ADVERTISEMENT

ಬಡ ಕುಟುಂಬಗಳಿಗೆ ಹೊಸ ‘ಬೆಳಕು’: ಡಿ.10ರೊಳಗೆ ಉಚಿತ ವಿದ್ಯುತ್‌ ಸಂಪರ್ಕಕ್ಕೆ ಗಡುವು

ಎಂ.ರಾಮಕೃಷ್ಣಪ್ಪ
Published 26 ನವೆಂಬರ್ 2021, 2:03 IST
Last Updated 26 ನವೆಂಬರ್ 2021, 2:03 IST

ಚಿಂತಾಮಣಿ: ಬಡ ಕುಟುಂಬಗಳ ಮನೆಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರ ‘ಬೆಳಕು’ ಎಂಬ ನೂತನ ಯೋಜನೆಯನ್ನು ಜಾರಿಗೊಳಿಸಿದೆ.

ದೀನದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಹಾಗೂ ಸೌಭಾಗ್ಯ ಯೋಜನೆಯ ಮಾರ್ಗಸೂಚಿಯಂತೆ ಡಿ. 10ರೊಳಗೆ ಈ ಯೋಜನೆಯ ಅನುಷ್ಠಾನಕ್ಕೆ ಸಿದ್ಧತೆ ನಡೆಯುತ್ತಿದೆ.

ಅ. 30ರಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿದ್ಯುತ್ ಸಂಪರ್ಕ ಹೊಂದಿಲ್ಲದಿರುವ ಮನೆಗಳ ಸರ್ವೆ ನಡೆಸಿ ಶೀಘ್ರವೇ ವಿದ್ಯುತ್ ಸಂಪರ್ಕ ಕಲ್ಪಿಸಲು ಸೂಚಿಸಲಾಗಿತ್ತು. ಜಿಲ್ಲಾಧಿಕಾರಿ ನೀಡಿರುವ ಸುತ್ತೋಲೆಯಲ್ಲಿ ನ. 4ರೊಳಗೆ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ನೀಡಬೇಕು ಎಂದು ತಿಳಿಸಲಾಗಿತ್ತು. ಆದರೆ,ನವೆಂಬರ್ ಮುಕ್ತಾಯವಾಗುತ್ತಿದ್ದರೂ ಇನ್ನೂ ವಿದ್ಯುತ್ ಹೊಂದಿಲ್ಲದಿರುವವರ ಸರ್ವೆ ಕಾರ್ಯ ಮುಕ್ತಾಯವಾಗಿಲ್ಲ.

ADVERTISEMENT

‘ಕಂದಾಯ ಇಲಾಖೆಯು ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಬೆಸ್ಕಾಂಗೆ ನೀಡಿಲ್ಲ. ಯೋಜನೆ ಕುರಿತು ಸಾರ್ವಜನಿಕರಿಗೆ ಮಾಹಿತಿಯೇ ಇಲ್ಲ’ ಎಂದು ಕೂಲಿ ಕಾರ್ಮಿಕ ನಾಗರಾಜ್ ದೂರಿದರು.

ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಗ್ರಾಮ ಪಂಚಾಯಿತಿ ನೀಡುವ ಪಟ್ಟಿ ಹಾಗೂ ಇತರೆ ದಾಖಲೆಗಳನ್ನು ಪರಿಗಣಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ಬೆಳಕು ಯೋಜನೆ ರೂಪಿಸಲಾಗಿದೆ. ಇಂಧನ ಸಚಿವರು ಘೋಷಣೆ ಮಾಡಿರುವ 100 ದಿನಗಳ ಕಾರ್ಯಕ್ರಮದಲ್ಲಿ ವಿದ್ಯುತ್ ರಹಿತ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುದ್ದೀಕರಣಗೊಳ್ಳಲು ಬಾಕಿ ಇರುವ ಮನೆಗಳ ವಿವರವನ್ನು ಕಂದಾಯ ಇಲಾಖೆಯು ದೃಢೀಕರಿಸಿ ಬೆಸ್ಕಾಂಗೆ ಸಲ್ಲಿಸಬೇಕಾಗಿದೆ. ನಗರ ಮತ್ತು ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ರಹಿತ ಮನೆಗಳನ್ನು ಗುರುತಿಸುವ ಕಾರ್ಯವನ್ನು ಗ್ರಾಮ ಪಂಚಾಯಿತಿ, ಸ್ಥಳೀಯ ಪ್ರಾಧಿಕಾರದ ಸಮನ್ವಯದೊಂದಿಗೆ ಕೈಗೊಳ್ಳಬೇಕು.

ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 94ಸಿ ಗ್ರಾಮೀಣ ಮತ್ತು 94ಸಿಸಿ ನಗರ ಪ್ರದೇಶದಲ್ಲಿ ನಿವೇಶನ ಹಂಚಿಕೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿವರವುಳ್ಳ ಪಟ್ಟಿಯನ್ನು ಕಂದಾಯ ಇಲಾಖೆಯಿಂದ ಪಡೆಯಬೇಕು. ಅದರಲ್ಲಿ ವಿದ್ಯುತ್ ರಹಿತ ಮನೆಗಳನ್ನು ಗುರುತಿಸಿ ಫಲಾನುಭವಿಗಳ ಪಟ್ಟಿಗೆ ಸೇರಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ವಿದ್ಯುತ್ ಸಂಪರ್ಕ ಹೊಂದಿಲ್ಲದ ಮನೆಗಳಿಗೆ ಬಂಡವಾಳ ಕಾಮಗಾರಿ ವೆಚ್ಚವನ್ನು ಬಳಸಿಕೊಂಡು ಡಿ. 10ರೊಒಳಗೆ ವಿದ್ಯುತ್ ಸಂಪರ್ಕ
ಕಲ್ಪಿಸಬೇಕು.

ಬೆಸ್ಕಾಂ ಅಧಿಕಾರಿಗಳು ಪ್ರತಿಯೊಬ್ಬ ಫಲಾನುಭವಿಯ ಪರಿಶೀಲನೆ ನಡೆಸಿ ಸಂಪರ್ಕಕ್ಕೆ ಅಗತ್ಯ ಅಂದಾಜು ವೆಚ್ಚ ತಯಾರಿಸಿ ಸಂಬಂಧಪಟ್ಟ ವಿಭಾಗದ ಕಚೇರಿಗೆ ಕಳುಹಿಸಬೇಕು. ವಿಭಾಗ ಕಚೇರಿಯಿಂದ ಕಾಮಗಾರಿಯ ಕಾರ್ಯಾದೇಶ ನೀಡಲಾಗುತ್ತದೆ. ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದು, ಶುಲ್ಕ ನೀಡದೆ ಸಂಪರ್ಕ ಕಡಿತಗೊಳಿಸಿರುವ ಮನೆಗಳಿಗೆ ಇದು ಅನ್ವಯಿಸುವುದಿಲ್ಲ. ಈಗಾಗಲೇ, ಮನೆಗಳಲ್ಲಿ ವೈರಿಂಗ್ ಮಾಡಿಸಿಕೊಂಡು ಸಂಪರ್ಕಕ್ಕೆ ಕಾಯುತ್ತಿರುವವರಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ ಮೀಟರ್ ಅಳವಡಿಸಲಾಗುತ್ತದೆ. ಸಂಪರ್ಕಕ್ಕೆ ಅಗತ್ಯವಿರುವ ಎಲ್ಲ ಪರಿಕರಗಳು ಹಾಗೂ ಅಗತ್ಯ ಕಾಮಗಾರಿ ವೆಚ್ಚವನ್ನು ಬೆಸ್ಕಾಂ ಭರಿಸುತ್ತದೆ. ಫಲಾನುಭವಿಯು ವಿದ್ಯುತ್ ಬಳಕೆಯ ಶುಲ್ಕವನ್ನು ಪಾವತಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.