ADVERTISEMENT

ಚಿಕ್ಕಬಳ್ಳಾಪುರ | ಇ-ಕೆವೈಸಿ: ಶೇ72 ರಷ್ಟು ಗುರಿ ಸಾಧನೆ

ಜಿಲ್ಲೆಯಲ್ಲಿ ನರೇಗಾ ಕೂಲಿ ಕಾರ್ಮಿಕರಿಗಾಗಿ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 5:52 IST
Last Updated 17 ನವೆಂಬರ್ 2025, 5:52 IST
   

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳಿಗೆ ನರೇಗಾ ಯೋಜನೆಯ ಕೂಲಿ ಹಣ ದೊರೆಯುವಂತೆ ಮತ್ತು ಯೋಜನೆಯು ಪಾರದರ್ಶಕವಾಗಿರಲು ನರೇಗಾ ಕೂಲಿ ಕಾರ್ಮಿಕರನ್ನು ಇ-ಕೆವೈಸಿ ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದೆ. ಹೀಗೆ ಇ–ಕೆವೈಸಿ ಜೋಡಣೆಯು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಲ್ಲಿವರೆಗೂ ಶೇ.72 ರಷ್ಟು ಗುರಿ ಸಾಧಿಸಲಾಗಿದೆ. ಇ-ಕೆವೈಸಿಗಾಗಿ ನರೇಗಾ ಕಾರ್ಮಿಕರ ಹುಡುಕಾಟ ನಡೆದಿದೆ.

ಕೇಂದ್ರ ಸರ್ಕಾರದ ಆದೇಶದಂತೆ ನರೇಗಾ ಕೂಲಿ ಕಾರ್ಮಿಕರ ಇ-ಕೆವೈಸಿ ಜೋಡಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಗ್ರಾಮೀಣ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅಕ್ರಮಗಳು ನಡೆಯುತ್ತಿವೆ. ಕೂಲಿ ಹಣ ಅರ್ಹರಿಗೆ ಸಿಗುತ್ತಿಲ್ಲ ಎಂಬ ಆರೋಪಗಳು ಇವೆ. ಈ ಮೇರೆಗೆ ಕೇಂದ್ರ ಸರ್ಕಾರ ನರೇಗಾ ಕೂಲಿ ಹಣ ಸೋರಿಕೆ ತಡೆಯಲು ಕೂಲಿ ಕಾರ್ಮಿಕರ ಆಧಾರ್, ಬ್ಯಾಂಕ್ ಖಾತೆ ಹಾಗೂ ಉದ್ಯೋಗ ಚೀಟಿ  (ಜಾಬ್‌ಕಾರ್ಡ್) ಮಾಹಿತಿಯನ್ನು ಇ-ಕೆವೈಸಿ ಮೂಲಕ ಕ್ರೋಡೀಕರಿಸಲು ಮುಂದಾಗಿದೆ.

ಜಿಲ್ಲೆಯಲ್ಲಿ  ನರೇಗಾ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆ 2,00,961 ಮಂದಿ ಇದ್ದಾರೆ. ಆ ಪೈಕಿ 1,48,146 ಮಂದಿ ಕೂಲಿ ಕಾರ್ಮಿಕರ ಇ-ಕೆವೈಸಿ ಪೂರ್ಣಗೊಂಡಿದೆ. ಉಳಿದಂತೆ ಇನ್ನೂ 52,815 ಮಂದಿ ಕೂಲಿ ಕಾರ್ಮಿಕರ ಇ-ಕೆವೈಸಿ ಜಿಲ್ಲೆಯಲ್ಲಿ ಬಾಕಿ ಇದೆ.

ADVERTISEMENT

ಕಾರ್ಮಿಕರಿಗಾಗಿ ಹುಡುಕಾಟ: ನರೇಗಾ ಕೂಲಿ ಕಾರ್ಮಿಕರ ಇ-ಕೆವೈಸಿಗಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಬಹಳಷ್ಟು ನರೇಗಾ ಕಾರ್ಮಿಕರು ವಲಸೆ ಕಾರ್ಮಿಕರು ಆಗಿರುವುದರಿಂದ ಇ-ಕೆವೈಸಿ ಮಾಡಿಸುವುದು  ಸವಾಲಾಗಿದೆ.

ಹಲವು ಬಾರಿ ಮನೆಗಳ ಬಳಿ ತೆರಳಿದರೂ ನರೇಗಾ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಪಡೆದ ಕೆಲವರು ಮೃತಪಟ್ಟಿದ್ದಾರೆ. ಆ  ಕೂಲಿ ಕಾರ್ಮಿಕರ ಮಾಹಿತಿ ರದ್ದುಪಡಿಸುವ ಕಾರ್ಯ ಸರಿಯಾಗಿ ನಡೆದಿಲ್ಲ.

ಈ ಹಿಂದೆ ನರೇಗಾ ಯೋಜನೆಯಡಿ ಉದ್ಯೋಗಕ್ಕಾಗಿ ಕುಟುಂಬದ ಸದಸ್ಯರಲ್ಲಿ ಯಾರೇ ಅರ್ಜಿ ಸಲ್ಲಿಸಿದರೂ ಆ ಕುಟುಂಬದ ಇತರೆ ಸದಸ್ಯರು ನರೇಗಾ ಕೂಲಿ ಕೆಲಸದಲ್ಲಿ ತೊಡಗಿಸಿಕೊಂಡು ಕೂಲಿ ಹಣ ಪಡೆಯಬಹದಿತ್ತು. ಆದರೆ ಇದೀಗ ಅರ್ಜಿ ಹಾಕಿದವರೆ ನರೇಗಾ ಕೆಲಸದಲ್ಲಿ ಪಾಲ್ಗೊಳ್ಳಬೇಕು. ಕುಟುಂಬದ ಇತರೇ ಸದಸ್ಯರು ಪಾಲ್ಗೊಳ್ಳಲು ಅವಕಾಶ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.