊಳ್ಳಿ ಎಂದು ಹೇಳಿದ್ದೇವೆ. ನಮ್ಮ ಮುಂದೆ ಕುಳಿತು ಮಾತನಾಡಿದ್ದರೆ ಕ್ಲಿಯರ್ ಮಾಡುತ್ತಿದ್ದೆ. ಸೆಟ್ಲು ಮಾಡಿಕೊಂಡರೆ ‘ಬಿ’ ರಿಪೋರ್ಟ್ ಹಾಕುತ್ತೇವೆ ಎಂದಿದ್ದೆವು. ಅವರಿಗೂ ಇವರಿಗೂ ಈಗೊ ಸಮಸ್ಯೆ’ ಎಂದಿದ್ದಾರೆ.
ಆಗ ಸಚಿವರು, ಈಗೊಂದು ಅವಕಾಶಕೊಡಿ ಎಂದು ಕೋರಿದ್ದಾರೆ.
‘ಎಕ್ಸ್’ನಲ್ಲಿ ಜೆಡಿಎಸ್ ಆಕ್ರೋಶ: ‘ಕರ್ನಾಟಕದ ಅನ್ನ ತಿಂದು, ಕನ್ನಡಿಗರ ಮತ ಪಡೆದು ಕನ್ನಡಿಗರಿಗೆ ದ್ರೋಹ ಬಗೆಯುವ ಸಚಿವ ಜಮೀರ್ ಅಹಮದ್ ನಿಮಗೆ ನಾಚಿಕೆಯಾಗಬೇಕು !
ರಾಜ್ಯದ ರೈತರಿಗೆ ವಂಚಿಸಿರುವ ನಿಮ್ಮ ಸಂಬಂಧಿಕರ ಪರವಾಗಿ ಸಹಾಯ ಮಾಡುವಂತೆ ಪೊಲೀಸ್ ಅಧಿಕಾರಿಗೆ ಫೋನ್ ಮಾಡಿ ಶಿಫಾರಸ್ಸು ಮಾಡಿರುವುದು ಅಕ್ಷಮ್ಯ.
ರಾಜ್ಯದ ಜವಾಬ್ದಾರಿಯುತ ಸಚಿವರಾಗಿ ವಂಚಕರ ಪರ ವಹಿಸಿ, ರಾಜ್ಯದ ರೈತರಿಗೆ ಮೋಸ ಮಾಡಲು ಆತ್ಮಸಾಕ್ಷಿ ಹೇಗೆ ಒಪ್ಪುತ್ತದೆ ?
ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರೇ, ರಾಜ್ಯದಲ್ಲಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯಕೊಡಿಸುವುದನ್ನು ಬಿಟ್ಟು ಪೊಲೀಸ್ ಇಲಾಖೆ ಸೆಟಲ್‌ಮೆಂಟ್ ಕೇಂದ್ರಗಳಾಗಿವೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ ಎಂದು ಜೆಡಿಎಸ್ ‘ಎಕ್ಸ್’ನಲ್ಲಿ ಸಚಿವರ ನಡೆಯನ್ನು ಟೀಕಿಸಿದೆ.
ಇತ್ತೀಚೆಗೆ ಪಿಎಸ್‌ಐ ಜಗದೀಶ್ ರೆಡ್ಡಿ ಅವರು ಪೆರೇಸಂದ್ರದಿಂದ ಬೇರೆ ಠಾಣೆಗೆ ವರ್ಗಾವಣೆ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.