ADVERTISEMENT

ಗೌರಿಬಿದನೂರು | ಬೆಳೆ ಸಾಲ ಮಂಜೂರು ಮಾಡದ ಅಧಿಕಾರಿಗಳು

ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 19:45 IST
Last Updated 14 ಆಗಸ್ಟ್ 2020, 19:45 IST
ಡಿ.ಪಾಳ್ಯ ಎಸ್‌ಬಿಐ ಬ್ಯಾಂಕ್ ಎದುರು‌ ರೈತ ಸಂಘಟನೆಯ‌ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು
ಡಿ.ಪಾಳ್ಯ ಎಸ್‌ಬಿಐ ಬ್ಯಾಂಕ್ ಎದುರು‌ ರೈತ ಸಂಘಟನೆಯ‌ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು   

ಗೌರಿಬಿದನೂರು: ತಾಲ್ಲೂಕಿನ ಡಿ.ಪಾಳ್ಯದಲ್ಲಿನ ಎಸ್‍ಬಿಐ ಶಾಖೆ ಅಧಿಕಾರಿಗಳು ಸಕಾಲದಲ್ಲಿ ಬೆಳೆ ಸಾಲ ಮಂಜೂರು ಮಾಡದೆ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಶುಕ್ರವಾರ ಬ್ಯಾಂಕ್ ಮುಂಭಾಗ ಪ್ರತಿಭಟಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್.ಲಕ್ಷ್ಮಿ ನಾರಾ ಯಣ್ ಮಾತನಾಡಿ, ಈ ಭಾಗದ ರೈತರಿಗೆ ಕೃಷಿಯೇ ಜೀವಾಳವಾಗಿದೆ. ಸಕಾಲಕ್ಕೆ ಮಳೆಯಾಗದೆ ರೈತರು ಜೀವನಾಧಾರಕ್ಕೆ ಬ್ಯಾಂಕ್‍ಗಳಲ್ಲಿ ಕೃಷಿಗೆ ಸಾಲ ಮಾಡಿದ್ದು, ನಂತರ ಸಾಲವನ್ನು ಮರು ಪಾವತಿ ಮಾಡಿದ್ದಾರೆ. ಇದೀಗ ಮುಂಗಾರು ಮಳೆ ಚುರುಕುಗೊಂಡಿದ್ದು, ರೈತರಿಗೆ ಹಣ ಕೊರತೆಯಿಂದ ಬ್ಯಾಂಕ್‍ಗಳತ್ತ ಮುಖ ಮಾಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಆದರೆ, ಅಧಿಕಾರಿಗಳು ರೈತರ ಕಾರ್ಯಗಳ‌ ಬಗ್ಗೆ ಗಮನಿಸದೆ ವಿನಾಕಾರಣ ಬ್ಯಾಂಕ್‌ಗಳತ್ತ ಅಲೆದಾಡಿಸುತ್ತಿದ್ದಾರೆ ಎಂದು ದೂರಿದರು.

ADVERTISEMENT

ಬ್ಯಾಂಕ್‍ ವ್ಯವಸ್ಥಾಪಕರು ರೈತರಿಗೆ ಸಾಲ ನೀಡದೆ ಸತಾಯಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ರೈತರಿಗೆ ಲಕ್ಷ ಕೋಟಿ ಪ್ಯಾಕೇಜ್ ನೀಡಿದ್ದೇವೆ ಎಂದು ತಿಳಿಸುತ್ತಾರೆ. ಆದರೆ, ಬ್ಯಾಂಕ್ ಅಧಿಕಾರಿಗಳು ಇದರ ಬಗ್ಗೆ ಅರಿವಿಲ್ಲದೆ ಮಾತನಾಡುತ್ತಾರೆ ಎಂದು ದೂರಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗುಂಡಾಪುರ ಲೋಕೇಶ್‍ಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ಬ್ಯಾಂಕ್‍ಗಳಲ್ಲಿ ಸಾಲ ಪಡೆಯುವುದು ಹಗಲು ಕನಸಾಗಿದೆ. ತಾಂತ್ರಿಕ ದೋಷಗಳ ಬಗ್ಗೆ ಕಾರಣ ಹೇಳಿ ಅಲೆದಾಡಿಸುತ್ತಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಸಹಕಾರ್ಯದರ್ಶಿ ರಾಜಣ್ಣ, ಶ್ರೀನಿವಾಸ್, ಅಶ್ವತ್ಥ ಗೌಡ, ಮುನಿವೆಂಕಟರೆಡ್ಡಿ, ನಂಜರೆಡ್ಡಿ, ಲಕ್ಷ್ಮಿನಾರಾಯಣ್, ನರಸಿಂಹ ರೆಡ್ಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.