ADVERTISEMENT

ಕೆಂಬಾವುಟಕ್ಕೆ ಬಲ ತುಂಬಲು ಸಿದ್ಧತೆ

ಬಾಗೇಪಲ್ಲಿಯಲ್ಲಿ ಸಿಪಿಎಂ ರಾಜ್ಯ ರಾಜಕೀಯ ಸಮಾವೇಶ

ಡಿ.ಎಂ.ಕುರ್ಕೆ ಪ್ರಶಾಂತ
Published 30 ಜುಲೈ 2022, 7:39 IST
Last Updated 30 ಜುಲೈ 2022, 7:39 IST
..
..   

ಚಿಕ್ಕಬಳ್ಳಾಪುರ:ರಾಜ್ಯದಲ್ಲಿ 1980ರ ದಶಕದಿಂದ ಇಲ್ಲಿಯವರೆಗೂ ಸಿಪಿಎಂನ ಕೆಂಬಾವುಟ ಗಟ್ಟಿಯಾಗಿ ನೆಲೆಯೂರಿದ ವಿಧಾನಸಭಾ ಕ್ಷೇತ್ರ ಎನ್ನುವ ಹೆಗ್ಗರುತು ಬಾಗೇಪಲ್ಲಿ ಕ್ಷೇತ್ರಕ್ಕೆ ಇದೆ. ಇಂತಿಪ್ಪ ಕ್ಷೇತ್ರದಲ್ಲಿ ಮತ್ತೆ ಸಿಪಿಎಂ ಅನ್ನು ಸದೃಢಗೊಳಿಸಲು ರಾಜ್ಯ ಮತ್ತು ಸ್ಥಳೀಯ ನಾಯಕರು ಆಸ್ಥೆವಹಿಸಿದ್ದಾರೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿಯಲ್ಲಿ ಮತ್ತೆ ಕೆಂಬಾವುಟ ಕಹಳೆಯನ್ನು ಜೋರಾಗಿ ಮೊಳಗಿಸಲು ಸಿದ್ಧತೆಗಳು ನಡೆದಿವೆ. ಆ ಭಾಗವಾಗಿ ಆ.28ರಂದು ಬಾಗೇಪಲ್ಲಿಯಲ್ಲಿ ಸಿಪಿಎಂ ರಾಜ್ಯ ಮಟ್ಟದ ರಾಜಕೀಯ ಸಮಾವೇಶಕ್ಕೆ ವೇದಿಕೆ ಸಿದ್ಧಗೊಳಿಸಲಾಗುತ್ತಿದೆ. ಈ ಮೂಲಕ ಮತ್ತೆ ಬಾಗೇಪಲ್ಲಿ ಕ್ಷೇತ್ರ ರಾಜ್ಯದ ಜನರ ಗಮನ ಸೆಳೆಯುತ್ತಿದೆ. ಅದಕ್ಕೆ ಕಾರಣ ಸಿಪಿಎಂ ಅಭ್ಯರ್ಥಿಗಳು ಗೆಲುವು ದಾಖಲಿಸುತ್ತಿದ್ದ ಕ್ಷೇತ್ರ ಇದು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯರಾದ ಎಂ.ಎ.ಬೇಬಿ ಮತ್ತು ಬಿ.ಬಿ.ರಾಘವಲು ಸಮಾವೇಶದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳುವರು. 30 ಸಾವಿರ ಜನರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಸಹ ಇದೆ. ಬಾಗೇಪಲ್ಲಿ ಕ್ಷೇತ್ರದ ರಾಜಕಾರಣದಲ್ಲಿ ಅದರಲ್ಲಿಯೂ ಸಿಪಿಎಂ ಕಾರ್ಯಕರ್ತರಲ್ಲಿ ಹೊಸ ಹುರುಪು ನೀಡುವುದು ಖಚಿತ.

ADVERTISEMENT

ಸಮಾವೇಶದ ಹಿನ್ನೆಲೆಯಲ್ಲಿ ಈಗಾಗಲೇ ಸಿಪಿಎಂ ಪಕ್ಷವು ಬಾಗೇಪಲ್ಲಿ, ಗುಡಿಬಂಡೆ ಮತ್ತು ಚೇಳೂರು ತಾಲ್ಲೂಕಿನಲ್ಲಿ ಹಳ್ಳಿಗಳಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ಆ.5ರಿಂದ ಈ ತಾಲ್ಲೂಕುಗಳಲ್ಲಿ ಸಾಂಸ್ಕೃತಿಕ ಜಾಥಾ ಸಹ ಹಮ್ಮಿಕೊಳ್ಳಲಾಗುತ್ತಿದೆ.

1952ರ ಮೊದಲ ಸಾರ್ವತ್ರಿಕ ಚುನಾವಣೆಯಿಂದ 2018ರ ವಿಧಾನಸಭೆ ಚುನಾವಣೆವರೆಗೆ ಇಲ್ಲಿನ ಮತದಾರರು ‘ಕೈ’ ಕಡೆಗೆ ಒಲುವು ತೋರಿದರೂ ಸಿಪಿಎಂ ಕೈಬಿಟ್ಟಿಲ್ಲ. ಮೂರು ಬಾರಿ ಈ ಕ್ಷೇತ್ರದಲ್ಲಿ ಸಿಪಿಎಂ ಗೆಲುವು ಸಾಧಿಸಿದೆ. ಪ್ರತಿ ಚುನಾವಣೆ ಗಳಲ್ಲಿಯೂ ಕಾಂಗ್ರೆಸ್ ಮತ್ತು ಸಿಪಿಎಂನ ನಡುವೆಯೇ ಪೈಪೋಟಿ ಇದ್ದೇ ಇರುತ್ತದೆ.

ಮೊದಲ ಚುನಾವಣೆಯಿಂದ ಮೂರು ದಶಕ ಕಾಲ ಈ ಕ್ಷೇತ್ರದಲ್ಲಿ ಅಧಿಕಾರ ಹಿಡಿಯಲು ಕಮ್ಯುನಿಸ್ಟರು ಪ್ರಯತ್ನಿಸಿದರೂ ಯಶಸು ದೊರೆತಿರಲಿಲ್ಲ. 1983ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಮುನಿರಾಜು ಅವರನ್ನು ಸೋಲಿಸುವ ಮೂಲಕ ಎ.ವಿ. ಅಪ್ಪಾಸ್ವಾಮಿ ರೆಡ್ಡಿ ಮೊದಲ ಬಾರಿಗೆ ಸಿಪಿಎಂ ಖಾತೆ ತೆರೆದು ವಿಧಾನಸೌಧ ಪ್ರವೇಶಿಸಿದರು. ಅಲ್ಲಿಂದ ಬಾಗೇಪಲ್ಲಿಯಲ್ಲಿ ಸಿಪಿಎಂ ಪರ್ವ ಆರಂಭವಾಯಿತು.

ಅಪ್ಪಾಸ್ವಾಮಿ ರೆಡ್ಡಿ ಅವರು ಅನಾರೋಗ್ಯದ ಕಾರಣ ರಾಜಕಾರಣದಿಂದ ದೂರು ಉಳಿದರು. ಆ ನಂತರ ಜಿ.ವಿ.ಶ್ರೀರಾಮರೆಡ್ಡಿ ಬಾಗೇಪಲ್ಲಿ ಸಿಪಿಎಂ ನಾಯಕರಾದರು.1982ರಲ್ಲಿ ಬಾಗೇಪಲ್ಲಿಯಲ್ಲಿ ಪೂರ್ಣಾವಧಿ ಕಾರ್ಯಕರ್ತರಾಗಿ ಬಂದ ಅವರು 1985ರಲ್ಲಿ ಸಿಪಿಎಂ ಅಭ್ಯರ್ಥಿಯಾದರು. ಶ್ರೀರಾಮರೆಡ್ಡಿ ಬದುಕಿರುವವರೆಗೂ ಕಮ್ಯುನಿಸ್ಟರ ಕಾಯಂ ‘ಹುರಿಯಾಳು’ ಆಗಿದ್ದರು. ಎಂಟು ಚುನಾವಣೆಗಳ ಸ್ಪರ್ಧಿಸಿದ್ದರು. ಆರರಲ್ಲಿ ಸೋತು, ಎರಡು ಬಾರಿ (1994, 2004) ಗೆಲುವು ಕಂಡರು.

ಈ ಎಲ್ಲ ದೃಷ್ಟಿಯಿಂದ ರಾಜ್ಯದಲ್ಲಿ ಇಂದಿಗೂ ಸಿಪಿಎಂಗೆ ಭದ್ರವಾದ ನೆಲೆ ಇರುವುದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ. ಈ ದೃಷ್ಟಿಯಿಂದ ಸಿಪಿಎಂ ಮುಖಂಡರು ಮತ್ತೆ ಕೆಂಬಾವುಟಕ್ಕೆ ಬಲ ತುಂಬಲು ಸಮಾವೇಶ ನಡೆಸುತ್ತಿದ್ದಾರೆ.

‘ಆ.28ರಂದು ನಾವು ದುಡಿಯುವ ಜನರ ಶಕ್ತಿ ಪ್ರದರ್ಶನ ಮಾಡಬೇಕು ಎಂದುಕೊಂಡಿದ್ದೇವೆ. ಪ್ರಜಾ ಸಂಘರ್ಷ ಸಮಿತಿಯ ಭಾಗವಾಗಿದ್ದವರು ಸಹ ನಮ್ಮವರೇ. ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರ ಪಂಚಾಯಿತಿಯಲ್ಲಿ ಸಿಪಿಎಂ ಹಿಡಿತ ಇತ್ತು. ನಾವು ವಿಭಾಗವಾದ ಮೇಲೆ ಸೋತಿದ್ದೆವು. ಈಗ ಪಿಎಸ್‌ಎಸ್ ಮತ್ತು ಸಿಪಿಎಂ ಒಂದಾಗಿದೆ. ಹೀಗೆ ಇಂತಹ ಹಲವು ಪಂಚಾಯಿತಿಗಳು ಇವೆ’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನಿವೆಂಕಟಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘2023ರ ವಿಧಾನಸಭಾ ಚುನಾವಣೆಯ ಪೂರ್ವ ತಯಾರಿಕೆಯಾಗಿ ಸಮಾವೇಶ ಮಾಡುತ್ತಿದ್ದೇವೆ. 8 ಬೇಡಿಕೆಗಳನ್ನು ಈಡೇರಿಸುವಂತೆಈ ರಾಜಕೀಯ ಸಮಾವೇಶದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.