ADVERTISEMENT

ಮತದ ಪರಮಾಧಿಕಾರ ಚಲಾಯಿಸಿ: ಸಿ.ರಾಜಶೇಖರ್

13ನೇ ರಾಷ್ಟ್ರೀಯ ಮತದಾರರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 4:45 IST
Last Updated 26 ಜನವರಿ 2023, 4:45 IST
ಉತ್ತಮವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಮಾಡಿದ ಬಿಎಲ್‌ಒ ಮತ್ತು ಇಎಲ್‌ಸಿಗಳನ್ನು ಚಿಕ್ಕಬಳ್ಳಾಪುರದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು
ಉತ್ತಮವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಮಾಡಿದ ಬಿಎಲ್‌ಒ ಮತ್ತು ಇಎಲ್‌ಸಿಗಳನ್ನು ಚಿಕ್ಕಬಳ್ಳಾಪುರದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು   

ಚಿಕ್ಕಬಳ್ಳಾಪುರ: ಮತದಾನದ ಹಕ್ಕನ್ನು ಮತದಾರರು ಸಮರ್ಪಕವಾಗಿ, ನ್ಯಾಯಸಮ್ಮತವಾಗಿ ಚಲಾಯಿಸಿ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ ‘ಯಥಾ ರಾಜ ತಥಾ ಪ್ರಜೆ’ ಎಂಬುದನ್ನು ಅಳಿಸಿ ‘ಯಥಾ ಪ್ರಜಾ ತಥಾ ಜನಪ್ರತಿನಿಧಿ’ ಎಂಬುದನ್ನು ಜಾರಿಗೊಳಿಸಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸಿ.ರಾಜಶೇಖರ್ ಅವರು ತಿಳಿಸಿದರು.

ನಗರದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ‌ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ 13ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಚುನವಾಣಾ ಪ್ರಕ್ರಿಯೆ ಸಮರ್ಪಕವಾಗಿ ಪೂರ್ಣಗೊಳ್ಳಬೇಕಾದರೆ ಮತದಾನದ ಹಕ್ಕನ್ನು ಪ್ರತಿಯೊಬ್ಬರು ಫಲಾಪೇಕ್ಷೆ ಇಲ್ಲದೆ ನ್ಯಾಯಸಮ್ಮತವಾಗಿ ಚಲಾಯಿಸಬೇಕು. ಯೋಗ್ಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಆಗ ಸಂವಿಧಾನದ ಆಶಯ, ಪ್ರಜಾಪ್ರಭುತ್ವ ವ್ಯವಸ್ಥೆಯ ಮಹದಾಶಯ ಈಡೇರುತ್ತದೆ ಎಂದರು.

ADVERTISEMENT

ನ್ಯಾಯಾಧೀಶರಾದ ಲಕ್ಷ್ಮಿಕಾಂತ್ ಜೆ.ಮಿಸ್ಕಿನ್ ಅವರು ಮಾತನಾಡಿ, ಎಲ್ಲರೂ ನಿರ್ಭಯವಾಗಿ, ಯಾವುದೇ ಪ್ರೇರಣೆಗಳಿಗೆ ಒಳಗಾಗದೆ ಮತದಾನ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಎಂ.ಎನ್. ನಾಗರಾಜ್ ಮಾತನಾಡಿ, ಮತದಾರರಿಗೆ ಚುನಾವಣೆಗಳ ಬಗ್ಗೆ ಜಾಗೃತಿ ಮೂಡಿಸುವುದು ರಾಷ್ಟ್ರೀಯ ಮತದಾರರ ದಿನಾಚರಣೆಯ ಮುಖ್ಯ ಉದ್ದೇಶ. ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬ ಧ್ಯೇಯ ವಾಕ್ಯ ಇದೆ. ಅದನ್ನು ಅರ್ಥಮಾಡಿಕೊಂಡು ಎಲ್ಲರೂ ಚುನಾವಣೆಯಲ್ಲಿ ಪ್ರಕ್ರಿಯೆಗಳಲ್ಲಿ ಸಕ್ರಿಯರಾಗಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಕೋರಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಕರ್ ಮಾತನಾಡಿ, ನೈತಿಕವಾಗಿ ಮತದಾನ ಮಾಡಬೇಕು. ಆ ಮೂಲಕ ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು. ಮತವನ್ನು ಮಾರಾಟ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದೆ. ಆದರೂ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಸ್ಥಿತಿ ಇದೆ. ಆಮಿಷಗಳಿಗೆ ಒಳಗಾಗಿ ಮತದಾನ ಮಾಡುವಂತದ್ದನ್ನು ನಾವು ಗಮನಿಸಿದ್ದೇವೆ. ಇದು ತಪ್ಪು. ಒಂದು ವೇಳೆ ಯೋಗ್ಯ ಜನ ಪ್ರತಿನಿಧಿಗಳು ಚುನಾವಣಾ ಸ್ಪರ್ಧಾ ಕಣದಲ್ಲಿ ಇಲ್ಲದಿದ್ದರೆ ‘ನೋಟಾ’ ಆಯ್ಕೆ ಮಾಡಿ ತಮ್ಮ ಪರಮಾಧಿಕಾರ ಚಲಾಯಿಸಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗಣ್ಯರು ನವ ಮತದಾರರಿಗೆ ಚುನಾವಣಾ ಗುರುತಿನ ಚೀಟಿ ವಿತರಿಸಿದರು. ಸ್ವೀಪ್ ಕಾರ್ಯದ ನಿಮಿತ್ತ ಜಿಲ್ಲೆಯಾದ್ಯಂತ ಏರ್ಪಡಿಸಿದ್ದ, ಪ್ರಬಂಧ ಸ್ಪರ್ಧೆ, ಭಿತ್ತಿಚಿತ್ರ ರಚನೆ, ಚರ್ಚಾ ಸ್ಪರ್ಧೆ ಹಾಗೂ ಇನ್ನಿತರ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಆಶಾ ಮತದಾನದ ಮಹತ್ವದ ಕುರಿತು ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ, ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಪೌರಾಯುಕ್ತ ಉಮಾ ಶಂಕರ್, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.