ADVERTISEMENT

ನಗರಸಭೆ ಚುನಾವಣೆ: ಅಧಿಸೂಚನೆ ಪ್ರಕಟ

ನಾಮಪತ್ರ ಸ್ವೀಕರಿಸಲು ನಾಲ್ಕು ಕಡೆಗಳಲ್ಲಿ ಚುನಾವಣಾಧಿಕಾರಿಗಳ ಕಾರ್ಯಾಲಯ ಸಜ್ಜು

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 15:40 IST
Last Updated 21 ಜನವರಿ 2020, 15:40 IST
ಚಿಕ್ಕಬಳ್ಳಾಪುರ ನಗರಸಭೆ ಕಟ್ಟಡ
ಚಿಕ್ಕಬಳ್ಳಾಪುರ ನಗರಸಭೆ ಕಟ್ಟಡ   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರು ಮಂಗಳವಾರ ಅಧಿಸೂಚನೆ ಹೊರಡಿಸಿದರು.

ಈಗಾಗಲೇ ರಾಜ್ಯ ಚುನಾವಣಾ ಆಯೋಗವು ನಗರಸಭೆ ಚುನಾವಣೆಯನ್ನು ಫೆಬ್ರುವರಿ 9 ರಂದು ನಿಗದಿ ಮಾಡಿ ವೇಳಾಪಟ್ಟಿಯನ್ನು ಕೂಡ ಪ್ರಕಟಿಸಿದೆ. ಅದರ ಬೆನ್ನಲ್ಲೇ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ.

ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಜ.28 ಕೊನೆಯ ದಿನವಾಗಿದೆ. ನಾಮಪತ್ರ ಸ್ವೀಕಾರಕ್ಕೆ ವಾರ್ಡ್‌ವಾರು ವಿಂಗಡನೆ ಮಾಡಿ ನಾಲ್ಕು ಚುನಾವಣೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಆಯಾ ವಾರ್ಡ್ ಉಮೇದುವಾರರು ಸಂಬಂಧಪಟ್ಟ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬೇಕು.

ADVERTISEMENT

1 ರಿಂದ 8 ವಾರ್ಡ್ ಉಮೇದುವಾರರು ನಗರದ ಹಳೆಯ ಜಿಲ್ಲಾ ಆಸ್ಪತ್ರೆ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಅವರ ಕಚೇರಿಯಲ್ಲಿ ತೆರೆದ ಚುನಾವಣಾಧಿಕಾರಿ (ಕುಮಾರಸ್ವಾಮಿ– 9448999242) ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಬೇಕು.

9 ರಿಂದ 16ನೇ ವಾರ್ಡ್‌ಗಳ ವ್ಯಾಪ್ತಿಯ ಉಮೇದುವಾರರು ನಗರದ ಎಂ.ಜಿ.ರಸ್ತೆಯಲ್ಲಿರುವ ಪಿಳ್ಳಪ್ಪ ಕಾಂಪ್ಲೆಕ್ಸ್‌ನಲ್ಲಿರುವ ಜಿಲ್ಲಾ ಪಂಚಾಯತ್ ರಾಜ್ ತಾಂತ್ರಿಕ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅವರ ಕಚೇರಿಯಲ್ಲಿ ತೆರೆದ ಚುನಾವಣಾಧಿಕಾರಿ (ವಿ.ಶ್ರೀನಿವಾಸರೆಡ್ಡಿ –9880307224) ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಬೇಕು.

17 ರಿಂದ 24ರ ವಾರ್ಡ್‌ಗಳ ಉಮೇದುವಾರರು ನಗರಸಭೆ ಕಚೇರಿಯಲ್ಲಿ ತೆರೆದ ಚುನಾವಣಾಧಿಕಾರಿ (ಹರ್ಷವರ್ಧನ್– 9480859105) ಕಾರ್ಯಾಲಯದಲ್ಲಿ ಮತ್ತು 25 ರಿಂದ 31ರ ವಾರ್ಡ್‌ಗಳ ವ್ಯಾಪ್ತಿಯ ಉಮೇದುವಾರರು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಯಲ್ಲಿ ತೆರೆದ ಚುನಾವಣಾಧಿಕಾರಿ (ಶಿವಕುಮಾರ್– 9448143687) ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಬೇಕು.

ಜ.29 ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ಜ.31 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಫೆ.9 ರಂದು ಬೆಳಿಗ್ಗೆ 7 ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅಗತ್ಯ ಬಿದ್ದರೆ ಫೆ.10 ರಂದು ನಡೆಸಬೇಕಾಗುತ್ತದೆ. ಫೆ.11 ರಂದು ತಾಲ್ಲೂಕು ಕೇಂದ್ರದಲ್ಲಿ ಬೆಳಿಗ್ಗೆ 8 ರಿಂದ ಮತ ಎಣಿಕೆ ಕಾರ್ಯ ನಡೆದು ಫಲಿತಾಂಶ ಘೋಷಣೆಯಾಗುವ ಜತೆಗೆ ಚುನಾವಣೆ ನೀತಿ ಸಂಹಿತೆ ಮುಕ್ತಾಯವಾಗಲಿದೆ.

ವೇಳಾಪಟ್ಟಿ
ಜ.28– ನಾಮಪತ್ರ ಸಲ್ಲಿಸಲು ಕೊನೆಯ ದಿನ
ಜ.29–ನಾಮಪತ್ರ ಪರಿಶೀಲನೆ
ಜ.31–ನಾಮಪತ್ರ ಹಿಂಪಡೆಯಲು ಕೊನೆಯ ದಿನ
ಫೆ.9– ಮತದಾನ
ಫೆ.11– ಮತ ಎಣಿಕೆ, ಫಲಿತಾಂಶ ಪ್ರಕಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.