ADVERTISEMENT

ಚಿಂತಾಮಣಿ |ಇಂದಿನಿಂದ ಎರಡು ದಿನ ಮುರುಗಮಲೆ ಉರುಸ್

ಉರುಸ್‌ಗೆ ಭರದ ಸಿದ್ಧತೆ

ಎಂ.ರಾಮಕೃಷ್ಣಪ್ಪ
Published 5 ಸೆಪ್ಟೆಂಬರ್ 2025, 5:35 IST
Last Updated 5 ಸೆಪ್ಟೆಂಬರ್ 2025, 5:35 IST
ಚಿಂತಾಮಣಿ ತಾಲ್ಲೂಕಿನ ಮುರುಗಮಲೆಯ ದರ್ಗಾ
ಚಿಂತಾಮಣಿ ತಾಲ್ಲೂಕಿನ ಮುರುಗಮಲೆಯ ದರ್ಗಾ   

ಚಿಂತಾಮಣಿ: ಹಿಂದೂ ಮುಸ್ಲಿಂರ ಭಾವೈಕ್ಯತೆ ಕೇಂದ್ರವಾಗಿರುವ ಮುರುಗಲೆಯಲ್ಲಿ ಸೆ.5 ಮತ್ತು 6ರಂದು ಹಜರತ್ ಅಮ್ಮಾಜಾನ್ ಮತ್ತು ಬಾವಾಜಾನ್ ದರ್ಗಾ ಗಂಧೋತ್ಸವ ಹಾಗೂ ಉರುಸ್ ವಿಜೃಂಭಣೆಯಿಂದ ನಡೆಯಲಿದೆ.

ಚಿಂತಾಮಣಿಯಿಂದ 12 ಕಿ.ಮೀ ದೂರದಲ್ಲಿರುವ ಮುರುಗಮಲೆ, ದಕ್ಷಿಣ ಭಾರತದಲ್ಲಿ ಮುಸ್ಲಿಂ ಬಾಂಧವರ ಯಾತ್ರಾ ಸ್ಥಳವಾಗಿದ್ದು, ದೇಶ ವಿದೇಶಗಳಲ್ಲಿ ಪ್ರಸಿದ್ಧಿಯಾಗಿದೆ. ದರ್ಗಾಗೆ ನೂರಾರು ವರ್ಷಗಳ ಇತಿಹಾಸವಿದ್ದು, ಉರುಸ್ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗದ ಲಕ್ಷಾಂತರ ಮಂದಿ ಪಾಲ್ಗೊಳ್ಳುವವರು.

ಗ್ರಾಮದಲ್ಲಿ ಹಿಂದೂಗಳ ಪ್ರಸಿದ್ಧ ಮುಕ್ತೀಶ್ವರ ದೇವಾಲಯವಿದ್ದು, ಪ್ರಶಾಂತವಾದ ಪ್ರಕೃತಿ ಮಡಿಲಲ್ಲಿರುವ ದೇವಾಲಯಕ್ಕೆ ವರ್ಷವಿಡಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ದೇವಾಲಯಕ್ಕೆ ಮುಸ್ಲಿಂರೂ ಭೇಟಿ ನೀಡುತ್ತಾರೆ. ಹಾಗಾಗಿ ಈ ಗ್ರಾಮದ ಹಿಂದೂ– ಮುಸ್ಲಿಂ ಭಾವೈಕತ್ಯೆಯ ಸ್ಥಳವಾಗಿದೆ.

ADVERTISEMENT

ಪ್ರವಾದಿ ವಂಶಸ್ಥರಾದ ಹಜರತ್ ಸೈಯ್ಯದ್ ಬೀಬಿ ಅಮ್ಮಾಜಾನ್ ಮತ್ತು ಬಾವಾಜಾನ್ ಅವರು ಬೀದರ್‌ನಿಂದ ಧರ್ಮ ಪ್ರಚಾರಕರಾಗಿ 52 ಜನರ ತಂಡದೊಂದಿಗೆ ಆಗಮಿಸಿ ಜನರಿಗೆ ಸೇವೆ ಸಲ್ಲಿಸುತ್ತಾ ಇಲ್ಲಿಯೇ ನೆಲೆಸಿದರು. ಅವರ ಸಮಾಧಿ ಸ್ಥಳವೇ ದರ್ಗಾ ಎಂದು ಸ್ಥಳ ಪುರಾಣದಿಂದ ತಿಳಿದು ಬರುತ್ತದೆ.

ಧಾರ್ಮಿಕ ಪುರುಷರಿಗೆ ಗೌರವ ಸಮರ್ಪಿಸಲು ಈದ್‌ ಮಿಲಾದ್‌ದಂದು ಗ್ರಾಮಸ್ಥರು ಮಸೀದಿಯಿಂದ ಗಂಧೋತ್ಸವದ ಮೆರವಣಿಗೆ ಆರಂಭವಾಗುತ್ತದೆ. ಮೆರವಣಿಗೆ ನಂತರ ಗಂಧದ ಅಭಿಷೇಕ ನಡೆಯುತ್ತದೆ. ನಂತರ ಕವ್ವಾಲಿ ನಡೆಯುತ್ತದೆ. ಉತ್ತರ ಪ್ರದೇಶದ ತಂಡ ನಡೆಸಿಕೊಡುವ ಕವ್ವಾಲಿ ಉರುಸ್‌ನ ಪ್ರಮುಖ ಆಕರ್ಷಣೆ. 6 ರಂದು ಶನಿವಾರ ವಕ್ಫ್ ಬೋರ್ಡ್‌ನಿಂದ ಗಂಧೋತ್ಸವ ನಡೆಯುತ್ತದೆ.

ಗಂಧೋತ್ಸವದ ಮೆರವಣಿಗೆ ಮತ್ತು ಕವ್ವಾಲಿ ಉರುಸ್‌ನ ಪ್ರಮುಖ ಆಕರ್ಷಣೆ. ಸಾಂಸ್ಕೃತಿಕ ತಂಡಗಳೊಂದಿಗೆ ರಾತ್ರಿ ನಡೆಯುವ ಸಂದಲ್ ಮೆರವಣಿಗೆಗೆ ಸಾವಿರಾರು ಮಂದಿ ಭಾಗವಹಿಸುತ್ತಾರೆ.  

ಉರುಸ್‌ ಸಿದ್ಧತೆ ಭರದಿಂದ ಸಾಗುತ್ತಿವೆ. ವಸತಿ ವ್ಯವಸ್ಥೆ, ಕುಡಿಯುವ ನೀರು, ಆರೋಗ್ಯ ಶಿಬಿರ, ಆಂಬುಲೆನ್ಸ್‌, ಅಗ್ನಿಶಾಮಕ ದಳದ ವಾಹನಗಳು ಸ್ಥಳದಲ್ಲಿರುತ್ತವೆ. ಬೆಂಗಳೂರು ಹಾಗೂ ರಾಜ್ಯದ ಇತರ ಭಾಗಗಳಿಂದ ಬರುವವರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿದೆ. ತಾಲ್ಲೂಕು ಆಡಳಿತ ಹಾಗೂ ವಕ್ಫ್ ಮಂಡಳಿ ಅಧಿಕಾರಿಗಳು ಶಾಂತಿಯುತ ಉರುಸ್ ನಡೆಯಲು ಪೂರ್ವಭಾವಿ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಜಿ ಅನ್ಸರ್ ಖಾನ್ ತಿಳಿಸಿದರು.

ಚಿಂತಾಮಣಿ ತಾಲ್ಲೂಕಿನ ಮುರುಗಮಲೆಯ ದರ್ಗಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.