ಕನ್ನಡ
ಚಿಕ್ಕಬಳ್ಳಾಪುರ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮಗಳು ಮತ್ತು ಸರ್ಕಾರದ ಭಾಷಾ ನೀತಿಯ ಅನುಷ್ಠಾನದಲ್ಲಿ ಪ್ರಮುಖ ಪಾತ್ರವಹಿಸುವ ಕನ್ನಡ ಜಾಗೃತ ಸಮಿತಿ ಜಿಲ್ಲೆಗೆ ಸದಸ್ಯರನ್ನು ನೇಮಿಸಿ ಐದು ತಿಂಗಳಾಗಿದೆ. ಆದರೆ ಇಲ್ಲಿಯವರೆಗೂ ಒಂದೇ ಒಂದು ಸಭೆಯೂ ನಡೆದಿಲ್ಲ!
ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳ ನಂತರ ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ಕನ್ನಡ ಜಾಗೃತಿ ಸಮಿತಿಗೆ ಅಧಿಕಾರೇತರ ಸದಸ್ಯರನ್ನು ನೇಮಿಸಲಾಯಿತು. ಆ ಪ್ರಕಾರ 2025ರ ಸೆಪ್ಟೆಂಬರ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಜಾಗೃತ ಸಮಿತಿಗೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಐದು ಮಂದಿ ಸದಸ್ಯರನ್ನು ನೇಮಿಸಲಾಯಿತು.
ಚಿಂತಾಮಣಿಯ ಬಟ್ಲಹಳ್ಳಿಯ ಉಪನ್ಯಾಸಕ ರವಿ ಬಿ.ಕೆ, ಶಿಡ್ಲಘಟ್ಟ ತಾಲ್ಲೂಕಿ ಅಬ್ಲೂಡು ಗ್ರಾಮದ ಫಣೀಂದ್ರ ಪ್ರಸಾದ್ ಡಿ., ಮಳಮಾಚನಹಳ್ಳಿಯ ಸುನಿಲ್ ಕುಮಾರ್ ಎಂ.ಎ., ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಹೋಬಳಿಯ ಮಣಿವಾಲ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಬಿ.ರಂ.ಜಗದೀಶ್, ಗೌರಿಬಿದನೂರಿನ ಯಶಸ್ವಿ ಪದವಿ ಪೂರ್ವ ಕಾಲೇಜಿನಿನ ಕನ್ನಡ ಉಪನ್ಯಾಸಕಿ ನಾಗಮಣಿ ಕೆ. ಸದಸ್ಯರಾಗಿ ನೇಮಕವಾಗಿದ್ದಾರೆ.
ರಾಜ್ಯ ಸರ್ಕಾರ 1997ರಲ್ಲಿ ಕನ್ನಡ ಜಾಗೃತಿ ಸಮಿತಿಗಳ ಪರಿಕಲ್ಪನೆಗೆ ಚಾಲನೆ ನೀಡಿತು. ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಡಿಡಿಪಿಐ), ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ, ನಾಮ ನಿರ್ದೇಶನಗೊಂಡ ಅಧಿಕಾರೇತರ ಸದಸ್ಯರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಸದಸ್ಯರಾಗಿರುತ್ತಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ಸರ್ಕಾರದ ಭಾಷಾ ನೀತಿಯ ಅನುಷ್ಠಾನದಲ್ಲಿ ಜನರೂ ಪಾಲ್ಗೊಳ್ಳುವಂತೆ ನೋಡಿಕೊಳ್ಳುವ ಉದ್ದೇಶದಿಂದ ಜಿಲ್ಲಾ ಮತ್ತು ತಾಲ್ಲೂಕುಮಟ್ಟದ ಕನ್ನಡ ಜಾಗೃತಿ ಸಮಿತಿಗಳು ರಚಿಸಲಾಗುತ್ತದೆ.
ಕನ್ನಡ ಜಾಗೃತಿ ಸಮಿತಿಗಳು ವರ್ಷದಲ್ಲಿ ಮೂರು ತಿಂಗಳಿಗೊಮ್ಮೆ ಒಂದರಂತೆ ವಾರ್ಷಿಕವಾಗಿ ನಾಲ್ಕು ಸಭೆಗಳನ್ನು ನಡೆಸಬೇಕು. ಆಡಳಿತದಲ್ಲಿ ಕನ್ನಡ ಯಾವುದೇ ಕಚೇರಿಯಲ್ಲಿ ಸಮರ್ಪಕವಾಗಿ ಬಳಕೆಯಾಗದೆ ಇರುವುದು ತಿಳಿದು ಬಂದಾಗ ಆ ವಿಚಾರವನ್ನು ಪ್ರಾಧಿಕಾರದ ಅಧ್ಯಕ್ಷರ ಗಮನಕ್ಕೆ ತಂದು, ನಿಗದಿಪಡಿಸಿದ ದಿನಾಂಕದಂದು ಅವರೊಂದಿಗೆ ಪರಿಶೀಲನೆಗೆ ಹೋಗುವ ಕೆಲಸವನ್ನು ಸಮಿತಿ ಸದಸ್ಯರು ಮಾಡಬೇಕು.
ಬ್ಯಾಂಕ್‌ಗಳಲ್ಲಿ ಕರಾರು ಪತ್ರ, ಸಾಲದ ಅರ್ಜಿಗಳು, ರಸೀದಿಗಳು ಯಾವ ಭಾಷೆಯಲ್ಲಿ ಬಳಕೆಯಾಗುತ್ತಿದೆ. ನಗರದಲ್ಲಿ ಜಾಹೀರಾತು ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆಯಾಗುತ್ತಿದೆಯೇ–ಹೀಗೆ ಕನ್ನಡ ಭಾಷೆಯ ವಿಚಾರವಾಗಿ ಸಮಿತಿಗಳು ಸಕ್ರಿಯವಾಗಿ ಕೆಲಸ ಮಾಡಬೇಕು.
ನೆರೆಯ ಆಂಧ್ರಪ್ರದೇಶಕ್ಕೆ ಗಡಿ ಹಂಚಿಕೊಂಡಿರುವ ಜಿಲ್ಲೆಯ ಮೇಲೆ ತೆಲುಗು ಭಾಷೆಯ ದಟ್ಟ ಪ್ರಭಾವ ಇದೆ. ಇಂತಹ ನೆಲದಲ್ಲಿ ಕನ್ನಡದ ವಾತಾವರಣ ಕಾಪಿಟ್ಟುಕೊಳ್ಳುವ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳಷ್ಟೇ, ಕನ್ನಡ ಜಾಗೃತಿ ಸಮಿತಿಗಳ ಮೇಲಿದೆ
ಗಡಿಭಾಗದ ಗ್ರಾಮಾಂತರ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಕಲಿಯುವ ಮಕ್ಕಳೇ ಇಲ್ಲದಂತಹ ಸ್ಥಿತಿ ಇದೆ. ವಿದ್ಯಾರ್ಥಿಗಳಲ್ಲಿ ಕನ್ನಡ ಓದುವ, ಬರೆಯುವವರ ಪ್ರಮಾಣ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ಜಾಗೃತಿ ಸಮಿತಿಗಳು ಸಭೆ ನಡೆಸುವ ಮೂಲಕ ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಬೇಕು. ಆದರೆ ಇಲ್ಲಿಯವರೆಗೂ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಸಭೆಯೇ ನಡೆದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.