ADVERTISEMENT

ಬಾಗೇಪಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿ ಸ್ಥಗಿತ: ಆಹಾರ ವಿತರಿಸದ ಪುರಸಭಾ ಆಡಳಿತ

ಬಾಗೇಪಲ್ಲಿಯಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿ ಅರ್ಧಕ್ಕೆ ಸ್ಥಗಿತ

ಪಿ.ಎಸ್.ರಾಜೇಶ್
Published 17 ಮೇ 2021, 3:03 IST
Last Updated 17 ಮೇ 2021, 3:03 IST
ಬಾಗೇಪಲ್ಲಿ ಪಟ್ಟಣದ ಅಂಗಡಿ ಮಳಿಗೆಯ ಮುಂದೆ ವೃದ್ಧ ಮಹಿಳೆಯರಿಗೆ ಊಟ ಇಲ್ಲದೇ ಮಲಗಿರುವುದು
ಬಾಗೇಪಲ್ಲಿ ಪಟ್ಟಣದ ಅಂಗಡಿ ಮಳಿಗೆಯ ಮುಂದೆ ವೃದ್ಧ ಮಹಿಳೆಯರಿಗೆ ಊಟ ಇಲ್ಲದೇ ಮಲಗಿರುವುದು   

ಬಾಗೇಪಲ್ಲಿ: ಲಾಕ್‌ಡೌನ್ ಸಂದರ್ಭದಲ್ಲಿ ನಿರ್ಗತಿಕರನ್ನು,ಭಿಕ್ಷುಕರನ್ನು ಗುರುತಿಸಿ ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಊಟ ಕೊಡಲು ಸರ್ಕಾರ ಆದೇಶ ಹೊರಡಿಸಿದ್ದರೂ, ಇದುವರೆಗೂ ಪುರಸಭೆ ಅಧಿಕಾರಿಗಳು ನಿರ್ಗತಿಕರಿಗೆ ಆಹಾರ ವಿತರಣೆ ಮಾಡಿಲ್ಲ.

ಪುರಸಭಾ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳು ಇವೆ. ಸಿವಿಲ್ ನ್ಯಾಯಾಲಯದಿಂದ ನ್ಯಾಷನಲ್ ಕಾಲೇಜಿನವರೆಗೂ ವ್ಯಾಪಿಸಿದೆ. ಪಟ್ಟಣದಲ್ಲಿ 2011ರ ಗಣತಿ ಪ್ರಕಾರ 27,030 ಜನಸಂಖ್ಯೆ ಇದೆ. ಪುರುಷರು 13,963 ಮಂದಿ ಹಾಗೂ ಮಹಿಳೆಯರು 13,067 ಮಂದಿ ಇದ್ದಾರೆ.

ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ 212 ಸಕ್ರಿಯ ಸೋಂಕಿತ ಪ್ರಕರಣ ಇದ್ದು, 140 ಮಂದಿ ಆಸ್ಪತ್ರೆ, ಕೋವಿಡ್ ಚಿಕಿತ್ಸಾ ಕೇಂದ್ರ ಹಾಗೂ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ.

ADVERTISEMENT

ಪಟ್ಟಣದ ಬಸ್ ನಿಲ್ದಾಣ, ಮುಖ್ಯರಸ್ತೆ ಅಂಗಡಿಗಳ ಹಾಗೂ ಮರಗಳ ಕೆಳಗೆ ನಿರ್ಗತಿಕರು, ಭಿಕ್ಷುಕರು, ವೃದ್ಧರು ಊಟ ಇಲ್ಲದೇ ಪರದಾಡುತ್ತಿದ್ದಾರೆ. ಊಟ ಇಲ್ಲದೇ ನಿಶಕ್ತರಾಗಿ, ಮರ, ಅಂಗಡಿಗಳ ಕೆಳಗೆ ಮಲಗುತ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳಿಂದ ಹಣ್ಣುಗಳನ್ನು ಬೇಡಿ ತಿನ್ನುತ್ತಿದ್ದಾರೆ.

ಪಟ್ಟಣದಲ್ಲಿ 30 ಮಂದಿ ನಿರ್ಗತಿಕರು, ಮಾನಸಿಕ ಅಸ್ವಸ್ಥರು, ಭಿಕ್ಷುಕರು, ವೃದ್ಧರು ಇದ್ದಾರೆ.ಇದುವರೆಗೂ ಪುರಸಭೆ ಅಧಿಕಾರಿಗಳು ಇಂತವರನ್ನು ಗುರುತಿಸಿಲ್ಲ. ಪಟ್ಟಿಯನ್ನೂ ಸಿದ್ಧಪಡಿಸಿಲ್ಲ. ಆಹಾರ ವಿತರಣೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಪಟ್ಟಣದ ಸಂತೇಮೈದಾನದಲ್ಲಿ ಇಂದಿರಾ ಕ್ಯಾಂಟೀನ್‌ನ ಕಟ್ಟಡ ಅರ್ಧ ಕಾಮಗಾರಿ ನಡೆದಿದೆ. ಪಟ್ಟಣಕ್ಕೆ ದೂರ ಇದೆ ಎಂದು ಕೆಲವರು ವಿರೋಧ ಮಾಡಿ, ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದಿರಾ ಕ್ಯಾಂಟೀನ್ ಮಾಡುವಂತೆ ಮನವಿ ಮಾಡಿದ್ದರು. ಇದರಿಂದ ಜಾಗದ ಗೊಂದಲದಿಂದ ಇಂದಿರಾ ಕ್ಯಾಂಟೀನ್ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಇದರಿಂದ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡವೇ ಇಲ್ಲವಾಗಿದೆ.

‘ಇಂದಿರಾ ಕ್ಯಾಂಟೀನ್‌ಗೆ ಕಟ್ಟಡ ಇಲ್ಲದೇ ಇರುವುದರಿಂದ, ನಿರ್ಗತಿಕರನ್ನು ಗುರುತಿಸಿ, ಇರುವ ಕಡೆಗೆ ಹೋಗಿ ಆಹಾರ ವಿತರಣೆ ಮಾಡಬಹುದಾಗಿತ್ತು. ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಹಾರ ವಿತರಣೆ ಮಾಡಿಲ್ಲ’ ಎಂದು ಹಿರಿಯ ನಾಗರಿಕ ಆಂಜಿನಪ್ಪ ದೂರಿದರು.

‘ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ಇಲ್ಲದೇ ಇರುವುದರಿಂದ ಆಹಾರ ಹಂಚಲು ಆಗಿಲ್ಲ. ಮುಂದಿನ ದಿನಗಳಲ್ಲಿ ಪಟ್ಟಣದ ವ್ಯಾಪ್ತಿಯಲ್ಲಿ ಮಾನಸಿಕ ಅಸ್ವಸ್ಥ, ನಿರ್ಗತಿಕರನ್ನು, ವೃದ್ಧರನ್ನು, ಭಿಕ್ಷುಕರನ್ನು ಗುರುತಿಸಿ, ಪ್ರತಿದಿನ ಅವರು ಇರುವ ಕಡೆಗೆ ಪುರಸಭೆ ಸಿಬ್ಬಂದಿ ಹೋಗಿ ಮೂರು ಬಾರಿ ಆಹಾರ, ನೀರು ಹಂಚುತ್ತಾರೆ’ ಎಂದು ಪುರಸಭೆ ಪ್ರಭಾರ ಮುಖ್ಯಾಧಿಕಾರಿ ನಾಗರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.