
ಗೌರಿಬಿದನೂರು: ನಗರದ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯಸೌಧದ ಸಭಾಂಗಣದಲ್ಲಿ ಮಂಗಳವಾರ ಕೆಡಿಪಿ ಸಭೆ ಹಮ್ಮಿಕೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ, ‘ಆಸ್ಪತ್ರೆಗಳಲ್ಲಿ ವೈದ್ಯರು ಸಿಜೇರಿಯನ್ ಬದಲಿಗೆ ಸಾಮಾನ್ಯ ಹೆರಿಗೆಗೆ ಹೆಚ್ಚು ಒತ್ತು ನೀಡಬೇಕು’ ಎಂದು ತಾಲ್ಲೂಕು ವೈದ್ಯರಿಗೆ ಸೂಚನೆ ನೀಡಿದರು.
ಹೆರಿಗೆಗೆ ಬರುವವರನ್ನು ವಿನಾಕಾರಣ ಸಿಜೇರಿಯನ್ ಮಾಡಬಾರದು. ಸಾಮಾನ್ಯ ಹೆರಿಗೆ ಮಾಡಿಸಲು ವೈದ್ಯರು ಗರಿಷ್ಠ ಪ್ರಯತ್ನ ಮಾಡಬೇಕು. ಇದರಿಂದ ಹೆಣ್ಣು ಮಕ್ಕಳು ಆರೋಗ್ಯವಾಗಿರಲು ಸಾಧ್ಯವಾಗಲಿದೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಈ ಬಾರಿ ಹತ್ತನೇ ತರಗತಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನ ಪಡೆಯಲೇಬೇಕು. ಇದಕ್ಕೆ ಶಿಕ್ಷಕರು ವಿದ್ಯಾರ್ಥಿಗಳ ಕಡೆ ಹೆಚ್ಚು ಗಮನ ನೀಡಬೇಕು ಎಂದು ಬಿಇಒ ಗಂಗರೆಡ್ಡಿಗೆ ಸೂಚಿಸಿದರು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಮುಚ್ಚಿರುವ ಜನೌಷಧಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಲಕ್ಷ್ಮಿಕಾಂತ್‌ಗೆ ಸೂಚನೆ ನೀಡಿದರು.
ಬೆಲೆ ನಷ್ಟವಾದ ರೈತರಿಗೆ ಬೆಳೆ ವಿಮೆ ಪಡೆಯಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜೆಜೆಎಂ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಈ ಸಂಬಂಧ ಶೀಘ್ರವೇ ಸಭೆ ಕರೆಯಲಾಗುವುದು. ಗ್ರಾಮೀಣ ಭಾಗದಲ್ಲಿ ಕೆಟ್ಟ ನಿಂತಿರುವ ಶುದ್ಧ ನೀರಿನ ಘಟಕವನ್ನು ಪಂಚಾಯಿತಿಯವರು ನಿಭಾಯಿಸಬೇಕು. ಲೋಕೋಪಯೋಗಿ ಇಲಾಖೆಗೆ ವಹಿಸಿದ ಕೋಟ್ಯಾಂತರ ರೂಪಾಯಿ ಕೆಲಸವನ್ನು ಮಳೆ ಕಾರಣಕ್ಕೆ ನಿಲ್ಲಿಸಲಾಗಿತ್ತು. ಈಗ ಮಳೆ ನಿಂತಿದ್ದು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಕಿವಿಮಾತು ಹೇಳಿದರು.
ತಹಶೀಲ್ದಾರ್ ಅರವಿಂದ್ ಕೆ.ಎಂ ಮಾತನಾಡಿ, ನಗರ ಭಾಗದಲ್ಲಿ ಅತಿ ಹೆಚ್ಚು ಬೀಡಿ, ಸಿಗರೇಟ್ ಅಂಗಡಿಗಳಿವೆ. ಇದಕ್ಕೆ ಆರೋಗ್ಯ ಇಲಾಖೆಗೆ ದಂಡ ವಿಧಿಸುವ ಜವಾಬ್ದಾರಿ ನೀಡಲಾಗಿದೆ. ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಕೆ. ಹೊನ್ನಯ್ಯ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಸರ್ಕಾರಿ ಸೌಲಭ್ಯಗಳ ಕುರಿತು ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸಬೇಕು. ಕುಡಿಯುವ ನೀರಿಗೆ ಸಂಬಂಧಪಟ್ಟ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಬೇಕು, ಜನರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಬೇಕು. ಸಕಾಲದಲ್ಲಿ ಜನರ ಕೆಲಸಗಳನ್ನು ಮಾಡಿಕೊಡಬೇಕು ಎಂದರು.
ಸಭೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.