ADVERTISEMENT

ಗೋದಾಮಿಗೆ ಶಾಸಕ ದಿಢೀರ್‌ ಭೇಟಿ

ನ್ಯಾಯಬೆಲೆ ಅಂಗಡಿ: ರಾಗಿ ಖರೀದಿಯಲ್ಲಿ ಭಾರಿ ಅವ್ಯವಹಾರ ಆರೋಪ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 3:37 IST
Last Updated 13 ಜೂನ್ 2021, 3:37 IST
ಬಾಗೇಪಲ್ಲಿ ಪಟ್ಟಣದ ಗೂಳೂರು ರಸ್ತೆಯಲ್ಲಿನ ಆಹಾರ ಮಳಿಗೆಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ದಿಢೀರ್‌ ಭೇಟಿ ನೀಡಿದರು. ತಹಶೀಲ್ದಾರ್ ಡಿ.ವಿ.ದಿವಾಕರ್ ಇದ್ದರು
ಬಾಗೇಪಲ್ಲಿ ಪಟ್ಟಣದ ಗೂಳೂರು ರಸ್ತೆಯಲ್ಲಿನ ಆಹಾರ ಮಳಿಗೆಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ದಿಢೀರ್‌ ಭೇಟಿ ನೀಡಿದರು. ತಹಶೀಲ್ದಾರ್ ಡಿ.ವಿ.ದಿವಾಕರ್ ಇದ್ದರು   

ಬಾಗೇಪಲ್ಲಿ: ಗೂಳೂರು ರಸ್ತೆಯಲ್ಲಿನ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಸಂಗ್ರಹಿಸಿರುವ ರಾಗಿ, ಅಕ್ಕಿ, ಗೋಧಿಯ ಸಂಗ್ರಹಣಾ ಗೋದಾಮಿಗೆ ಶನಿವಾರ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅನಿರೀಕ್ಷಿತವಾಗಿ ದಾಳಿ ಮಾಡಿ, ಸಂಗ್ರಹಣೆ ಹಾಗೂ ಖರೀದಿಯಲ್ಲಿನ ಅವ್ಯವಹಾರ ಬಯಲಿಗೆಳೆದಿದ್ದಾರೆ.

ಜೂನ್ 12ರ ಶನಿವಾರದವರೆಗೆ ರೈತರಿಂದ ರಾಗಿ ಖರೀದಿ, ನ್ಯಾಯಬೆಲೆ ಅಂಗಡಿಗಳಿಗೆ ವಿತರಣೆ ಮಾಡಿರುವ, ರಾಗಿ, ಅಕ್ಕಿ, ಗೋಧಿ ಸಂಗ್ರಹಣೆ ಹಾಗೂ ರಾಗಿ ಬೆಳೆದಿರುವ ರೈತರ ಮಾಹಿತಿಯ ಅಂಕಿಅಂಶಗಳ ಪ್ರತಿಗಳನ್ನು ಆಹಾರ ಶಾಖೆಯ ಅಧಿಕಾರಿಗಳಿಂದ ಪಡೆದುಕೊಂಡರು.

ಗೋದಾಮುಗಳಲ್ಲಿ ಇರುವ ರಾಗಿ, ಅಕ್ಕಿ, ಗೋಧಿ ಮೂಟೆಗಳನ್ನುಎಣಿಸುವಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ತಮ್ಮ ಆಪ್ತ ಸಹಾಯಕ ಮೋಹನ್‌ಗೆ ಸೂಚಿಸಿದರು. ಸಂಗ್ರಹಣೆ ಮಾಡಿರುವ ವಿವರಗಳನ್ನು ನೀಡಲು ಆಹಾರ ಶಾಖೆಯ ಅಧಿಕಾರಿಗಳು ತಡಬಡಾಯಿಸಿದಾಗ, ಅಂಕಿಅಂಶಗಳ ಮಾಹಿತಿ ಇಲ್ಲದಿದ್ದರೆ ಏನು ಕೆಲಸ ಮಾಡುತ್ತಿದ್ದೀರಿ? ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಗ್ರಹಣಾ ಮೂಟೆಗಳ ಅಂಕಿಅಂಶಗಳನ್ನು ಪಡೆದುಕೊಂಡರು.

ADVERTISEMENT

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ‘ಕಳೆದ 2 ದಿನಗಳ ಹಿಂದೆ ನ್ಯಾಯಬೆಲೆ ಅಂಗಡಿಯವರು ದಿನಸಿ ವಿತರಣೆಯಲ್ಲಿ 2 ಮೂಟೆ ಕಡಿಮೆ ನೀಡುತ್ತಿದ್ದಾರೆ. ಪಡಿತರದಾರರಿಗೆ ಹಂಚಲು ಆಗುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಮೌಖಿಕವಾಗಿ ದೂರು ನೀಡಿದ್ದರು. 600 ಕ್ವಿಂಟಲ್‌ನಷ್ಟು ಅಕ್ಕಿ, 840 ಕ್ವಿಂಟಲ್‌ ರಾಗಿ, 400 ಕ್ವಿಂಟಲ್ ಅಕ್ಕಿ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಆಗದೇ ಇರುವ ಮಾಹಿತಿ ಲಭ್ಯವಾಗಿದೆ’ ಎಂದು
ತಿಳಿಸಿದರು.

‘ಕೊರೊನಾ ಸಂಕಷ್ಟ ಕಾಲದಲ್ಲಿ ಬಡವರಿಗೆ ನೀಡುತ್ತಿರುವ ಅಕ್ಕಿ, ಗೋಧಿ, ರಾಗಿ ಮೂಟೆಗಳನ್ನು ದಲ್ಲಾಳಿಗಳು ದುರ್ಬಳಕೆ ಮಾಡಿದ್ದಾರೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಬಡವರ ಅನ್ನಕ್ಕೆ ಕನ್ನ ಹಾಕಿ, ಸರ್ಕಾರಿ ಹಣ ದುರ್ಬಳಕೆ, ಕರ್ತವ್ಯಲೋಪ ಮಾಡಿರುವ ಅಧಿಕಾರಿಗಳು, ಸಿಬ್ಬಂದಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

‘ರಾಗಿ ಖರೀದಿಯಲ್ಲಿ ಭಾರಿ ಅವ್ಯವಹಾರ ಆಗಿದೆ. ರಾಗಿ ಮಾರಾಟ ಮಾಡದೇ ಇರುವವರ ಖಾತೆಗಳಿಗೆ ಲಕ್ಷಾಂತರ ಹಣ ಜಮಾ ಆಗಿದೆ. ಸರ್ಕಾರಿ ಹಣ ದುರುಪಯೋಗ ಆಗಿದೆ. ಕ್ಷೇತ್ರದಲ್ಲಿ 28 ಸಾವಿರ ಕ್ವಿಂಟಲ್‌ನಷ್ಟು ರಾಗಿ ಬೆಳೆದಿದ್ದಾರೆ. ಆದರೆ 23 ಕ್ವಿಂಟಲ್‌ನಷ್ಟು ಮಾತ್ರ ಸಂಗ್ರಹಣೆ ಆಗಿದೆ. ಉಳಿದ 5 ಸಾವಿರ ಕ್ವಿಂಟಲ್ ರಾಗಿ ಮೂಟೆಗಳು ಪತ್ತೆ ಇಲ್ಲ. ಸೋಮವಾರ ಕೃಷಿ ಅಧಿಕಾರಿಗಳು, ತಹಶೀಲ್ದಾರ್‌ರೊಂದಿಗೆ ಚರ್ಚಿಸಲಾಗುವುದು. ಈ ಸಂಬಂಧ ತನಿಖೆ ಮಾಡಿಸಲಾಗುವುದು’ ಎಂದು ತಿಳಿಸಿದರು.

ತಹಶೀಲ್ದಾರ್ ಡಿ.ವಿ.ದಿವಾಕರ್ ಪ್ರತಿಕ್ರಿಯಿಸಿ, ಕೊರೊನಾ ಸಂದರ್ಭದಲ್ಲಿ ಆಹಾರ ಶಾಖೆಯ ವ್ಯವಹಾರ, ವಿತರಣೆ, ಖರೀದಿ ಮಾಡಿರುವ ಬಗ್ಗೆ ಮಾಹಿತಿ ಪಡೆಯಲು ಆಗಿಲ್ಲ. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರಿಗೆ ಮೌಖಿಕ ದೂರಿನಂತೆ ಗೋದಾಮುಗಳಿಗೆ ದಾಳಿ ಮಾಡಿದ್ದಾರೆ. ಅಂಕಿಅಂಶಗಳ ಮಾಹಿತಿ ಸಂಗ್ರಹಣೆ ಮಾಡಲಾಗಿದೆ. ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯ ಲಾಗುವುದು.ಸೋಮವಾರದವರೆಗೂ ಆಹಾರ ಮಳಿಗೆಗಳಿಗೆ ಸೀಲುಮುದ್ರೆ ಹಾಕಲಾಗಿದೆ ಎಂದು
ತಿಳಿಸಿದರು.

ಆಹಾರ ಇಲಾಖೆಯ ಲೆಕ್ಕ ವ್ಯವಸ್ಥಾಪಕ ವಿಜಯ್ ಕುಮಾರ್, ಶಾಖೆಯ ತಾಲ್ಲೂಕು ಶಿರಸ್ತೇದಾರ್ ರಾಜಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿನರಸಿಂಹಪ್ಪ, ಮುಖಂಡ ಅಮರನಾಥರೆಡ್ಡಿ, ಕೆಎನ್‌ಎಸ್ ಕೃಷ್ಣಪ್ಪ, ಪುರಸಭೆ ಸದಸ್ಯ ಅಶೋಕ್ ರೆಡ್ಡಿ, ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.