
ಚಿಕ್ಕಬಳ್ಳಾಪುರ: ‘ನಾನು ಹಳ್ಳಿಗಳಿಗೆ ಭೇಟಿ ನೀಡುವ ವೇಳೆ ಸ್ಥಳಕ್ಕೆ ನಾಡಕಚೇರಿಯ ಎಲ್ಲ ಅಧಿಕಾರಿಗಳನ್ನು ಕರೆದೊಯ್ಯಲಾಗುತ್ತಿದೆ. ಈ ವೇಳೆ ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಪಿಂಚಣಿಗಳನ್ನು ಸ್ಥಳದಲ್ಲಿಯೇ ಮಂಜೂರು ಮಾಡುವ ವ್ಯವಸ್ಥೆ ಆಗುತ್ತಿದೆ’ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ತಾಲ್ಲೂಕಿನ ಆವಲಗುರ್ಕಿಯಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಗ್ರಾಮಕ್ಕೆ ಭೇಟಿ ನೀಡಿದಾಗ 15 ಜನರಿಗೆ ವಿಧವಾ ವೇತನ ನೀಡಿದ್ದೇವೆ. ನೆಟ್‌ವರ್ಕ್ ಸಮಸ್ಯೆಗಳು ಯಾವ ಗ್ರಾಮದಲ್ಲಿ ಇದೆ ಅಥವಾ ಇಲ್ಲ ಎನ್ನುವುದನ್ನು ತಾಲ್ಲೂಕು ಆಡಳಿತ ಪರಿಶೀಲಿಸಿದೆ. ಪಿಂಚಣಿಗೆ ಅರ್ಜಿ ಸಲ್ಲಿಸಿದರೆ ಆ ಅರ್ಜಿ ಮೂರ್ನಾಲ್ಕು ಮಂದಿ ಅಧಿಕಾರಿಗಳ ಲಾಗಿನ್‌ಗೆ ತಲುಪಬೇಕು. ಇದಕ್ಕೆ ತಡವಾಗುತ್ತದೆ. ನಾಡಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೇ ಗ್ರಾಮಕ್ಕೆ ಕರೆದೊಯ್ದು ಸ್ಥಳದಲ್ಲಿಯೇ ಪಿಂಚಣಿ ದೊರಕಿಸಿಕೊಡಲಾಗುವುದು ಎಂದು ಹೇಳಿದರು.
ಆವುಲಗುರ್ಕಿ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆಯಾಗಿದೆ. ಇದು ಕಾಂಗ್ರೆಸ್‌ನ ಭದ್ರಕೋಟೆ. ಇಲ್ಲಿ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿದೆ. ‘ನಮ್ಮೂರಿಗೆ ನಮ್ಮ ಶಾಸಕ’ ಕಾರ್ಯಕ್ರಮದಲ್ಲಿ ಪಂಚಾಯಿತಿ ವ್ಯಾಪ್ತಿಯ ಎರಡು ಹಳ್ಳಿಗಳಿಗೆ ಈಗಾಗಲೇ ಭೇಟಿ ನೀಡಿದ್ದೇನೆ. ಅಭಿವೃದ್ಧಿಗೆ ಹೆಚ್ಚು ಅನುದಾನ ಸಹ ನೀಡಿದ್ದೇನೆ ಎಂದು ಹೇಳಿದರು.
ನವದೆಹಲಿಯಲ್ಲಿ ನಡೆದ ಸ್ಫೋಟವು ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಗುಪ್ತಚರ ಸಂಸ್ಥೆಗಳ ವೈಫಲ್ಯ. ಕೆಂಪುಕೋಟೆಯು ರಾಷ್ಟ್ರಪತಿ, ಪ್ರಧಾನಿ ಓಡಾಡುವ ಸ್ಥಳ. ಇಂತಹ ಕಡೆಯೇ ಸ್ಫೋಟವಾಗಿದೆ ಎಂದರೆ ಇದು ಬಿಜೆಪಿ ವೈಫಲ್ಯ ಅಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೈಲಿನಲ್ಲಿ ಕೈದಿಗಳು ಫೋನ್ ಹಿಡಿದರೆ ಅದಕ್ಕೆ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿಯವರು ದೂಷಿಸುವರು. ನವದೆಹಲಿಯಲ್ಲಿ ಸ್ಫೋಟವಾದರೆ ಅದಕ್ಕೆ ಬಿಜೆಪಿ ಕಾರಣವಲ್ಲವೇ. ಈ ಸ್ಫೋಟವು ದೇಶದ ಆಂತರಿಕ ಭದ್ರತೆಗೆ ದೊಡ್ಡ ಆಘಾತ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಕಾರಣ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.