ಚಿಕ್ಕಬಳ್ಳಾಪುರ: ನೋಯ್ಡಾದಿಂದ ಬೆಂಗಳೂರಿಗೆ ಕಂಟೇನರ್‌ನಲ್ಲಿ ಸಾಗಿಸುತ್ತಿದ್ದ ₹ 3 ಕೋಟಿ ಮೌಲ್ಯದ ಮೊಬೈಲ್‌ಗಳು ಕಳ್ಳತನ ಮಾಡಿದ ಪ್ರಕರಣದಲ್ಲಿ ಜಿಲ್ಲೆಯ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದು 56 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
2024ರ ನ.22ರಂದು ನಡೆದಿದ್ದ ಈ ಪ್ರಕರಣವು ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ನೋಯ್ದಾದಿಂದ ಬೆಂಗಳೂರಿಗೆ ಕಂಟೇನರ್‌ನಲ್ಲಿ ರೆಡ್‌ಮೀ ಕಂಪನಿಯ 3,400 ಮೊಬೈಲ್‌ಗಳನ್ನು 170 ಬಾಕ್ಸ್‌ಗಳಲ್ಲಿ ಮತ್ತು ಪೋಕ್ ಕಂಪನಿಯ 3,260 ಮೊಬೈಲ್‌ಗಳನ್ನು 163 ಬಾಕ್ಸ್‌ಗಳಲ್ಲಿ ಸಾಗಿಸಲಾಗುತ್ತಿತ್ತು.
ಸೇಪ್ ಸೀಡ್ ಕ್ಯಾರಿಯರ್ ಎನ್ನುವ ಖಾಸಗಿ ಟ್ರಾನ್ಸ್‌ಪೋರ್ಟ್ ಸಂಸ್ಥೆಯ ವಾಹನದ ಮೂಲಕ ಮೊಬೈಲ್‌ಗಳನ್ನು ಬೆಂಗಳೂರಿಗೆ ತರಲಾಗುತ್ತಿತ್ತು.
ತಾಲ್ಲೂಕಿನ ರೆಡ್ಡಿಗೊಲ್ಲಾರಹಳ್ಳಿ ಗ್ರಾಮದ ಕ್ರಾಸ್ ಬಳಿ ಎನ್ಎಲ್ 01 ಎಎಫ್ 2743 ಸಂಖ್ಯೆಯ ಕಂಟೇನರ್ ನಿಲ್ಲಿಸಿ ಚಾಲಕ ರಾಹುಲ್ ನಾಪತ್ತೆ ಆಗಿದ್ದ. ಕಂಟೇನರ್ ನಿಗದಿತ ಸಮಯಕ್ಕೆ ಬೆಂಗಳೂರು ತಲುಪಿರಲಿಲ್ಲ. ಕಂಟೇನರ್ ನಿಲುಗಡೆ ಆಗಿರುವುದು ಜಿಪಿಎಸ್ ಮೂಲಕ ಕಂಪನಿಯವರ ಗಮನಕ್ಕೆ ಬಂದಿತ್ತು. ಅವರು ಪೆರೇಸಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಚಾಲಕ ರಾಹುಲ್ ಇತರೆ ಆರೋಪಿಗಳ ಜೊತೆ ಸೇರಿ ಒಟ್ಟು 257 ಬಾಕ್ಸ್‌ಗಳಲ್ಲಿದ್ದ 5,140 ಮೊಬೈಲ್‌ಗಳನ್ನು ಕಳ್ಳತನ ಮಾಡಿದ್ದರು. ರೆಡ್ಡಿಗೊಲ್ಲಾರಹಳ್ಳಿ ಬಳಿ ಕಂಟೇನರ್ ಬಿಟ್ಟು ಪರಾರಿ ಆಗಿದ್ದರು.
ಈ ಸಂಬಂಧ ಟ್ರಾನ್ಸ್‌ಪೋರ್ಟ್ ಕಂಪನಿ ವ್ಯವಸ್ಥಾಪಕ ಪದ್ಮನಾಭಂ ಪಿ. ಪೆರೇಸಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಕಂಟೇನರ್ ಚಾಲಕ ಹರಿಯಾಣದ ಮಿಯೊ ಗ್ರಾಮದ ರಾಹುಲ್ ಎಂಬಾತನನ್ನು ಬಂಧಿಸಿದ್ದರು. ನಂತರ ಪ್ರಕರಣವನ್ನು ಪೆರೇಸಂದ್ರ ಠಾಣೆಯಿಂದ ಚಿಕ್ಕಬಳ್ಳಾಪುರ ಸಿಇಎನ್ ಠಾಣೆಗೆ ವರ್ಗಾಯಿಸಲಾಗಿತ್ತು.
ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಪ್ರಕರಣದ ವಿವರ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಪ್ರಕರಣದ ಪತ್ತೆಗೆ ಮೊಬೈಲ್ ಕಂಪನಿ ಮತ್ತು ಟ್ರಾನ್ಸ್‌ಪೋರ್ಟ್ ಕಂಪನಿಯು ಆರಂಭದಿಂದ ಸಹಕಾರ ನೀಡಿದೆ ಎಂದರು.
‘ಬಂಧಿತರು ಈ ಹಿಂದೆಯೂ ಮೊಬೈಲ್ ಸೇರಿದಂತೆ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿ ಆಗಿದ್ದಾರೆ. ಆರೋಪಿಗಳು ರಾಜಸ್ತಾನದ ಮೇವಾರ್ ವಲಯದವರಾಗಿದ್ದಾರೆ. ಪಶ್ಚಿಮ ಬಂಗಾಳದ ಇಬ್ಬರನ್ನು ಬಂಧಿಸಿದ್ದೆವು. ಅವರು ಜಾಮೀನಿನ ಮೇಲೆ ಹೊರ ಬಂದಿದ್ದು ತನಿಖೆಗೆ ಸಹಕರಿಸುತ್ತಿದ್ದಾರೆ’ ಎಂದು ತಿಳಿಸಿದರು.
ನಮ್ಮ ಪೊಲೀಸರು ಆರೋಪಿಗಳ ಬಂಧನಕ್ಕೆ ಐದು ಸಲ ಹರಿಯಾಣಕ್ಕೆ ತೆರಳಿದ್ದರು. ಕೋಲ್ಕತ್ತಾ, ಚೆನ್ನೈ, ನವದೆಹಲಿಗೂ ಭೇಟಿ ನೀಡಿದ್ದರು. ಕೊನೆ ಕ್ಷಣದಲ್ಲಿ ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದು ಅಂತಿಮವಾಗಿ ಬಂಧಿಸಲಾಯಿತು. ಆರೋಪಿಗಳು ಕೋಟ್ಯಂತರ ಮೊತ್ತದ ಮೊಬೈಲ್‌ಗಳನ್ನು ₹ 90 ಲಕ್ಷದಿಂದ ₹ 95 ಲಕ್ಷದವರೆಗೆ ಮಾರಾಟ ಮಾಡಿದ್ದಾರೆ ಎಂದು ತಿಳಿಸಿದರು.
ಕಳ್ಳತನ ಮಾಡಿರುವ ಮೊಬೈಲ್‌ಗಳನ್ನು ಖರೀದಿಸುವ ಜಾಲವೇ ಇದೆ. ಈ ಮೊಬೈಲ್ ಖರೀದಿಸಿರುವವರ ಮೇಲೂ ಪ್ರಕರಣ ದಾಖಲಿಸಿದ್ದೇವೆ. ನಮಗೆ ಕಳ್ಳತನದ ಮೊಬೈಲ್ ಮಾರಾಟ ಮಾಡುತ್ತಿದ್ದಾರೆ ಎನ್ನುವುದು ಗ್ರಾಹಕರಿಗೂ ತಿಳಿದಿಲ್ಲ. ಇದುವರೆಗೆ ಒಟ್ಟು 56 ಮೊಬೈಲ್‌ಗಳನ್ನು ಪತ್ತೆ ಮಾಡಲಾಗಿದೆ. ಆರೋಪಿಗಳು ಕಳುವು ಮಾಡಿದ ಮೊಬೈಲ್‌ಗಳನ್ನು ನವದೆಹಲಿಯಲ್ಲಿ ಮಾರಾಟ ಮಾಡಿದ್ದಾರೆ. ಅಲ್ಲಿಂದ ದೇಶದ ವಿವಿಧ ರಾಜ್ಯಗಳಿಂದ 300ರಿಂದ 400 ಮೊಬೈಲ್‌ಗಳಂತೆ ಬಿಡಿ ಬಿಡಿಯಾಗಿ ಮಾರಾಟ ಮಾಡಿದ್ದಾರೆ. ಕಳ್ಳತನ ಮಾಡಿರುವ ಎಲ್ಲ ಮೊಬೈಲ್‌ಗಳ ಐಎಂಇಐ ನಂಬರ್‌ಗಳನ್ನು ದೂರಸಂಪರ್ಕ ಇಲಾಖೆಗೆ ನೀಡಿದ್ದು ಬ್ಲಾಕ್ ಮಾಡಿಸಲಾಗಿದೆ ಎಂದು ವಿವರಿಸಿದರು.
ಪ್ರಕರಣದ ಪತ್ತೆಯಲ್ಲಿ ಪಾಲ್ಗೊಂಡ ಸಿಬ್ಬಂದಿಗೆ ಬಹುಮಾನ ನೀಡಲಾಗುವುದು ಎಂದು ಪ್ರಕಟಿಸಿದರು.
ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್‌ಪಿ ರವಿಕುಮಾರ್ ಹಾಗೂ ಸಿಬ್ಬಂದಿ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಬಂಧಿತ ಆರೋಪಿಗಳು
ಪ್ರಕರಣದ ಸಂಬಂಧ ಒಟ್ಟು 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಂಟೇನರ್ ಚಾಲಕ ರಾಹುಲ್ ಇಮ್ರಾನ್ ಮೊಹಮದ್ ಮುಸ್ತಫಾ ಅನೂಪ್ ರಾಯ್ ಅಭಿಜಿತ್ ಪೌಲ್ ಸಕೃಲ್ಲಾ ಯೂಸಫ್ ಖಾನ್ ಬಂಧಿತರು. ಕಳ್ಳತನ ಮಾಡಿದ ಮೊಬೈಲ್‌ಗಳನ್ನು ಸಾಗಿಸಲು ಬಳಸಿದ ರಾಜಸ್ತಾನ ನೋಂದಣಿಯ ಟ್ರಕ್ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.