ADVERTISEMENT

ಕೊನೆಗೂ ಸಿಕ್ಕಿತು ಚಿಕ್ಕಬಳ್ಳಾಪುರ ಹೂ ಮಾರುಕಟ್ಟೆಗೆ ಜಾಗ

ಅಗಲಗುರ್ಕಿ ಗ್ರಾಮದ ಸರ್ವೆ ನಂ 122ರಲ್ಲಿ 9.20 ಎಕರೆ ಜಮೀನು ಮಂಜೂರು

ಡಿ.ಎಂ.ಕುರ್ಕೆ ಪ್ರಶಾಂತ
Published 20 ಸೆಪ್ಟೆಂಬರ್ 2022, 10:55 IST
Last Updated 20 ಸೆಪ್ಟೆಂಬರ್ 2022, 10:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ:ಚಿಕ್ಕಬಳ್ಳಾಪುರದಲ್ಲಿ ಹೂ ಮಾರುಕಟ್ಟೆ ನಿರ್ಮಾಣಕ್ಕೆ ಕೊನೆಗೂ ಜಮೀನು ದೊರೆತಿದೆ.ಅಗಲಗುರ್ಕಿ ಗ್ರಾಮದ ಸರ್ವೆ ನಂ 122ರಲ್ಲಿ 9.20 ಎಕರೆ ಜಮೀನನ್ನು ಜಿಲ್ಲಾಡಳಿತ ಮಂಜೂರು ಮಾಡಿದೆ.

ಕಡತ ಈಗ ಚಿಕ್ಕಬಳ್ಳಾಪುರ ಎಪಿಎಂಸಿಯ ಮುಂದಿದೆ. ಅಲ್ಲಿಂದ ಮಾರುಕಟ್ಟೆ ಇಲಾಖೆಯ ಕೇಂದ್ರ ಕಚೇರಿ ತಲುಪಲಿದೆ. ಅಲ್ಲಿಂದ ಹಸಿರು ನಿಶಾನೆ ದೊರೆತ ತಕ್ಷಣವೇ ನೂತನ ಹೂ ಮಾರುಕಟ್ಟೆ ನಿರ್ಮಾಣ ಕಾರ್ಯಗಳು ಆರಂಭವಾಗುವ ಸಾಧ್ಯತೆ ಹೆಚ್ಚಿದೆ. ಮಾರುಕಟ್ಟೆ ನಿರ್ಮಾಣಕ್ಕೆ ಜಮೀನಿನ ವಿಷಯವೇ ಪ್ರಧಾನವಾಗಿ ಚರ್ಚೆ ಆಗುತ್ತಿತ್ತು.

ಕೋವಿಡ್ ಕಾರಣದಿಂದ ಎಪಿಎಂಸಿಯಿಂದ ಕೆ.ವಿ.ಕ್ಯಾಂಪ್‌ ಬಳಿಯ ಖಾಸಗಿ ಜಾಗಕ್ಕೆ ಹೂ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಯಿತು. ಕೋವಿಡ್ ನಿಯಮಗಳು ತೆರವಾದ ನಂತರವೂ ತಾತ್ಕಾಲಿಕ ಮಾರುಕಟ್ಟೆಯಲ್ಲಿಯೇ ವಹಿವಾಟು ನಡೆಯುತ್ತಿತ್ತು. 2021ರ ನವೆಂಬರ್‌ನಲ್ಲಿ ರೈತರು ಮತ್ತು ವರ್ತಕರು ‘ಹಿಂದಿನಂತೆ ಎಪಿಎಂಸಿಯಲ್ಲಿ ಹೂ ವಹಿವಾಟಿಗೆ ಅವಕಾಶ ಕಲ್ಪಿಸಬೇಕು’ ಎಂದುಪ್ರತಿಭಟನೆ ನಡೆಸಿದರು. ಆಗ ಸಚಿವ ಡಾ.ಕೆ.ಸುಧಾಕರ್ ‘ಎಪಿಎಂಸಿಯಲ್ಲಿ ವಹಿವಾಟಿಗೆ ಅವಕಾಶವಿಲ್ಲ.ಎಲ್ಲರಿಗೂ ಅನುಕೂಲವಾಗುವ ಜಾಗದಲ್ಲಿ ಹೂ ಮಾರುಕಟ್ಟೆ ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದ್ದರು.

ADVERTISEMENT

ತಿಪ್ಪೇನಹಳ್ಳಿ, ಪುಟ್ಟತಿಮ್ಮನಹಳ್ಳಿ, ಮರಸನಹಳ್ಳಿ ಮತ್ತಿತರ ಕಡೆಗಳಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಸ್ಥಳಗಳನ್ನು ನೋಡಲಾಗಿತು. ತಿಪ್ಪೇನಹಳ್ಳಿ ಬಳಿಯ ಸರ್ಕಾರಿ ಜಮೀನಿನಲ್ಲಿ ಅಥವಾ ಮರಸನಹಳ್ಳಿ ಬಳಿಯ ಗುಂಡುತೋಪಿನಲ್ಲಿ ವಹಿವಾಟಿಗೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಮೆಗಾ ಡೇರಿಯ ಬಳಿಯ ತೋಟಗಾರಿಕೆ ಇಲಾಖೆಯ ಜಮೀನಿನಲ್ಲಿ ಮಾರುಕಟ್ಟೆಗೆ ಜಮೀನು ಕಲ್ಪಿಸಿಕೊಡಬೇಕು ಎನ್ನುವ ಬೇಡಿಕೆಯನ್ನು ವರ್ತಕರು ಮತ್ತು ರೈತರು ಮುಂದಿಟ್ಟಿದ್ದರು. ತೋಟಗಾರಿಕೆ ಇಲಾಖೆಯ ಜಮೀನು ನೀಡುವುದು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸಹ ತಿಳಿಸಿದರು. ಹೀಗೆ ದಿನಕ್ಕೊಂದು ಜಾಗದ ಹೆಸರುಗಳು ಚರ್ಚೆಗೆ ಬರುತ್ತಿದ್ದವು.

ಹೂ ಮಾರುಕಟ್ಟೆಗೆ ಜಾಗ ಹುಡುಕುವ ವಿಚಾರ ಅಧಿಕಾರಿಗಳು, ವರ್ತಕರು, ರೈತರ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು.

ಈಗ ಮಂಜೂರಾಗಿರುವ ಅಗಲಗುರ್ಕಿ ಗ್ರಾಮದ ಸರ್ವೆ ನಂ 122ರಲ್ಲಿರುವ 9.20 ಎಕರೆ ಜಮೀನುಕೆ.ವಿ.ಕ್ಯಾಂಪಸ್ ಬಳಿಯ ತಾತ್ಕಾಲಿಕ ಹೂ ಮಾರುಕಟ್ಟೆ ಹಿಂಭಾಗದ ಬೆಟ್ಟದ ಸಮೀಪವಿದೆ. ಈ ಜಾಗಕ್ಕೆ ಕೆ.ವಿ.ಕ್ಯಾಂಪಸ್ ಕಡೆಯಿಂದ ಹಾಗೂ ರಾಷ್ಟ್ರೀಯ ಹೆದ್ದಾರಿ 44 ಕಡೆಯಿಂದಲೂ ದಾರಿ ಇದೆ. ರೈತರು ಮತ್ತು ವರ್ತಕರ ಬೇಡಿಕೆಯ ಪ್ರಕಾರ ನಗರಕ್ಕೆ ಸಮೀಪದಲ್ಲಿಯೇ ಜಾಗ ಮಂಜೂರಾಗಿದೆ.

ಚಿಕ್ಕಬಳ್ಳಾಪುರ ಹೂ ಮಾರುಕಟ್ಟೆಯಲ್ಲಿ ವರ್ತಕರು, ಗ್ರಾಹಕರು, ರೈತರು ಸೇರಿದಂತೆ ನಿತ್ಯ 20 ಸಾವಿರಕ್ಕೂ ಹೆಚ್ಚು ಜನರು ವಹಿವಾಟು ನಡೆಸುವರು. ತೋಟಗಾರಿಕಾ ಇಲಾಖೆಯ ಮಾಹಿತಿಯ ಪ್ರಕಾರಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ 2,500 ಹೆಕ್ಟೇರ್‌ನಲ್ಲಿ ಹೂ ಬೇಸಾಯ ಮಾಡಲಾಗುತ್ತಿದೆ.

ಜಿಲ್ಲೆಯ ವಿವಿಧ ಭಾಗಗಳಿಂದ ಅಷ್ಟೇ ಅಲ್ಲದೆ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ ಜಿಲ್ಲೆಯ ವ್ಯಾಪಾರಿಗಳು ಹೂ ಖರೀದಿಗೆ ಇಲ್ಲಿಗೆ ಬರುವರು. ತಮಿಳುನಾಡು, ಕೇರಳ, ಆಂಧ್ರಪ್ರದೇಶಕ್ಕೆ ಚಿಕ್ಕಬಳ್ಳಾಪುರ ಮಾರುಕಟ್ಟೆಯಿಂದ ಹೂ ರವಾನೆ ಆಗುತ್ತದೆ. ಹೂವಿನ ವಿಚಾರದಲ್ಲಿ ಚಿಕ್ಕಬಳ್ಳಾಪುರ ಮಾರುಕಟ್ಟೆ ರಾಜ್ಯದಲ್ಲಿಯೇ ಪ್ರಸಿದ್ಧವಾಗಿದೆ.

ಎಪಿಎಂಸಿಯಲ್ಲಿ ರಂಗಿಲ್ಲ: ಚಿಕ್ಕಬಳ್ಳಾಪುರ ಎಪಿಎಂಸಿ ಆವರಣದಲ್ಲಿ 1995ರಲ್ಲಿಒಂದು ಎಕರೆ ಜಾಗದಲ್ಲಿ ಹೂ ಮಾರುಕಟ್ಟೆ ನಿರ್ಮಾಣವಾಯಿತು. ನಂತರದ ದಿನಗಳಲ್ಲಿ ಹೂ ಬೇಸಾಯ ಹೆಚ್ಚಿದಂತೆ ವಹಿವಾಟು ಸಹ ದೊಡ್ಡ ಪ್ರಮಾಣದಲ್ಲಿ ವಿಸ್ತಾರವಾಯಿತು.

ಕೋವಿಡ್ ಕಾರಣದಿಂದ ಕೆ.ವಿ.ಕ್ಯಾಂಪಸ್ ಬಳಿಯ ತಾತ್ಕಾಲಿಕ ಮಾರುಕಟ್ಟೆಗೆ ಹೂ ವಹಿವಾಟು ಸ್ಥಳಾಂತರವಾಯಿತು. ಅಂದಿನಿಂದ ಇಂದಿನವರೆಗೂ ಅಲ್ಲಿಯೇ ವಹಿವಾಟು ನಡೆಯುತ್ತಿದೆ. ಶೇ 95ರಷ್ಟು ವರ್ತಕರು ತಾತ್ಕಾಲಿಕ ಮಾರುಕಟ್ಟೆಯಲ್ಲಿ ಶೇ 5ರಷ್ಟು ವರ್ತಕರು ಎಪಿಎಂಸಿಯಲ್ಲಿ ಹೂ ವಹಿವಾಟು ನಡೆಸುತ್ತಿದ್ದಾರೆ.

***

‘ಶೀಘ್ರ ಕೇಂದ್ರ ಕಚೇರಿಗೆ ಕಡತ ರವಾನೆ’

9.20 ಎಕರೆಯಲ್ಲಿರಾಜ್ಯದಲ್ಲಿಯೇ ಮಾದರಿಯಾದ ಹೂ ಮಾರುಕಟ್ಟೆ ನಿರ್ಮಾಣವಾಗಲಿದೆ. ಜಾಗ ಮಂಜೂರಾತಿ ಆದೇಶವು ಜಿಲ್ಲಾಡಳಿತದಿಂದ ಎಪಿಎಂಸಿಗೆ ತಲುಪಿದೆ. ನಾವು ಇಲಾಖೆಯ ಕೇಂದ್ರ ಕಚೇರಿಗೆ ಕಡತ ರವಾನಿಸುತ್ತೇವೆ ಎಂದು ಚಿಕ್ಕಬಳ್ಳಾಪುರ ಎಪಿಎಂಸಿ ಪ್ರಭಾರ ಕಾರ್ಯದರ್ಶಿ ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಕಚೇರಿಯ ಒಪ್ಪಿಗೆ ದೊರೆತ ನಂತರ ಜಮೀನಿನ ಸರ್ವೆ, ಮಾರುಕಟ್ಟೆ ನಿರ್ಮಾಣದ ಯೋಜನೆಗಳನ್ನು ರೂಪಿಸಲಾಗುವುದು. ಎಪಿಎಂಸಿ ಇರುವುದೇ ರೈತರಿಗೆ ಅನುಕೂಲ ಮಾಡಿಕೊಡಲು ಎಂದರು.

ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರೈತರು ಹೂ ಬೇಸಾಯ ಮಾಡುತ್ತಿದ್ದಾರೆ. ನಿತ್ಯ 25 ಸಾವಿರ ಜನರು ಹೂ ಮಾರುಕಟ್ಟೆಯಲ್ಲಿ ಸೇರುವರು. ಎಪಿಎಂಸಿಯಲ್ಲಿ ಸಂಚಾರ ದಟ್ಟಣೆ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ನೂತನ ಮಾರುಕಟ್ಟೆಗೆ ವಿಶಾಲ ಜಾಗ ಅಗತ್ಯವಿತ್ತು. ಈಗ ಮಂಜೂರಾಗಿರುವ ಜಾಗ ನಗರಕ್ಕೆ ಸಮೀಪದಲ್ಲಿಯೇ ಇರುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.

***

ಪಟ್ಟು ಬಿಡದ ಸುಧಾಕರ್

ಚಿಕ್ಕಬಳ್ಳಾಪುರ ಹೂ ಮಾರುಕಟ್ಟೆಯ ವಿವಾದ ವರ್ತಕರು ಮತ್ತು ರೈತರ ನಡುವೆ ಗುಂಪುಗಾರಿಕೆಗೂ ಕಾರಣವಾಗಿದೆ. ರಾಜಕಾರಣವೂ ಪ್ರವಹಿಸಿದೆ ಎನ್ನುತ್ತವೆ ಮೂಲಗಳು.

2021ರ ನ.13ರಂದು ಹೂ ಬೆಳೆಗಾರರು ಹಾಗೂ ವರ್ತಕರು ಪ್ರತಿಭಟನೆ ನಡೆಸಿದ್ದರು. ಆಗ ಸ್ಥಳಕ್ಕೆ ಬಂದ ಸಚಿವ ಡಾ.ಕೆ.ಸುಧಾಕರ್, ‘ಎ‍ಪಿಎಂಸಿಯಲ್ಲಿ ಹೂ ವಹಿವಾಟು ನಡೆಸಲು ಅವಕಾಶವಿಲ್ಲ. ಅಲ್ಲಿ 70 ಮಳಿಗೆಗಳಿಗೆ 130ಕ್ಕೂ ಹೆಚ್ಚು ವರ್ತಕರು ಇದ್ದಾರೆ. ಜಾಗ ಕಡಿಮೆ ಇದೆ. ನಿಮಗೆ ಅನುಕೂಲವಾಗುವ ಜಾಗದಲ್ಲಿ ಹೂ ಮಾರುಕಟ್ಟೆ ನಿರ್ಮಿಸಲಾಗುವುದು’ ಎಂದಿದ್ದರು.

ನಂತರ ಕೆಲವು ವರ್ತಕರು ಎಪಿಎಂಸಿಯಲ್ಲಿಯೇ ವಹಿವಾಟು ನಡೆಸಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಮತ್ತೊಂದು ಗುಂಪಿನ ವರ್ತಕರು, ಕೆ.ವಿ.ಕ್ಯಾಂಪಸ್ ಬಳಿಯ ತಾತ್ಕಾಲಿಕ ಹೂ ಮಾರುಕಟ್ಟೆಯಲ್ಲಿಯೇ ವಹಿವಾಟಿಗೆ ಅವಕಾಶ ನೀಡಬೇಕು ಎಂದು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.