ಶಿಡ್ಲಘಟ್ಟ: ಇದೊಂದು ಜಿಲ್ಲೆಯ ವಿಶಿಷ್ಟ ಅಂಚೆ ಕಚೇರಿ. ಇದು ಇರುವುದು 1,478 ಮೀಟರ್ ಎತ್ತರದಲ್ಲಿ. ವಿಶೇಷವೆಂದರೆ ಈ ಅಂಚೆ ಕಚೇರಿಗೆ ದೇಶದ ನಾನಾ ಭಾಗಗಳಿಂದ ಪತ್ರಗಳು ಬರುತ್ತವೆ. ಎಲ್ಲೆಡೆ ಜನರಿಗೆ ಪತ್ರಗಳು ಬಂದರೆ ಇಲ್ಲಿ ಅಂಚೆ ಕಚೇರಿಗೇ ಪತ್ರ ಬರುತ್ತವೆ.
ಈ ಅಂಚೆ ಕಚೇರಿ ಇರುವುದು ಜಿಲ್ಲೆಯ ನಂದಿ ಬೆಟ್ಟದ ಮೇಲೆ, ಯೋಗನಂದೀಶ್ವರ ದೇವಸ್ಥಾನದ ಬಳಿ. ಈ ಅಂಚೆ ಕಚೇರಿಯ ‘ನಂದಿ’ ಆಕಾರದ ಠಸ್ಸೆಯ ಗುರುತಿಗಾಗಿ ಬೇಡಿಕೆಯಿಟ್ಟು ದೇಶದ ನಾನಾ ಭಾಗದಿಂದ ಪೋಸ್ಟ್ ಕಾರ್ಡುಗಳನ್ನು ಲಕೋಟೆಯಲ್ಲಿಟ್ಟು, ಜೊತೆಯಲ್ಲಿ ತಮ್ಮ ಸ್ವವಿಳಾಸದ ಅಂಚೆ ಚೀಟಿ ಲಗತ್ತಿಸಿರುವ ಲಕೋಟೆಯೊಂದಿಗೆ ಕಳಿಸುತ್ತಾರೆ. ಇಲ್ಲಿನ ಪೋಸ್ಟ್ ಮಾಸ್ಟರ್ ಸುರೇಶ್ ಅವರು ಕಳಿಸಿರುವ ಪೋಸ್ಟ್ ಕಾರ್ಡ್‌ಗಳಿಗೆ ಸ್ಪೆಷಲ್ ಕ್ಯಾನ್ಸಲೇಷನ್ ಎಂದೇ ಕರೆಯುವ ನಂದಿ ಗುರುತಿನ ಸೀಲ್ ಹಾಕಿ ಕಳುಹಿಸುತ್ತಾರೆ.
ಈ ಹಿಂದೆ ಇದ್ದ ಪುಟ್ಟ ಆಕಾರದ ನಂದಿ ಗುರುತಿರುವ ನಂದಿ ಬೆಟ್ಟದ ಸ್ಪೆಷಲ್ ಕ್ಯಾನ್ಸಲೇಷನ್ ಪರಿಚಯಿಸಲ್ಪಟ್ಟಿದ್ದು ಜೂನ್ 9, 1989ರಂದು. ಇದೀಗ ಅದನ್ನು ಹಿರಿದಾಗಿಸಿ ಹೊಸ ರೂಪ ನೀಡಿ ಅಂಚೆ ಇಲಾಖೆ ಕಳೆದ ಆರು ತಿಂಗಳ ಹಿಂದೆ ಹೊಸ ಠಸ್ಸೆಯನ್ನು ಇಲ್ಲಿನ ಅಂಚೆ ಕಚೇರಿಗೆ ನೀಡಿದೆ.
ಪ್ರವಾಸಿಗರನ್ನು ಮತ್ತು ಅಂಚೆ ಸಂಗ್ರಹಕಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ 1951ರಲ್ಲಿಯೇ ದೇಶದ ಚಾರಿತ್ರಿಕ, ಸಾಂಸ್ಕೃತಿಕ ಸ್ಥಳಗಳನ್ನು ಪ್ರತಿನಿಧಿಸುವ ಸ್ಪೆಷಲ್ ಕ್ಯಾನ್ಸಲೇಷನ್ ಅಥವಾ ಪರ್ಮನೆಂಟ್ ಪಿಕ್ಟೋರಿಯಲ್ ಕ್ಯಾನ್ಸಲೇಷನ್ (ಪಿ.ಪಿ.ಸಿ) ಎಂಬ ಠಸ್ಸೆಯನ್ನು ಆಯ್ದ ಅಂಚೆ ಕಚೇರಿಗಳಲ್ಲಿ ಪ್ರಾರಂಭಿಸಲಾಯಿತು. ನಂತರ ಹಂತಹಂತವಾಗಿ ಎಲ್ಲಾ ರಾಜ್ಯಗಳ ಆಯ್ದ ಅಂಚೆ ಕಚೇರಿಗಳಲ್ಲಿ ರೂಢಿಗೆ ತರಲಾಯಿತು. ರಾಜ್ಯದಲ್ಲಿ 63 ವಿವಿಧ ಅಂಚೆ ಕಚೇರಿಗಳಲ್ಲಿ ಸ್ಪೆಷಲ್ ಕ್ಯಾನ್ಸಲೇಷನ್ ಇದೆ. ಜಿಲ್ಲೆಯಲ್ಲಿ ನಂದಿ ಬೆಟ್ಟದ ಅಂಚೆ ಕಚೇರಿಯಲ್ಲಿ ಮಾತ್ರ ಸ್ಪೆಷಲ್ ಕ್ಯಾನ್ಸಲೇಷನ್ ಸೌಲಭ್ಯವಿದೆ. ಅದಕ್ಕಾಗಿ ಬೇಡಿಕೆಯಿಟ್ಟು ಕೆಲವರು ಪತ್ರ ಬರೆದರೆ, ಇನ್ನು ಕೆಲವರು ಇಲ್ಲಿಗೆ ಬಂದಾಗ ಖುದ್ದಾಗಿ ಪೋಸ್ಟ್ ಮಾಡುತ್ತಾರೆ.
ನಂದಿ ಬೆಟ್ಟಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರು ತಮ್ಮ ದೇಶಗಳಿಗೆ ಇಲ್ಲಿಂದ ಪೋಸ್ಟ್ ಕಾರ್ಡ್ ಅಥವಾ ಪತ್ರ ಕಳುಹಿಸುವುದು ರೂಢಿ ಇದೆ.
‘ನಮ್ಮ ದೇಶದ ಸುಮಾರು 369 ಅಂಚೆ ಕಚೇರಿಗಳಲ್ಲಿ ಈ ರೀತಿಯ ಸ್ಪೆಷಲ್ ಕ್ಯಾನ್ಸಲೇಷನ್ ಇದೆ. ಅಂಚೆ ಚೀಟಿ ಸಂಗ್ರಹಣೆಯಂತೆ ವಿಶಿಷ್ಠ ಠಸ್ಸೆ ಇರುವ ಕಾರ್ಡ್‌ಗಳನ್ನು ಸಂಗ್ರಹಿಸುವವರಿದ್ದಾರೆ. ವಿದೇಶಿ ಪ್ರವಾಸಿಗರು ತಾವು ಹೋದ ಸ್ಥಳಗಳಿಂದ ಕಾರ್ಡ್‌ಗಳನ್ನು ತಮ್ಮೂರಿಗೆ ಪೋಸ್ಟ್ ಮಾಡುವ ಹವ್ಯಾಸವಿರುತ್ತದೆ. ಅಂಥವರು ನಮ್ಮ ನಂದಿ, ಬೇಲೂರು, ಹಳೇಬೀಡು, ಹಂಪಿ ಮುಂತಾದೆಡೆ ಅಲ್ಲಿನ ವೈಶಿಷ್ಟ್ಯತೆಯ ಮುದ್ರೆ ಇರುವ ಠಸ್ಸೆ ಇಷ್ಟಪಡುತ್ತಾರೆ. ದೇಶದಲ್ಲಿ ಅತಿ ಹೆಚ್ಚು ಸ್ಪೆಷಲ್ ಕ್ಯಾನ್ಸಲೇಷನ್ ಇರುವ ಅಂಚೆ ಕಚೇರಿಗಳಿರುವುದು ನಮ್ಮ ರಾಜ್ಯದಲ್ಲಿ ಎಂಬುದು ಹೆಮ್ಮೆ’ ಎನ್ನುತ್ತಾರೆ ಅಂಚೆ ಚೀಟಿ ಸಂಗ್ರಹಕಾರ ಸುಶಿಲ್ ಮೆಹ್ರಾ.
‘ನಮ್ಮದು ಪುಟ್ಟ ಅಂಚೆ ಕಚೇರಿ. ಬಹಳ ಹಳೆಯದು. ಆದರೂ ಇಲ್ಲಿನ ವಿಶಿಷ್ಟ ನಂದಿ ಗುರುತಿನ ಠಸ್ಸೆಯ ಆಕರ್ಷಣೆಯಿಂದ ವಿದೇಶಿಯರು ಬರುತ್ತಾರೆ. ಹಲವಾರು ರಾಜ್ಯಗಳಿಂದ ಪತ್ರ ಬರೆಯುತ್ತಾರೆ. ಅವರ ಆಸಕ್ತಿ ಕಂಡು ಸಹಕಾರ ನೀಡುತ್ತೇನೆ. ನಂದಿ ಬೆಟ್ಟದಲ್ಲಿ ಹಲವಾರು ಆಕರ್ಷಣೆಗಳ ಮಧ್ಯೆ ನಮ್ಮ ಅಂಚೆ ಕಚೇರಿಯ ‘ನಂದಿ’ ಗುರುತೂ ಒಂದು ವಿಶೇಷ ಆಕರ್ಷಣೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಪೋಸ್ಟ್ ಮಾಸ್ಟರ್ ಕೆ.ಸುರೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.