ಚಿಕ್ಕಬಳ್ಳಾಪುರ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ಪೊಲೀಸ್ ಸರ್ಪಗಾವಲು. ಅಗ್ನಿಶಾಮಕ ದಳದ ಸಿಬ್ಬಂದಿ ಸಹ ವಾಹನಗಳೊಂದಿಗೆ ಹಾಜರು...ಹೀಗೆ ಏಕಾಏಕಿ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ನೋಡಿದ ಸಾರ್ವಜನಿಕರಿಗೆ ಅಯ್ಯೊ ಇಲ್ಲಿ ಏನಾಯಿತು ಎನ್ನುವ ಆತಂಕ ಜನರಲ್ಲಿ.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಗೃಹರಕ್ಷಕ ದಳ ಹಾಗೂ ಎಸ್‌ಡಿಆರ್‌ಎಫ್‌ನಿಂದ ಆಪರೇಷನ್ ಅಭ್ಯಾಸ್ ಅಣಕು ಕವಾಯತು ನಡೆಯಿತು.
ಸಾರ್ವಜನಿಕ ಬಸ್ ಅನ್ನು ಭಯೋತ್ಪಾದಕರು ಒತ್ತೆ ಇರಿಸಿಕೊಂಡರೆ ಏನು ಮಾಡಬೇಕು, ಸಾರ್ವಜನಿಕ ಸ್ಥಳದಲ್ಲಿ ಶಂಕಾಸ್ಪದ ಬ್ಯಾಗ್ ಕಾಣಿಸಿದರೆ ಯಾವ ರೀತಿ ವರ್ತಿಸಬೇಕು, ಆಕಸ್ಮಿಕ ಅಗ್ನಿ ದುರಂತ ಸಮಯದಲ್ಲಿ ಹೇಗೆ ರಕ್ಷಣೆ ಮಾಡಲಾಗುತ್ತದೆ ಹೀಗೆ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ತುರ್ತುಸಂದರ್ಭದಲ್ಲಿ ಯಾರು ಹೇಗೆ ಕರ್ತವ್ಯ ನಿರ್ವಹಿಸುತ್ತಾರೆ, ಸಾರ್ವಜನಿಕರು ಹೇಗೆ ವರ್ತಿಸಬೇಕು ಎಂಬ ಬಗ್ಗೆಯೂ ಅರಿವು ಮೂಡಿಸಲಾಯಿತು.
ಡ್ರೋಣ್ ದಾಳಿ ಆದಾಗ ಯಾವ ರೀತಿ ಸಾರ್ವಜನಿಕರು ವರ್ತಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಬಾಂಬ್ ಸೇರಿದಂತೆ ಸ್ಫೋಟಕಗಳು ಕಂಡುಬಂದಾಗ ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳ ಹೇಗೆ ಪತ್ತೆ ಮಾಡಿ ರಕ್ಷಣೆ ಮಾಡಲಿದೆ, ಅಗ್ನಿ ದುರಂತ ಸಂಭವಿಸಿದಾಗ ಅಗ್ನಿಶಾಮಕ ದಳ ಸಿಬ್ಬಂದಿ ಯಾವ ರೀತಿ ಕಾರ್ಯಾಚರಣೆ ನಡೆಸಿ, ಸಾರ್ವಜನಿಕರ ಜೀವ ಉಳಿಸುವರು ಎನ್ನುವ ವಿಚಾರಗಳ ಬಗ್ಗೆ ತಿಳಿಸಲಾಯಿತು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಬಸ್ ನಿಲ್ದಾಣದಲ್ಲಿ ಆಪರೇಷನ್ ಅಭ್ಯಾಸ್ ನಡೆಸಲಾಯಿತು. ತುರ್ತು ಘಟನೆಗಳು ನಡೆದಾಗ ಸೈರನ್ ಮೊಳಗುತ್ತದೆ. ಈ ವೇಳೆ ರಕ್ಷಣಾತ್ಮಕ, ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದರು.
ಪೊಲೀಸ್ ಇಲಾಖೆ, ಸೇನೆ, ಅಗ್ನಿಶಾಮಕ ದಳಗಳು ಬಂದು ಕಾರ್ಯಾಚರಣೆ ನಡೆಸಲು ಅನುಕೂಲ ಆಗಬೇಕಾದರೆ ಜನಸಂದಣಿ ಇರಬಾರದು. ಜನಸೇರಿದಾಗ ಆಂಬುಲೆನ್ಸ್ ಬರಲು ಸಾಧ್ಯವಾಗುವುದಿಲ್ಲ. ರಕ್ಷಣೆ ಸಾಧ್ಯವಿಲ್ಲ ಎಂದು ಹೇಳಿದರು.
ಅಗ್ನಿ ದುರಂತ ನಡೆದಾಗ ಸಾರ್ವಜನಿಕರ ಸ್ಪಂದನೆ ಹೇಗಿರಬೇಕು, ಅಪಾಯದ ಅಂಚಿನಲ್ಲಿರುವವರಿಗೆ ತುರ್ತು ಚಿಕಿತ್ಸೆ ಕೊಡಿಸುವ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಎಲ್ಲ ಇಲಾಖೆಗಳೂ ಈ ಅಣಕು ಪ್ರದರ್ಶನದಲ್ಲಿ ಭಾಗವಹಿಸಿವೆ. ಶ್ವಾನದಳದಿಂದ ಪರಿಶೀಲನೆ ಕಾರ್ಯ ನಡೆದಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ರೈ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ಹಾಗೂ ಅಧಿಕಾರಿಗಳು ಅಣಕು ಕಾರ್ಯಾಚರಣೆ ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.