ADVERTISEMENT

ಅಸಭ್ಯ ವರ್ತನೆ: ಕಾನ್‌ಸ್ಟೆಬಲ್‌ ವರ್ಗಾವಣೆ

ಪ್ರೀತಿಸಿ ಮದುವೆಗೆ ನಿರಾಕರಿಸಿದ ಖಾಸಗಿ ಶಾಲೆಯ ಶಿಕ್ಷಕಿಯನ್ನು ಶಾಲೆಯಲ್ಲಿ ಕೈಹಿಡಿದು ಎಳೆದಾಡಿದ ಆರೋಪ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 14:58 IST
Last Updated 9 ಜನವರಿ 2020, 14:58 IST
ರಮೇಶ್
ರಮೇಶ್   

ಗುಡಿಬಂಡೆ: ಗುಡಿಬಂಡೆ ಪೊಲೀಸ್ ಠಾಣೆಯ ಗುಪ್ತವಾರ್ತೆ ವಿಭಾಗದ ಕಾನ್‌ಸ್ಟೆಬಲ್‌ ರಮೇಶ್ ಅವರು ಪ್ರೀತಿಸಿ ಮದುವೆಗೆ ನಿರಾಕರಿಸಿದ ಖಾಸಗಿ ಶಾಲೆಯ ಶಿಕ್ಷಕಿಯನ್ನು ಶಾಲೆಯಲ್ಲಿ ಕೈಹಿಡಿದು ಎಳೆದಾಡಿ ಅಸಭ್ಯ ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಘಟನೆ ಬೆನ್ನಲ್ಲೇ ರಮೇಶ್ ಅವರನ್ನು ಚಿಕ್ಕಬಳ್ಳಾಪುರದ ಮಹಿಳಾ ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಪಟ್ಟಣದ ಲಿಟ್ಲ್ ಸ್ಟಾರ್ ಪಬ್ಲಿಕ್ ಶಾಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ನೊಂದ ಶಿಕ್ಷಕಿ ಮತ್ತು ಶಾಲೆಯ ಮುಖ್ಯಸ್ಥ ರಿಯಾಜ್ ಬೇಗ್ ಅವರು ರಮೇಶ್‌ ಅವರ ವಿರುದ್ಧ ದೂರು ನೀಡಲು ಠಾಣೆಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಆದರೆ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ರಾಜೀ ಸಂಧಾನ ನಡೆಸಿ ದೂರು ದಾಖಲಾಗದಂತೆ ನೋಡಿಕೊಳ್ಳಲಾಗಿದೆ ಎನ್ನಲಾಗಿದೆ.

‘ಶಿಕ್ಷಕಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಅವರ ಹೇಳಿಕೆಗಳನ್ನು ಪಡೆದುಕೊಂಡಿದ್ದೇವೆ. ಆದರೆ, ಶಾಲೆಯ ಪ್ರಾಂಶುಪಾಲರು ನಮಗೆ ಯಾವುದೇ ದೂರು ನೀಡಿಲ್ಲ, ಒಂದು ವೇಳೆ ದೂರು ನೀಡಿದರೆ ವಿಚಾರಣೆ ನಡೆಸುತ್ತೇವೆ’ ಎಂದು ಗುಡಿಬಂಡೆ ಸರ್ಕಲ್ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ತಿಳಿಸಿದರು.

ADVERTISEMENT

‘ಕಾನ್‌ಸ್ಟೆಬಲ್‌ ರಮೇಶ್ ನನ್ನ ಮೇಲೆ ಮತ್ತು ನನ್ನ ಶಾಲೆಯ ಶಿಕ್ಷಕಿಯ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ನಡೆಸಿದ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು ಪ್ರಯೋಜನವಾಗಿಲ್ಲ. ಆದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ನೀಡುತ್ತೇನೆ’ ಎಂದು ರಿಯಾಜ್ ಬೇಗ್ ಹೇಳಿದರು.

ಈ ಕುರಿತು ಎಸ್ಪಿ ಅಭಿನವ್ ಖರೆ ಅವರನ್ನು ವಿಚಾರಿಸಿದರೆ, ‘ರಮೇಶ್‌ ಮತ್ತು ಶಿಕ್ಷಕಿ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ರಮೇಶ್ ಅವರು ಶಿಕ್ಷಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಬಗ್ಗೆ ಮಾಹಿತಿ ಇಲ್ಲ. ರಮೇಶ್‌ ಅವರನ್ನು ಚಿಕ್ಕಬಳ್ಳಾಪುರದ ಮಹಿಳಾ ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.