ADVERTISEMENT

ಜೀವನದಲ್ಲಿ ಸಾಧಕರ ತತ್ವಾದರ್ಶ ರೂಢಿಸಿಕೊಳ್ಳಿ

ಮಂಗಿಶೆಟ್ಟಿ ನರಸಿಂಹಯ್ಯ, ರಂಗಮ್ಮ ಟ್ರಸ್ಟ್ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳ ವಿತರಣೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 12:18 IST
Last Updated 22 ಜೂನ್ 2019, 12:18 IST
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು   

ಚಿಕ್ಕಬಳ್ಳಾಪುರ: ‘ದೇಶಕ್ಕೆ ಕೊಡುಗೆ ನೀಡಿದ ಸರ್.ಎಂ.ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ, ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ಅವರಂತಹ ಮಹಾನ್ ಸಾಧಕರ ತತ್ವ ಆದರ್ಶಗಳನ್ನು ಮಕ್ಕಳು ರೂಢಿಸಿಕೊಳ್ಳಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ನಾಗೇಶ್ ತಿಳಿಸಿದರು.

ಮಂಗಿಶೆಟ್ಟಿ ನರಸಿಂಹಯ್ಯ, ರಂಗಮ್ಮ ಟ್ರಸ್ಟ್ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ರಿಂದ 7 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಪುಸ್ತಕ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ಸವಲತ್ತುಗಳನ್ನು ಒದಗಿಸುತ್ತಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಶ್ರಮಿಸುತ್ತಿದ್ದಾರೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಕಡಿಮೆ ಇಲ್ಲ. ವಿದ್ಯಾರ್ಥಿಗಳು, ಪೋಷಕರು ಸರ್ಕಾರದ ಎಲ್ಲ ರೀತಿಯ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಎಷ್ಟೋ ಜನರು ಈ ದೇಶ ಹಾಗೂ ನಾಡು ಕಟ್ಟುವಲ್ಲಿ ಸಾಧನೆ ಮಾಡಿ ಸಾಧಕರಾಗಿದ್ದಾರೆ. ಅವರಂತೆ ಸಾಧಕರಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅವಧಿಯನ್ನು ವ್ಯರ್ಥ ಮಾಡದೆ ಪರಿಶ್ರಮದಿಂದ, ಛಲದಿಂದ ಓದಬೇಕು. ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ದಿಸೆಯಲ್ಲಿ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದರು.

ಟ್ರಸ್ಟ್ ಅಧ್ಯಕ್ಷ ಎಂ.ಎನ್.ಕೃಷ್ಣಮೂರ್ತಿ ಮಾತನಾಡಿ, ‘ಮಂಗಿಶೆಟ್ಟಿ ನರಸಿಂಹಯ್ಯ ಅವರು ಶಿಕ್ಷಣ ಕ್ಷೇತ್ರದ ಒಳಿತಿಗಾಗಿ ದೂರದೃಷ್ಟಿ ಹೊಂದಿ ಸಂಕಲ್ಪ ತೊಟ್ಟವರಾಗಿದ್ದರು. ಅದರ ಫಲವಾಗಿ ಕಳೆದ 5-6 ವರ್ಷಗಳಿಂದ ಟ್ರಸ್ಟ್‌ ಅನೇಕ ಬಗೆಯ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತ ಬರುತ್ತಿದೆ’ ಎಂದು ಹೇಳಿದರು.

ಶಿಡ್ಲಘಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಶಿವಪುತ್ರಪ್ಪ, ಟ್ರಸ್ಟ್ ಕಾರ್ಯದರ್ಶಿ ಉತ್ತಮ್ ಚಂದ್‌, ಸಹ ಕಾರ್ಯದರ್ಶಿ ಎಂ.ಎನ್.ಶ್ರೀನಿವಾಸ್, ಸದಸ್ಯರುಗಳಾದ ವಿ.ಕೃಷ್ಣಮೂರ್ತಿ, ವಕೀಲ ರಘುರಾಮ್, ಜಿ.ವಿ.ನಾಗರಾಜ್, ಎ.ವಿ.ಬೈರೇಗೌಡ, ಎಂ.ಕೃಷ್ಣಪ್ಪ, ನರಸಿಂಹಮೂರ್ತಿ, ಚಂದ್ರಶೇಖರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT