ADVERTISEMENT

ನಂದಿಯಲ್ಲಿ ರಥೋತ್ಸವದ ಸಂಭ್ರಮ: ಭಕ್ತಿ ಸಮರ್ಪಿಸಿದ ‌ಭಕ್ತರು

ಯೋಗ ಮತ್ತು ಭೋಗ ನಂದೀಶ್ವರನಿಗೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದ ‌ಭಕ್ತರು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 13:39 IST
Last Updated 2 ಮಾರ್ಚ್ 2022, 13:39 IST
ಸಚಿವರು, ಅಧಿಕಾರಿಗಳು, ಗಣ್ಯರು ಹಾಗೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದಲ್ಲಿ ಭೋಗ ನಂದೀಶ್ವರ ಹಾಗೂ ಯೋಗ ನಂದೀಶ್ವರ ರಥೋತ್ಸವ ನಡೆಯಿತು 
ಸಚಿವರು, ಅಧಿಕಾರಿಗಳು, ಗಣ್ಯರು ಹಾಗೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದಲ್ಲಿ ಭೋಗ ನಂದೀಶ್ವರ ಹಾಗೂ ಯೋಗ ನಂದೀಶ್ವರ ರಥೋತ್ಸವ ನಡೆಯಿತು    

ನಂದಿ (ಚಿಕ್ಕಬಳ್ಳಾಪುರ): ತಾಲ್ಲೂಕಿನ ನಂದಿ ಗ್ರಾಮವು ಮಂಗಳವಾರ ಶಿವೋತ್ಸವದಲ್ಲಿ ಮಿಂದರೆ ಬುಧವಾರ ರಥೋತ್ಸವದಲ್ಲಿ ಮಿಂದಿತು.

ಶಿವರಾತ್ರಿಯ ಮರು ದಿನ ನಂದಿಯ ಭೋಗ ನಂದೀಶ್ವರ ದೇಗುಲದ ಆವರಣದಲ್ಲಿ ಭೋಗ ನಂದೀಶ್ವರ ಮತ್ತು ಯೋಗ ನಂದೀಶ್ವರ ಜೋಡಿ ರಥೋತ್ಸವದ ಶ್ರದ್ಧೆ, ಭಕ್ತಿ ಮತ್ತು ಅದ್ಧೂರಿಯಿಂದ ನೆರವೇರುತ್ತದೆ. ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸಂಭ್ರಮ ಇರಲಿಲ್ಲ. ಈ ಬಾರಿ ಸಹಸ್ರಾರು ಭಕ್ತರ ಉಪಸ್ಥಿತಿ ಮತ್ತು ಜಯಘೋಷಗಳಲ್ಲಿ ರಥೋತ್ಸವ ಜರುಗಿತು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಮಧ್ಯಾಹ್ನ 12.30ರ ಸುಮಾರಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಮುನೇಗೌಡ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್ ಹಾಗೂ ಗಣ್ಯರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ರಥ‌ಗಳಲ್ಲಿ ಯೋಗ ನಂದೀಶ್ವರ, ಭೋಗನಂದೀಶ್ವರಸ್ವಾಮಿ, ಗಿರಿಜಾಂಬ, ಅಂಬಿಕಾ ಮತ್ತು ಗಣಪತಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು.

ಕೇಸರಿ ಧ್ವಜ, ಹೂವುಗಳಿಂದ ಶೃಂಗಾರ ಗೊಂಡ ರಥಗಳನ್ನು ಭಕ್ತರು ದೇವಸ್ಥಾನದ ಸುತ್ತ ಎಳೆದರು. ಈ ವೇಳೆ ಭಕ್ತರು ರಥಗಳಿಗೆ ಬಾಳೆ ಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಥೋತ್ಸವ ಆರಂಭಕ್ಕೂ ಮುನ್ನವೇ ದೇಗುಲದ ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಕೆಲವರು ನಿಂತಿದ್ದ ರಥಗಳಿಗೆ ಬಾಳೆಹಣ್ಣು ಎಸೆದು ತಮ್ಮ ಊರಿನ ಹಾದಿ ಹಿಡಿಯುತ್ತಿದ್ದರು.

ಮಹಾ ಶಿವರಾತ್ರಿ ಪ್ರಯುಕ್ತ ಮಂಗಳವಾರದಿಂದಲೇ ದೇವಸ್ಥಾನದಲ್ಲಿ ದಿನವಿಡಿ ವಿಶೇಷ ಅಭಿಷೇಕ ಮತ್ತು ಹವನ ಹೋಮ, ಹಂಸ ವಾಹನೋತ್ಸವ, ಮಹಾನ್ಯಾಸ ಪೂರ್ವಕ ಏಕದಶವಾರ ರುದ್ರಾಭಿಷೇಕ, ಕಾಶಿಯಾತ್ರೆ, ಹರಿಕಥೆ, ಭಜನೆ, ಕಲ್ಯಾಣೋತ್ಸವ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಗಳು ನಡೆದಿದ್ದವು. ಬುಧವಾರ ಬೆಳಗಿನ ಜಾವ ಸಹ ಪೂಜೆ, ರುದ್ರಾಭಿಷೇಕ ನೇರವೇರಿಸಲಾಯಿತು.

ಶಿವರಾತ್ರಿ ಉಪವಾಸ ನಿರತ ಭಕ್ತರು ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಭೇಟಿ ದರ್ಶನ ಪಡೆಯುತ್ತಿದ್ದರು. ಶಿವರಾತ್ರಿಯ ಜಾಗರಣೆಯಲ್ಲಿ ಜಿಲ್ಲೆ, ಹೊರ ಜಿಲ್ಲೆಗಳು ಹಾಗೂ ನೆರೆಯ ಆಂಧ್ರಪ್ರದೇಶದ ಭಕ್ತರು ಪಾಲ್ಗೊಳ್ಳುವರು. ರಾತ್ರಿ ಜಾಗರಣೆ ಪೂರ್ಣಗೊಳಿಸಿ ಬೆಳಿಗ್ಗೆ ರಥೋತ್ಸವದ ಮುಗಿಸಿ ತಮ್ಮ ಊರಿನ ಹಾದಿ ಹಿಡಿಯುವರು.ಹೀಗೆ ನಂದಿ ಜಾತ್ರೆಗೆ ಭಕ್ತರ ದಂಡೇ ಹರಿದು ಬಂದಿತ್ತು. ಹರಕೆ ಹೊತ್ತ ಭಕ್ತರು ದೇವರಿಗೆ ಮುಡಿ ಕೊಟ್ಟರು.

ಮಂಗಳವಾರ ರಾತ್ರಿ ದೇಗುಲದ ಆವರಣದಲ್ಲಿ ಚಾಲನೆಗೊಂಡ ಶಿವೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಬುಧವಾರ ಬೆಳಿಗ್ಗೆ 10ರವರೆಗೂ ನಡೆದವು.

ಕಲಾ ತಂಡಗಳ ಮೆರುಗು: ರಥೋತ್ಸವಕ್ಕೆ ವಿವಿಧ ಕಲಾ ತಂಡಗಳು ಮೆರುಗು ತುಂಬಿದ್ದವು. ಕೋಡಗನ ವೇಷ, ನಾನಾ ನಮೂನೆಯ ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ನೋಡುಗರನ್ನು ಸೆಳೆದವು.

ಭರ್ಜರಿ ವ್ಯಾಪಾರ: ದೇಗುಲದ ಸುತ್ತಲು ತಲೆ ಎತ್ತಿದ್ದ ಪೂಜಾ ಸಾಮಗ್ರಿ, ತಿಂಡಿ ತಿನಿಸು, ಆಟಿಕೆ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ಆಲಂಕಾರಿಕ ವಸ್ತುಗಳು, ಹಣ್ಣು, ತಂಪುಪಾನಿಯ ಸೇರಿದಂತೆ ವಿವಿಧ ಬಗೆಯ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿತ್ತು.

ಬುರಗು, ಬತಾಸು, ಸಿಹಿ ಮತ್ತು ಕುರುಕಲು ತಿಂಡಿ ತಿನಿಸುಗಳ ವ್ಯಾಪಾರ ಜೋರಾಗಿತ್ತು. ಬಿಸಿಲ ಧಗೆಯಿಂದ ಹೊಟ್ಟೆ ತಣ್ಣನೆ ಮಾಡಲು ಭಕ್ತರು ಐಸ್ಕ್ರಿಂ, ಜ್ಯೂಸ್, ಕಲ್ಲಂಗಡಿ ಹಣ್ಣು ಮತ್ತು ಕಬ್ಬಿನ ಹಾಲಿನ ಮೊರೆ ಹೋಗುತ್ತಿದ್ದರು.

ಭರಪೂರ ಮನರಂಜನೆ: ಜಾತ್ರೆಯ ಪರಿಸರದಲ್ಲಿಯೇ ತಲೆ ಎತ್ತಿದ್ದ ಮನರಂಜನಾ ತಾಣ ಬಹುತೇಕರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಜಾತ್ರೆಗೆ ಬಂದವರು ಜಾಯಿಂಟ್ ವ್ಹೀಲ್, ರೈಲು ಸವಾರಿ, ತೊಟ್ಟಿಲು, ಜಾರುಬಂಡೆ ಸೇರಿದಂತೆ ವಿವಿಧ ಮನರಂಜನಾ ಆಟಗಳಲ್ಲಿ ಮೈಮರೆತು, ಕೇಕೆ ಹಾಕುತ್ತಿದ್ದ ದೃಶ್ಯಗಳು ಗೋಚರಿಸಿದವು. ಜಾತ್ರೆ ಪ್ರಯುಕ್ತ ಚಿಕ್ಕಬಳ್ಳಾಪುರದಿಂದ ನಂದಿಗೆ ವಿಶೇಷ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.

***

ದಾರಿಯುದ್ದಕ್ಕೂ ಪಾನಕ, ಮಜ್ಜಿಗೆ

ಜಾತ್ರೆಗೆ ಬಂದವರ ಹಸಿವು, ದಣಿವು ದೂರ ಮಾಡಲು ದಾರಿಯುದ್ದಕ್ಕೂ ಅನೇಕ ಕಡೆಗಳಲ್ಲಿ ಭಕ್ತರು ವಾಹನಗಳಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ಮತ್ತು ಉಪಾಹಾರ ವಿತರಣೆ ಮಾಡುತ್ತಿದ್ದರು. ವಾಹನಗಳಲ್ಲಿ ಹೋಗುತ್ತಿದ್ದವರನ್ನು ಕೈ ಬೀಸಿ ಕರೆದು ಮಜ್ಜಿಗೆ, ಪಾನಕ ನೀಡುತ್ತಿದ್ದರು.

***

ಭಕ್ತಿ ಸಮರ್ಪಿಸಿದ ಮುಸ್ಲಿಂ ಮಹಿಳೆಯರು

ದೇಗುಲದ ಆವರಣದಿಂದ ಹೊರಟ ರಥಗಳು ರಸ್ತೆಗೆ ಬಂದವು. ಈ ವೇಳೆ ತಮ್ಮ ಮನೆಗಳ ಮಹಡಿಯಿಂದ ರಥೋತ್ಸವವನ್ನು ಕಣ್ತುಂಬಿಕೊಂಡ ಮುಸ್ಲಿಂ ಮಹಿಳೆಯರು ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಮೊಬೈಲ್‌ಗಳಲ್ಲಿ ಫೋಟೊಗಳನ್ನು ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.