ADVERTISEMENT

ಸ್ಥಳೀಯ ಸಂಸ್ಥೆಗಳ ಚುನಾವಣೆ | ಪಕ್ಷ ಸಂಘಟನೆಗೆ ಹೆಜ್ಜೆ: ಅಜ್ಜವಾರ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 6:30 IST
Last Updated 9 ನವೆಂಬರ್ 2025, 6:30 IST
ಚಿಕ್ಕಬಳ್ಳಾಪುರ ಜೆಡಿಎಸ್ ಕಚೇರಿಯಲ್ಲಿ ನಡೆದ ಕನಕದಾಸ ಜಯಂತಿಯಲ್ಲಿ ಪಾಲ್ಗೊಂಡಿದ್ದ ಮುಖಂಡರು
ಚಿಕ್ಕಬಳ್ಳಾಪುರ ಜೆಡಿಎಸ್ ಕಚೇರಿಯಲ್ಲಿ ನಡೆದ ಕನಕದಾಸ ಜಯಂತಿಯಲ್ಲಿ ಪಾಲ್ಗೊಂಡಿದ್ದ ಮುಖಂಡರು   

ಚಿಕ್ಕಬಳ್ಳಾಪುರ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳ ಗೆಲುವು ಮತ್ತು ಕಾರ್ಯತಂತ್ರಕ್ಕೆ ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಅಜ್ಜವಾರ ಕೆ.ಆರ್.ರೆಡ್ಡಿ ತಿಳಿಸಿದರು. 

ನಗರದಲ್ಲಿ ಶನಿವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆ ಮತ್ತು ಚಿಮುಲ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಜೊತೆಯಲ್ಲಿ ಮುನ್ನಡೆಯಲಾಗುವುದು. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವು ತನ್ನ ಸಂಘಟನೆ ಹಾಗೂ ಚಟುವಟಿಕೆಗಳನ್ನು ಚುರುಕುಗೊಳಿಸಿದೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಜನವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಎನ್‌ಡಿಎ ಕೂಟದೊಂದಿಗೆ ಜೆಡಿಎಸ್‌ ಮುಂದುವರಿಯಲಿದೆ. ಈ ಬಗ್ಗೆ ಸಂಸದ ಡಾ.ಕೆ.ಸುಧಾಕರ್ ಅವರ ಜೊತೆ ‌ಮಾತುಕತೆ ನಡೆಸಲಾಗುವುದು ಎಂದರು.

ADVERTISEMENT

‘ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಸಂಘಟನೆಗೆ ಶ್ರಮಿಸಬೇಕು. ಪಕ್ಷದ ಯಶಸ್ಸಿಗೆ ಕೈಜೋಡಿಸಬೇಕು. ಪಕ್ಷ ಬಲಪಡಿಸುವುದು ನಮ್ಮ ಮೊದಲ ಆದ್ಯತೆ.  ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆಗೆ ಉತ್ಸಾಹ ತುಂಬುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ’ ಎಂದು ಹೇಳಿದರು.

ಎಚ್.ಡಿ.ದೇವೇಗೌಡರ ನಿರ್ದೇಶನದಂತೆ ಮೈತ್ರಿ ಧರ್ಮವನ್ನು ಪಾಲಿಸಿ, ಎರಡು ಪಕ್ಷಗಳ ಸಮನ್ವಯದೊಂದಿಗೆ ಚುನಾವಣೆ ಎದುರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುನಿಯಪ್ಪ ಮಾತನಾಡಿ, ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. ಈ ಕ್ಷೇತ್ರದಲ್ಲಿ ಹಿಂದೆ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದರಿಂದ ಪಕ್ಷದ ನೆಲೆ ಬಲವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಬೇಕು ಎಂಬ ಮನವಿಯನ್ನು ನಿಖಿಲ್ ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗಿದೆ. ಅವರು ಪಕ್ಷವನ್ನು ಇನ್ನಷ್ಟು ಸಂಘಟಿಸಿ ಬಲಪಡಿಸುವ ಕುರಿತು ಸ್ಪಷ್ಟ ಮಾರ್ಗದರ್ಶನ ನೀಡಿದ್ದಾರೆ ಎಂದರು.

ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಭರದಿಂದ ಸಾಗುತ್ತಿದೆ. ಇದನ್ನು ಇನ್ನಷ್ಟು ಚುರುಕುಗೊಳಿಸಲು ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ. ಅಧಿಕಾರಕ್ಕಿಂತ ಮೊದಲು ಸಂಘಟನೆ ಬಲಿಷ್ಠವಾಗಬೇಕು ಎನ್ನುವುದೇ ನಮ್ಮ ಧ್ಯೇಯ. ಶಾಸಕ ಬಿ.ಎನ್. ರವಿಕುಮಾರ್ ಹಾಗೂ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಪಕ್ಷದ ಬುನಾದಿ ಶಕ್ತಿ ವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮುನಿರಾಜು, ಶಾಂತಮೂರ್ತಿ, ನಗರಸಭೆ ಮಾಜಿ ಸದಸ್ಯ ಬಂಡ್ಲು ಶ್ರೀನಿವಾಸ್, ಕಿಸಾನ್ ಕೃಷ್ಣಪ್ಪ, ಲಕ್ಷ್ಮಿ ನರಸಿಂಹಪ್ಪ, ಸ್ಟುಡಿಯೊ ಮಂಜು, ಅಖಿಲ್ ರೆಡ್ಡಿ, ಆಂಜಿನಪ್ಪ, ಪ್ರಕಾಶ್, ಮಹಿಳಾ ಮುಖಂಡರಾದ ಅರುಣಾ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.