ಚಿಕ್ಕಬಳ್ಳಾಪುರ: ನಂದಿಬೆಟ್ಟ ಪ್ರವಾಸಿಗರು, ಚಾರಣಪ್ರಿಯರು ಹಾಗೂ ಯುವ ಪ್ರೇಮಿಗಳಿಗೆ ಮಾತ್ರ ಅಚ್ಚುಮೆಚ್ಚಿನ ತಾಣವಲ್ಲ. ಫೋಟೊಶೂಟ್ ಪ್ರಿಯರಿಗೂ ಅತ್ಯಂತ ಮೆಚ್ಚಿನ ಗಿರಿಧಾಮ. ರಾಜ್ಯದಲ್ಲಿಯೇ ಅತಿ ಹೆಚ್ಚು ಫೋಟೊಶೂಟ್‌ಗಳು ನಡೆಯುವ ತಾಣಗಳಲ್ಲಿ ನಂದಿಬೆಟ್ಟವೂ ಪ್ರಮುಖವಾಗಿದೆ.
ಇಂತಿಪ್ಪ ನಂದಿಬೆಟ್ಟದಲ್ಲಿ ಲಾಕ್‌ಡೌನ್ ಮತ್ತು ಕೊರೊನಾ ಕಾರಣದಿಂದ ಫೋಟೊಶೂಟ್ ಆದಾಯ ಗಣನೀಯವಾಗಿ ಕುಸಿದಿದೆ. ಕ್ಯಾಮೆರಾ ಹಿಡಿದು ಬೆಟ್ಟದ ಬುಡದಲ್ಲೊ ತುದಿಯಲ್ಲೊ ಕಾಣುತ್ತಿದ್ದವರು ಗೌಣವಾಗಿದ್ದಾರೆ. ಸಾಮಾನ್ಯವಾಗಿ ನಿತ್ಯ ಫೋಟೊಶೂಟ್‌ಗೆ ಮೂರರಿಂದ ನಾಲ್ಕು ಮಂದಿಯಾದರೂ ಬರುತ್ತಿದ್ದರು. ಆದರೆ ಈಗ ಅಪರೂಪವಾಗಿದ್ದಾರೆ.
ಫೋಟೊಶೂಟ್‌ಗೆ ನಂದಿಬೆಟ್ಟದಲ್ಲಿರುವ ತೋಟಗಾರಿಕಾ ಇಲಾಖೆಯ ಕಚೇರಿಯಲ್ಲಿ ಅನುಮತಿ ಪಡೆಯಬೇಕು. ಇಲ್ಲಿಯೇ ಹಣವನ್ನು ಪಾವತಿಸಬೇಕು. ವಿವಾಹಕ್ಕೆ ಪೂರ್ವ ನವಜೋಡಿ, ಪ್ರೆಗ್ನೆನ್ಸಿ, ನಾಮಕರಣ ಹೀಗೆ ವಿವಿಧ ಜನರು ಫೋಟೊಶೂಟ್ ಮಾಡಿಕೊಳ್ಳುವರು. ಧಾರಾವಾಹಿ, ಜಾಹೀರಾತು, ಸಿನಿಮಾ ಚಿತ್ರೀಕರಣವೂ ನಂದಿಬೆಟ್ಟದಲ್ಲಿ ನಡೆಯುತ್ತದೆ. ಹೀಗೆ ಚಿತ್ರೀಕರಣಗಳಿಂದ ವಾರ್ಷಿಕ ಸರಾಸರಿ ₹ 2 ಲಕ್ಷ ಆದಾಯ ಸಂಗ್ರಹವಾಗುತ್ತದೆ. ಆದರೆ ಲಾಕ್‌ಡೌನ್ ಮತ್ತು ಕೊರೊನಾ ಪರಿಣಾಮ 2019–20ನೇ ಸಾಲಿನಲ್ಲಿ ಕೇವಲ ₹ 65,940 ಆದಾಯ ಮಾತ್ರ ಸಂಗ್ರಹವಾಗಿದೆ.
ಕೋವಿಡ್ ಮೊದಲ ಅಲೆಯ ನಂತರ ‘ಪುಟ್ಟಗೌರಿ ಮದುವೆ’, ‘ಶಾಂತಂ ಪಾಪಂ’ ಸೇರಿದಂತೆ ನಾಲ್ಕು ಧಾರಾವಾಹಿಗಳ ಚಿತ್ರೀಕರಣವಾಗಿವೆ. ಎರಡು ಚಲನಚಿತ್ರಗಳ ಶೂಟಿಂಗ್ ಸಹ ಬೆಟ್ಟದಲ್ಲಿ ನಡೆದಿದೆ.
ಚಿತ್ರೀಕರಣಕ್ಕೆ ಹೊರ ರಾಜ್ಯದವರು: ಬೆಂಗಳೂರಿಗೆ ನಂದಿಬೆಟ್ಟ ಹತ್ತಿರವಿದೆ. ಈ ಕಾರಣದಿಂದ ಬೆಂಗಳೂರಿನವರೂ ಇಲ್ಲಿ ಹೆಚ್ಚು ಫೋಟೊಶೂಟ್‌ಗೆ ಬರುತ್ತಾರೆ. ಅಂದಮಾತ್ರಕ್ಕೆ ಬೇರೆ ಭಾಗಗಳ ಜನರು ಕಡಿಮೆ ಎಂದೇನಿಲ್ಲ. ರಾಜ್ಯದ ವಿವಿಧ ಭಾಗಗಳ ಜನರೂ ನಂದಿಬೆಟ್ಟವನ್ನು ಹುಡುಕಿ ಬರುವರು. ಅಷ್ಟೇಕೆ ನೆರೆಯ ಆಂಧ್ರಪ್ರದೇಶದ ನವಜೋಡಿಗಳು ಇಲ್ಲಿಗೆ ಬಂದು ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ.
ಬೆಟ್ಟದಲ್ಲಿಯೇ ಇರುವ ತೋಟಗಾರಿಕಾ ಇಲಾಖೆಯ ಕಚೇರಿಯಲ್ಲಿ ಫೋಟೊಶೂಟ್‌ಗೆ ಅನುಮತಿ ಪಡೆಯಬೇಕು. ಸಿನಿಮಾ ಚಿತ್ರೀಕರಣಗಳಿಗೆ ಪೊಲೀಸ್ ಭದ್ರತೆ ಪಡೆಯಬೇಕು. ವಾರ್ತಾ ಇಲಾಖೆಯಿಂದ
ಅನುಮತಿ ಪತ್ರ ಸಹ ತರಬೇಕು. ಡ್ರೋನ್‌ನಲ್ಲಿ ಚಿತ್ರಗಳನ್ನು ಸೆರೆಹಿಡಿಯುವಂತಿಲ್ಲ. ಗಿರಿಧಾಮದ ಮೇಲಿನ ದೇವಸ್ಥಾನದಲ್ಲಿಯೂ ಚಿತ್ರೀಕರಣಕ್ಕೆ ಅವಕಾಶವಿಲ್ಲ.
ಕಲ್ಯಾಣಿಯಲ್ಲಿ ನೀರು ಇರುವ ಕಾರಣ ಜನರ ಪ್ರವೇಶ ಅಲ್ಲಿಗೆ ನಿಷೇಧವಿದೆ. ಆದರೆ ಫೋಟೊಶೂಟ್‌ಗೆ ಬರುವವರಿಗೆ ಎಚ್ಚರಿಕೆಯ ನಡುವೆ ಕಲ್ಯಾಣಿ ಬಳಿಗೆ ಬಿಡಲಾಗುತ್ತದೆ. ಅಲ್ಲಿಯೂ ಉತ್ತಮ ಚಿತ್ರಗಳು ಸೆರೆಯಾಗುತ್ತವೆ ಎನ್ನುವ ಕಾರಣಕ್ಕೆ ಈ ಅವಕಾಶವನ್ನು ಅಧಿಕಾರಿಗಳು ನೀಡಿದ್ದಾರೆ.
ಚಿತ್ರೀಕರಣಕ್ಕೆ ಎಷ್ಟು ಶುಲ್ಕ: ನಂದಿಬೆಟ್ಟದಲ್ಲಿ ನಡೆಯುವ ಚಿತ್ರೀಕರಣಗಳಿಗೂ ಜಿಎಸ್‌ಟಿ ಅನ್ವಯವಾಗುತ್ತದೆ. ಒಂದು ದಿನದ ಫೋಟೊಶೂಟ್‌ಗೆ ಒಂದು ಜೋಡಿಗೆ ₹ 3,540, ಧಾರಾವಾಹಿ, ಜಾಹೀರಾತು ಚಿತ್ರೀಕರಣಕ್ಕೆ ಒಂದು ದಿನಕ್ಕೆ ₹ 11,800, ಕನ್ನಡ ಸಿನಿಮಾಗಳಿಗೆ ₹ 23,600, ಕನ್ನಡೇತರ ಸಿನಿಮಾಗಳ ಚಿತ್ರೀಕರಣಕ್ಕೆ 29,500 ಶುಲ್ಕ ಪಾವತಿಸಬೇಕಾಗುತ್ತದೆ. ಜಿಎಸ್‌ಟಿ ಜಾರಿಗೂ ಮುನ್ನ ಈ ಹಣದಲ್ಲಿ ಶೇ 18ರಷ್ಟು ಹಣ ಕಡಿಮೆ ಇರುತ್ತಿತ್ತು.
ಚಿತ್ರೀಕರಣಕ್ಕಾಗಿ ಉದ್ಯಾನ ಮತ್ತಷ್ಟು ಅಂದ: ಲಾಕ್‌ಡೌನ್ ಮತ್ತು ಕೊರೊನಾ ಕಾರಣದಿಂದ ಸಿನಿಮಾಗಳು, ಧಾರಾವಾಹಿಗಳ ಚಿತ್ರೀಕರಣವೂ ಸ್ಥಗಿತವಾಗಿತ್ತು. ಈ ಕಾರಣದಿಂದ ಆದಾಯ ಕಡಿಮೆ ಆಗಿದೆ. ಜನಜೀವನ ಸೇರಿದಂತೆ ಎಲ್ಲ ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದ ನಂತರ ಮತ್ತೆ ಆದಾಯ ಯಥಾಸ್ಥಿತಿಗೆ ಬರುವ ಸಾಧ್ಯತೆ ಇದೆ ಎಂದು ನಂದಿಬೆಟ್ಟದ ವಿಶೇಷ ಅಧಿಕಾರಿ ಗೋಪಾಲ್ ತಿಳಿಸಿದರು.
ಫೋಟೊಶೂಟ್ ಅಥವಾ ಚಿತ್ರೀಕರಣಕ್ಕೆ ಬರುವವರ ಜತೆ ನಾವು ಗ್ರಾಹಕ ಸ್ನೇಹಿಯಾಗಿ ಇರುತ್ತೇವೆ. ಫೋಟೊಶೂಟ್‌ಗೆ ಬರುವವರು ಆ ಚಿತ್ರಗಳು ನೆನಪಿನಲ್ಲಿ ಉಳಿಯಲಿ ಎಂದೇ ಬರುವರು. ಹಲವು ವರ್ಷಗಳು ಕಳೆದರೂ ಆ ಚಿತ್ರಗಳು ಅವರಿಗೆ ಖುಷಿಕೊಡುತ್ತವೆ. ಖುಷಿಯಲ್ಲಿ ಬರುವವರ ಜತೆ ನಾವೂ ಸ್ನೇಹದಿಂದ ನಡೆದುಕೊಂಡರೆ ಅವರು ಮತ್ತಷ್ಟು ಸಂತಸಗೊಳ್ಳುವರು ಎಂದು ಹೇಳಿದರು.
ಚಿತ್ರೀಕರಣಕ್ಕೆ ಬರುವವರಿಗೆ ಪ್ಲಾಸ್ಟಿಕ್ ಬಳಸಬಾರದು, ಕಸ ಇದ್ದರೆ ಎಲ್ಲೆಂದರಲ್ಲಿ ಎಸೆಯಬಾರದು ಸೇರಿದಂತೆ ಕೆಲವು ಸೂಚನೆಗಳನ್ನು ನೀಡುತ್ತೇವೆ ಅಷ್ಟೇ. ಫೋಟೊಶೂಟ್ ಮತ್ತು ಚಿತ್ರೀಕರಣದ ದೃಷ್ಟಿಯಿಂದಲೇ ನಾವು ತೋಟಗಾರಿಕೆ ಇಲಾಖೆ ನಿರ್ವಹಿಸುವ ಉದ್ಯಾನದಲ್ಲಿ ಬಗೆ ಬಗೆಯ ಹೂಗಳನ್ನು ಬೆಳೆಸಿದ್ದೇವೆ. ಆ ವಾತಾವರಣ ಚಿತ್ರೀಕರಣಕ್ಕೆ ಉತ್ತಮ ಸ್ಥಳ ಎನಿಸಬೇಕು. ಆ ರೀತಿಯಲ್ಲಿ ರೂಪಿಸಿದ್ದೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.