ADVERTISEMENT

12ರಂದು ವಿಧಾನಸೌಧಕ್ಕೆ ಮುತ್ತಿಗೆ

ಖಾಸಗೀಕರಣಕ್ಕೆ ವಿರೋಧ ಹಾಗೂ ಕೃಷಿ ಕಾಯ್ದೆ ವಜಾಕ್ಕೆ ರೈತ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2022, 3:55 IST
Last Updated 3 ಸೆಪ್ಟೆಂಬರ್ 2022, 3:55 IST
ಸುದ್ದಿಗೋಷ್ಠಿಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು   

ಚಿಕ್ಕಬಳ್ಳಾಪುರ: ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗಿಕರಣ, ವಿದ್ಯುಚ್ಛಕ್ತಿ ಖಾಸಗಿಕರಣ ವಿರೋಧಿಸಿ ಹಾಗೂ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ರೈತ ಸಂಘದಿಂದ ಸೆ.12ರಂದು ವಿಧಾನಸೌಧಕ್ಕೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಜನಸಾಮಾನ್ಯರ ಕೈಗೆ ಹೋಗಬೇಕು. ಅಭಿವೃದ್ಧಿ ಪ್ರತಿಫಲ ಜನರಿಗೆ ತಲುಪಬೇಕು ಎಂದು ಸ್ವಾತಂತ್ರ್ಯದ ಪರಿಕಲ್ಪನೆ ಅಡಿ ಕೆಲಸ ಮಾಡುತ್ತಿದ್ದೇವೆ. ಆದರೆ ಇತ್ತೀಚೆಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಸೇವಾ ಕ್ಷೇತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ‌ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ’ ಎಂದರು.

ವಿಮಾನ ನಿಲ್ದಾಣ, ಬಂದರು, ಹಡಗುಗಳು ಖಾಸಗಿಕರಣಕ್ಕೆ ಒಳಪಟ್ಟಿವೆ. ಕೃಷಿ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರದ ಮೂಲಕ ರೈತರ ಜಮೀನುಗಳನ್ನು ಖಾಸಗಿಯವರ ಕೈಗೆ ಇಡಲಾಗುತ್ತಿತ್ತು ಎಂದು ಹೇಳಿದರು.

ADVERTISEMENT

ಕೇಂದ್ರ ಸರ್ಕಾರ ಕೃಷಿ, ಎಪಿಎಂಸಿ ಮತ್ತು ವಿದ್ಯುತ್ ತಿದ್ದುಪಡಿ ಕಾಯ್ದೆಗಳನ್ನು ಜಾರಿಗೊಳಿಸಿತು. ಆ ಕಾಯ್ದೆಗಳು ರಾಜ್ಯದಲ್ಲಿಯೂ ಜಾರಿಯಾದವು. ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಿತು. ಆದರೆ ರಾಜ್ಯ ಸರ್ಕಾರ ವಾಪಸ್ ಪಡೆದಿಲ್ಲ. ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಈ ಕಾಯ್ದೆಗಳನ್ನು ವಜಾಗೊಳಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೋಂದಣಾಧಿಕಾರಿ ಕಚೇರಿಯು ಸಂಜೆ 7ರವರೆಗೆ ತೆರೆದಿರುತ್ತದೆ. 15 ನಿಮಿಷಗಳಲ್ಲಿ ಸಬ್‌ರಿಜಿಸ್ಟಾರ್ ಕಚೇರಿಯಲ್ಲಿ ಕೆಲಸಗಳು ಆಗುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ. ಈ ಕಾಯ್ದೆಯ ಹುನ್ನಾರಗಳು ಜನಸಾಮಾನ್ಯರಿಗೆ ಎಷ್ಟು ಅರ್ಥವಾಗುತ್ತದೆಯೊ ಗೊತ್ತಿಲ್ಲ. ಕೃಷಿ ಭೂಮಿ ಬಹಳ ಬೇಗ ಹಣವಂತರ ಕೈಗೆ ವರ್ಗಾವಣೆ ಆಗುತ್ತಿದೆ ಎಂದರು.

ನಮ್ಮ ಖಜಾನೆಯನ್ನು ಭರ್ತಿ‌ಮಾಡುವ ಸರ್ಕಾರಿ ಸ್ವಾಮ್ಯದ ಕಂಪನಿಗಳ ಖಾಸಗೀಕರವನ್ನು ಕೈಬಿಡಿ ಎಂದು ವಿಧಾನಸೌಧಕ್ಕೆ ಮುತ್ತಿಗೆ ಹೋರಾಟ ಹಮ್ಮಿಕೊಂಡಿದ್ದೇವೆ ಎಂದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಜಿಲ್ಲಾ ಅಧ್ಯಕ್ಷ ಎಚ್.ಪಿ.ರಾಮನಾಥ್, ವಿ.ವೇಣುಗೋಪಾಲ್ ಇತರರು ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.