ADVERTISEMENT

ರಾಜಕಾರಣದ ಚಿತ್ರಣ ಬದಲಿಸಿದ ಪಕ್ಷೇತರರು!

ನಾಗಸಂದ್ರ ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಿದ ಮತದಾರರು l ಕಾಂಗ್ರೆಸ್‌ಗೆ ಆಘಾತ ನೀಡಿದ ಫಲಿತಾಂಶ

ಎ.ಎಸ್.ಜಗನ್ನಾಥ್
Published 1 ಜನವರಿ 2021, 2:21 IST
Last Updated 1 ಜನವರಿ 2021, 2:21 IST
ಗೌರಿಬಿದನೂರು ತಾಲ್ಲೂಕಿನಲ್ಲಿ ಹೊಸ ದಾಖಲೆ ನಿರ್ಮಿಸಿದ ಪಕ್ಷೇತರರು
ಗೌರಿಬಿದನೂರು ತಾಲ್ಲೂಕಿನಲ್ಲಿ ಹೊಸ ದಾಖಲೆ ನಿರ್ಮಿಸಿದ ಪಕ್ಷೇತರರು   

ಗೌರಿಬಿದನೂರು: ಸ್ವಾತಂತ್ರ್ಯ ಬಂದಾಗಿನಿಂದಲೂ ನಾಗಸಂದ್ರದ ಜಗುಲಿಗೆ ಅಂಟಿಕೊಂಡಿದ್ದ ಒಂದೇ ಕುಟುಂಬದ ರಾಜಕಾರಣಕ್ಕೆ ಈ‌ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜನತೆ ಪಕ್ಷೇತರರಿಗೆ ಬೆಂಬಲ ನೀಡುವ ಮೂಲಕ ತಾಲ್ಲೂಕಿನಲ್ಲಿ ಕುಟುಂಬ ಮತ್ತು ಜಾತಿ‌ ರಾಜಕಾರಣ ತೊರೆದು ಪರ್ಯಾಯ ರಾಜಕಾರಣದತ್ತ ಮುಖ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.

ತಾಲ್ಲೂಕಿನ 37 ಗ್ರಾ.ಪಂ.ಗಳಲ್ಲಿ 247 ಕ್ಷೇತ್ರಗಳ 593 ಸ್ಥಾನಗಳಿಗೆ 1,801 ಅಭ್ಯರ್ಥಿಗಳು ಕಣದಲ್ಲಿದ್ದರು. 297 ಮತಗಟ್ಟೆಗಳಲ್ಲಿ 2ರಲ್ಲಿ‌ 7 ಅಭ್ಯರ್ಥಿಗಳ ಅವಿರೋಧ ಆಯ್ಕೆಯಾಗಿದ್ದು ಉಳಿದ 295 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆದಿದೆ. ಇದರಲ್ಲಿ ಬುಧವಾರ ನಡೆದ ಮತ ಎಣಿಕೆ ಕಾರ್ಯದಲ್ಲಿ ಕಾಂಗ್ರೆಸ್ ಬೆಂಬಲಿತ 239, ಬಿಜೆಪಿ 145, ಕೆ.ಎಚ್. ಪುಟ್ಟಸ್ವಾಮಿ ಗೌಡ ಬಣ 130, ಜೆಡಿಎಸ್ ಮತ್ತು ಕೆ. ಕೆಂಪರಾಜು ಬಣ 68 ಹಾಗೂ ಉಳಿದಂತೆ 11 ಸ್ಥಾನಗಳಲ್ಲಿ ಪಕ್ಷೇತರರು ಗೆದ್ದಿದ್ದಾರೆ.

ಇದರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಸ್ಪಷ್ಟ ಬಹುಮತವಿರುವ ನಗರಗೆರೆ, ಜಿ. ಕೊತ್ತೂರು, ಚಿಕ್ಕಕುರುಗೋಡು, ಗಂಗಸಂದ್ರ, ಡಿ. ಪಾಳ್ಯ, ಗೆದರೆ, ನಾಮಗೊಂಡ್ಲು, ಬಿ. ಬೊಮ್ಮಸಂದ್ರ, ಹುದುಗೂರು, ಅಲೀಪುರ ಗ್ರಾ.ಪಂ.ಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧವಾಗಿದೆ. ಕೆ.ಎಚ್. ಪುಟ್ಟಸ್ವಾಮಿ ಗೌಡ ಬಣದಿಂದ ಕಾದಲವೇಣಿ, ತೊಂಡೇಬಾವಿ, ರಮಾಪುರ, ಸೊನಗಾನಹಳ್ಳಿ, ಕಲ್ಲಿನಾಯಕನಹಳ್ಳಿ, ತರಿದಾಳು, ಕುರುಬರಹಳ್ಳಿರಲ್ಲಿ ಬಣದ ಅಭ್ಯರ್ಥಿಗಳ ಸ್ಪಷ್ಟ ಬಹುಮತದಿಂದ ಅಧಿಕಾರದ ಗದ್ದುಗೆ ಏರಲಿದ್ದಾರೆ.

ADVERTISEMENT

ಇನ್ನು ಬಿಜೆಪಿ ಬೆಂಬಲಿತರಿಂದ ನಕ್ಕಲಹಳ್ಳಿ, ಬೇವಿನಹಳ್ಳಿ, ಪುರ, ಮಿನಕನಗುರ್ಕಿ, ಜರಬಂಡಹಳ್ಳಿ, ಶ್ಯಾಂಪುರ, ಗೌಡಗೆರೆ, ಹಳೇಹಳ್ಳಿ ಸಿದ್ಧವಾಗಿದ್ದು, ಜೆಡಿಎಸ್ ಮತ್ತು ಕೆಂಪರಾಜು ಬಣದ ತೆಕ್ಕೆಗೆ ಮುದುಗೆರೆ, ಬಿ.ಜಿ. ವೇಣುಗೋಪಾಲರೆಡ್ಡಿ ಬಣಕ್ಕೆ ಜಿ. ಬೊಮ್ಮಸಂದ್ರ ಪಂಚಾಯಿತಿ ದೊರೆತಿದೆ. ಉಳಿದಂತೆ ಹೊಸೂರು, ಇಡಗೂರು, ಕುರೂಡಿ, ಹಾಲಗಾನಹಳ್ಳಿ, ದೊಡ್ಡಕುರುಗೋಡು, ಮೇಳ್ಯ, ಮುದಲೋಡು, ವಾಟದಹೊಸಹಳ್ಳಿ, ಬೈಚಾಪುರ ಸೇರಿದಂತೆ ಇನ್ನಿತರ ಗ್ರಾ.ಪಂ.ಗಳಲ್ಲಿ ಎಲ್ಲ ಪಕ್ಷ ಮತ್ತು ಬಣದ ಅಭ್ಯರ್ಥಿಗಳು ಜಯಗಳಿಸಿರುವ ಕಾರಣ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವುದು ಅನಿವಾರ್ಯವಾಗಿದೆ.

ದಶಕಗಳ‌ ಕಾಲ ತಾಲ್ಲೂಕಿನಲ್ಲಿ ಗೆದ್ದು ಬೀಗುತ್ತಿದ್ದ ಒಂದೇ ಕುಟುಂಬದ ರಾಜಕಾರಣಕ್ಕೆ ಈ ಬಾರಿ ಬ್ರೇಕ್ ಬಿದ್ದಿದೆ. ಸಮಾಜ ಸೇವೆ ಮೂಲಕ ತಾಲ್ಲೂಕಿಗೆ ಪಾದಾರ್ಪಣೆ ಮಾಡಿರುವ ಪುಟ್ಟಸ್ವಾಮಿಗೌಡ ಹಾಗೂ ಕೆಂಪರಾಜು ಬಣದ ಅಭ್ಯರ್ಥಿಗಳು ಶೂನ್ಯ ಮಟ್ಟದಿಂದ ಬಂದು ಈ ಬಾರಿ ವಿವಿಧ ಗ್ರಾ.ಪಂ.ಗಳಲ್ಲಿ ಖಾತೆ ಆರಂಭಿಸಿದ್ದು ತಾಲ್ಲೂಕಿನಲ್ಲಿ ತಮ್ಮ ತೋಳ್ಬಲ‌ ಹಾಗೂ ಧನಬಲದ ತಾಕತ್ತು
ಪ್ರದರ್ಶಿಸಿದ್ದಾರೆ.

ಇನ್ನು ಬಿಜೆಪಿ ಕ್ಷೇತ್ರದಲ್ಲಿ ತನ್ನ ಅಸ್ತಿತ್ವ ‌ಉಳಿಸಿಕೊಳ್ಳಲು ಸಾಕಷ್ಟು‌ ಕಸರತ್ತು ಮಾಡಿದೆ. ಇದರೊಂದಿಗೆ ಪಕ್ಷದಲ್ಲಿ ಉತ್ಸಾಹ ಕಳೆದುಕೊಂಡಿದ್ದ ಜೆಡಿಎಸ್ ಕೆಂಪರಾಜು ಅವರೊಂದಿಗೆ ಮೈತ್ರಿ ಮಾಡಿಕೊಂಡು ನಾವೂ ಕ್ಷೇತ್ರದಲ್ಲಿ ಇದ್ದೇವೆ ಎಂಬುದನ್ನು
ತೋರಿಸಿದ್ದಾರೆ.

ದಶಕಗಳ ಕಾಲ ತಾಲ್ಲೂಕಿನಲ್ಲಿ ಬಹುತೇಕ ಗ್ರಾ.ಪಂ.ಗಳಲ್ಲಿ ಚುಕ್ಕಾಣಿ ಹಿಡಿದು ಕ್ಷೇತ್ರದ ಅಭಿವೃದ್ಧಿಯ ಜತೆಗೆ ನಾಯಕರ ಬೆಳವಣಿಗೆಗೆ ಸಹಕಾರಿಯಾಗಿದ್ದ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ನೇತೃತ್ವದ ಕಾಂಗ್ರೆಸ್‌ಗೆ ಈ ಬಾರಿಯ ಫಲಿತಾಂಶ ಆಘಾತ ಉಂಟು ಮಾಡಿದೆ. ಮುಂದಿನ ರಾಜಕೀಯ ನಡೆಯ ಬಗ್ಗೆ ಚಿಂತಿಸುವಂತೆ ಮಾಡಿದೆ. ಕ್ಷೇತ್ರದಲ್ಲಿ ಎದುರಾಳಿಗಳೇ ಇಲ್ಲದೆ ರಾಜಕಾರಣ ಮಾಡುತ್ತಿದ್ದ ಇವರಿಗೆ ಇದೀಗ ದಕ್ಷಿಣ ದಿಕ್ಕಿನಿಂದ ಬರುವ ನಾಯಕರು ಕಂಟಕ ತಂದೊಡ್ಡಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರನ್ನು ಹೊಂದಿರುವ ಬಿಜೆಪಿ ನಾಯಕರು ಶಕ್ತಿಮೀರಿ ಸಾಧ್ಯವಾದಷ್ಟು ಕ್ಷೇತ್ರಗಳನ್ನು ತಮ್ಮ ತೆಕ್ಕೆಗೆ ಪಡೆದಿದ್ದಾರೆ. ಮುಂದೆ ಉಸ್ತುವಾರಿ ಸಚಿವರು ನೀಡುವ ನಿರ್ದೇಶನದ ಮೇರೆಗೆ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

ಯಾವುದೇ ಪಕ್ಷ ಮತ್ತು ಬಣದಲ್ಲಿ ಗುರ್ತಿಸಿಕೊಳ್ಳದಿದ್ದರೂ ತನ್ನ ಸ್ವಬಲದಿಂದ ಜಿ. ಬೊಮ್ಮಸಂದ್ರ ಗ್ರಾ.ಪಂ.ನಲ್ಲಿ 6 ಸ್ಥಾನಗಳನ್ನು ಪಡೆದಿರುವ ವೇಣುಗೋಪಾರೆಡ್ಡಿ ಮುಂದೆ ಯಾರ ಬಣಕ್ಕೆ ಸೇರ್ಪಡೆಯಾಗುತ್ತಾರೆ ಎಂಬುದು ನಿಗೂಢವಾಗಿದೆ.

ದಾಖಲೆ ಬರೆದ ಜೆ. ಕಾಂತರಾಜು:ಮೂರ್ನಾಲ್ಕು ದಶಕಗಳಿಂದಲೂ ಕಾಂಗ್ರೆಸ್ ಪಾಳಯದ ಹಿಡಿತದಲ್ಲಿದ್ದ ತೊಂಡೇಬಾವಿ ಗ್ರಾ.ಪಂ.ನಲ್ಲಿ ಈ ಬಾರಿ ಮುಖಂಡ ಜೆ. ಕಾಂತರಾಜು ಕೆ.ಎಚ್.ಪಿ ಬಣದಿಂದ ಒಟ್ಟು 18 ಸದಸ್ಯರನ್ನು ಕಣಕ್ಕಿಳಿಸಿದ್ದು, ಎಲ್ಲಾ ಸ್ಥಾನಗಳನ್ನು ಪಡೆಯುವ ಮೂಲಕ ದಾಖಲೆ
ನಿರ್ಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.