ADVERTISEMENT

ಗೌರಿಬಿದನೂರು | ತಿಂಗಳಾದರೂ ತೆರೆಯದ ಕೂಸಿನ ಮನೆ ಬಾಗಿಲು

ಗೌರಿಬಿದನೂರು, ಮಂಚೇನಹಳ್ಳಿ ತಾಲ್ಲೂಕಿನಲ್ಲಿ 36 ಮನೆಗಳಲ್ಲಿ 140 ಮಕ್ಕಳು

ಕೆ.ಎನ್‌.ನರಸಿಂಹಮೂರ್ತಿ
Published 22 ಸೆಪ್ಟೆಂಬರ್ 2025, 6:15 IST
Last Updated 22 ಸೆಪ್ಟೆಂಬರ್ 2025, 6:15 IST
ಬಾಗಿಲು ಮುಚ್ಚಿರುವ ಹೊಸೂರು ಕೂಸಿನ ಮನೆ
ಬಾಗಿಲು ಮುಚ್ಚಿರುವ ಹೊಸೂರು ಕೂಸಿನ ಮನೆ   

ಗೌರಿಬಿದನೂರು: ನರೇಗಾ ಕೂಲಿ ಕಾರ್ಮಿಕರ ಮಕ್ಕಳಿಗಾಗಿ ಸರ್ಕಾರವು ಜಾರಿಗೊಳಿಸಿರುವ ಕೂಸಿನ ಮನೆ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲ್ಲೂಕಿನಲ್ಲಿ ಹಳ್ಳ ಹಿಡಿಯುತ್ತಿದೆ.

ಗ್ರಾಮೀಣ ಭಾಗದಲ್ಲಿ ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಹಳ್ಳಿಗಳಲ್ಲಿ ಕ್ರಿಯಾಶೀಲಾ ಉದ್ಯೋಗ ಕಾರ್ಡ್ ಹೊಂದಿರುವ ಕುಟುಂಬದ ಮಹಿಳೆಯರನ್ನು ಗುರುತಿಸಿ ಅವರಿಂದ ಹೆಚ್ಚು ಮಾನವ ದಿನಗಳನ್ನು ಸೃಜಿಸಿ, ಅವರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ನೀಡಬೇಕು ಎಂಬ ಸದುದ್ದೇಶದಿಂದ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನರೇಗಾ ಕೂಲಿ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆಗಳನ್ನು ಆರಂಭಿಸಿದೆ.

7 ತಿಂಗಳಿಂದ 3 ವರ್ಷದ ಒಳಗಿನ ಮಕ್ಕಳನ್ನು ಬೆಳಿಗ್ಗೆ 9ರಿಂದ ಸಂಜೆ 5ರವರೆಗೂ ಕೂಸಿನ ಮನೆಯಲ್ಲಿ ಬಿಟ್ಟು ನೆಮ್ಮದಿಯಿಂದ ಕೆಲಸಕ್ಕೆ ಹೋಗಬಹುದು. ಅಲ್ಲಿ ಕಾಯಕ ಬಂಧುಗಳು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದರ ಜೊತೆಗೆ ಆರೈಕೆ ಮಾಡುತ್ತಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಮಹಿಳೆಯರು ನೆಮ್ಮದಿಯಿಂದ ಕೆಲಸ ಮಾಡುತ್ತಾರೆ. ಗ್ರಾಮೀಣ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಭಾವಿಸಲಾಗಿತ್ತು.

ADVERTISEMENT

ಈ ಕೇಂದ್ರಗಳ ಅನುಷ್ಠಾನ, ಉಸ್ತುವಾರಿ ಮತ್ತು ಸಮರ್ಪಕ ನಿರ್ವಹಣೆಗಾಗಿ ಜಿಲ್ಲೆ, ತಾಲ್ಲೂಕು ಮತ್ತು ಕೇಂದ್ರಗಳ ಹಂತದಲ್ಲಿಯೇ ಸರ್ಕಾರ ಸಮಿತಿ ರಚನೆ ಮಾಡಲು ಆದೇಶಿಸಿತ್ತು.

ಆದರೆ ಗೌರಿಬಿದನೂರು ಮತ್ತು ಮಂಚೇನಹಳ್ಳಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೂಸಿನ ಮನೆ ನಿತ್ಯವೂ ತೆರೆಯುವುದೇ ಇಲ್ಲ. 

ಅಲಕಾಪುರ, ಅಲೀಪುರ, ಬಿ.ಬೊಮ್ಮಸಂದ್ರ, ಬೇವಿನಹಳ್ಳಿ, ಬೈಚಾಪುರ, ಚಿಕ್ಕಕುರುಗೋಡು, ದೊಡ್ಡಕುರುಗೋಡು, ಜಿ.ಕೊತ್ತೂರು, ಗಂಗಸಂದ್ರ, ಗೆದರೆ, ಹಾಲಗಾನಹಳ್ಳಿ, ಗೌಡಗೆರೆ, ಹಳೇಹಳ್ಳಿ, ಹೊಸೂರು, ಹುದುಗೂರು, ಇಡಗೂರು, ಕಲ್ಲಿನಾಯಕನಹಳ್ಳಿ, ಕುರೂಡಿ, ಮಂಚೇನಹಳ್ಳಿ, ಮಿಣಕನಗುರ್ಕಿ, ಮುದುಗೆರೆ, ನಗರಗೆರೆ, ನಕ್ಕಲಹಳ್ಳಿ, ನಾಮಗೊಂಡ್ಲು, ಪುರ, ರಮಾಪುರ, ಶಾಂಪುರ, ಸೊನಗಾನಹಳ್ಳಿ, ತರಿದಾಳು, ತೊಂಡೇಭಾವಿ, ವಾಟದಹೊಸಹಳ್ಳಿ, ಕುರುಬರ ಹಳ್ಳಿ, ಜರಬಂಡಹಳ್ಳಿ, ಕಾದಲವೇಣಿ, ಮೇಳ್ಯ, ಕಾಮಗಾನಹಳ್ಳಿಗಳಲ್ಲಿ ಒಟ್ಟು 36 ಕೂಸಿನ ಮನೆಗಳನ್ನು ಆರಂಭಿಸಲಾಗಿದೆ.

ಇಲ್ಲಿಗೆ 140 ಮಕ್ಕಳು ದಾಖಲಾಗಿದ್ದಾರೆ. ಇದರಲ್ಲಿ ಬೆರಳೆಣಿಕೆಯಷ್ಟು ಕೂಸಿನ ಮನೆಗಳು ಮಾತ್ರ ಪ್ರತಿದಿನ ಬಾಗಿಲು ತೆರೆಯುತ್ತಿವೆ. ಬಹುತೇಕ ಕೂಸಿನ ಮನೆಗಳು ಬಾಗಿಲು ತೆರೆದು ತಿಂಗಳೇ ಕಳೆದಿವೆ.

ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಒಂದೆಡೆಯಾದರೆ, ಪೋಷಕರು ಸಹ ಮಕ್ಕಳನ್ನು ಅಂಗನವಾಡಿಗಳಿಗೆ ಮತ್ತು ಖಾಸಗಿ ಶಿಶು ವಿಹಾರಗಳಿಗೆ ಕಳಿಸಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಈ ಮನೋಭಾವದಿಂದ ಕೂಸಿನ ಮನೆಗಳು ಕೂಸಿಲ್ಲದ ಮನೆಗಳಾಗಿವೆ. ಕೇವಲ ಕಾಟಾಚಾರಕ್ಕೆ ನಡೆಯುತ್ತಿದೆ. ಮಕ್ಕಳಿಗಾಗಿ ಸರ್ಕಾರ ನೀಡಿರುವ ಆಟಿಕೆಗಳು, ಪರಿಕರಗಳು ದೂಳು ಹಿಡಿಯುತ್ತಿವೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆರ್ಥಿಕ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಹೆಚ್ಚಿನ ಹೊರೆಯ ಜೊತೆಗೆ ಕೂಸಿನ ಮನೆಗಳನ್ನು ನಿರ್ವಹಿಸುವುದು ಕಷ್ಟವಾಗಿದೆ. ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಕೂಸಿನ ಮನೆಯ ಯೋಜನೆ ಯಶಸ್ಸು ಕಾಣುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕಾಲ ಕಾಲಕ್ಕೆ ಭೇಟಿ ನೀಡಿ ಪರಿಶೀಲಿಸಿ, ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅವಶ್ಯಕತೆಯಿದೆ ಎಂದು ಸಾರ್ವಜನಿಕರು ತಿಳಿಸಿದರು.

ಮುದುಗೆರೆ ಕೂಸಿನ ಮನೆ ಸ್ಥಿತಿ

ನರೇಗಾ ಕೂಲಿ ಕಾರ್ಮಿಕರ ಮಕ್ಕಳಿಗೆ ಮನೆಗಳು ಬೆಳಿಗ್ಗೆ 9ರಿಂದ ಸಂಜೆ 5ರವರೆಗೂ ಕಾರ್ಯಾರಂಭ‌ 7 ತಿಂಗಳಿಂದ 3 ವರ್ಷದ ಒಳಗಿನ ಮಕ್ಕಳ ಆರೈಕೆ

ಖಾಸಗಿ ನರ್ಸರಿಗಳ ಆಕರ್ಷಣೆ
ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪೋಷಕರು ಖಾಸಗಿ ಪ್ರಿ ನರ್ಸರಿಗೆ ಆಕರ್ಷಣೆ ಒಳಗಾಗಿ ಹೆಚ್ಚಿನ ಮಕ್ಕಳನ್ನು ಅಲ್ಲಿಗೆ ಕಳುಹಿಸುತ್ತಿದ್ದಾರೆ. ಇದರಿಂದ ಕೂಸಿನ ಮನೆಗೆ ಮಕ್ಕಳನ್ನು ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಮಕ್ಕಳ ಕೊರತೆಯಾಗಿದೆ. ಮುಂದಿನ ದಿನಗಳಲ್ಲಿ ಐಇಸಿ ಚಟುವಟಿಕೆಗಳನ್ನು ಹೆಚ್ಚು ಮಾಡಿ ಕೂಸಿನ ಮನೆಗಳನ್ನು ಸಮರ್ಥವಾಗಿ ನಿಭಾಯಿಸಲಾಗುವುದು. ಜಿ.ಕೆ ಹೊನ್ನಯ್ಯ ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಗೌರಿಬಿದನೂರು ಆಸಕ್ತಿ ತೋರದ ಪಿಡಿಒಗಳು ಸರ್ಕಾರ ಕೂಲಿ ಕಾರ್ಮಿಕರ ಮಕ್ಕಳಿಗಾಗಿ ಕೂಸಿನ ಮನೆಗಳನ್ನು ಆರಂಭಿಸಿದೆ. ಆದರೆ ಪಿಡಿಒಗಳು ಇದರ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಅಪರೂಪಕ್ಕೆ ಒಮ್ಮೆ ಬಾಗಿಲು ತೆರೆಯುತ್ತಾರೆ. ಇದರಿಂದ ಕಾರ್ಮಿಕರಿಗೆ ಇದರ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ತಿಮ್ಮಯ್ಯ ಮುದುಗೆರೆ ಗ್ರಾಮಸ್ಥ ಖಾಸಗಿ ಶಿಶು ವಿಹಾರದ ಸ್ಪರ್ಧೆ ಗ್ರಾಮೀಣ ಭಾಗದಲ್ಲಿ ಅಂಗನವಾಡಿಗಳು ಕೆಲಸ ನಿರ್ವಹಿಸುತ್ತಿವೆ. ಜೊತೆಯಲ್ಲಿ ಕೂಸಿನ ಮನೆಗಳನ್ನು ಸಹ ಆರಂಭಿಸಿದ್ದಾರೆ. ಖಾಸಗಿ ಶಿಶು ವಿಹಾರಗಳ ಸ್ಪರ್ಧೆ ನಡುವೆ ಕೂಸಿನ ಮನೆಗಳಿಗೆ ಮಕ್ಕಳು ಬರುವುದೇ ಕಷ್ಟವಾಗಿದೆ. ಹನುಮಂತರಾಯಪ್ಪ ಹೊಸೂರು ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.