ADVERTISEMENT

ಅಧ್ಯಕ್ಷರ ವಿರುದ್ಧ ಸದಸ್ಯರ ಆಕ್ರೋಶ

ನಗರಸಭೆ ಕಾಮಗಾರಿಗಳಿಗೆ ಅನುಮೋದನೆ, ಬಿಲ್ ಪಾವತಿಗೆ ವಿಳಂಬ ಆರೋಪ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 4:40 IST
Last Updated 2 ಡಿಸೆಂಬರ್ 2022, 4:40 IST
ಗೌರಿಬಿದನೂರು ನಗರಸಭೆಯಲ್ಲಿ ಗುರುವಾರ ‌ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮತ್ತು ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆಯಿತು
ಗೌರಿಬಿದನೂರು ನಗರಸಭೆಯಲ್ಲಿ ಗುರುವಾರ ‌ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮತ್ತು ಅಧ್ಯಕ್ಷರ ನಡುವೆ ಮಾತಿನ ಚಕಮಕಿ ನಡೆಯಿತು   

ಗೌರಿಬಿದನೂರು: ‘ನಮಗೆ ಸಭೆಯಲ್ಲಿ ಯಾವುದೇ ಮರ್ಯಾದೆ ಸಿಗುತ್ತಿಲ್ಲ. ನಾವು ಸಲ್ಲಿಸಿದ ಕಾಮಗಾರಿಗಳಿಗೆ ಅನುಮೋದನೆಯೂ ದೊರೆಯುತ್ತಿಲ್ಲ. ಈಗಾಗಲೇ ನಡೆದ ಕಾಮಗಾರಿಗಳಿಗೆ ಬಿಲ್ ಪಾವತಿಸಲು ವಿಳಂಬ ಮಾಡಲಾಗುತ್ತಿದೆ’ -ಹೀಗೆಂದು ಗುರುವಾರ ಇಲ್ಲಿ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭೆ ಅಧ್ಯಕ್ಷೆ ಎಸ್.ರೂಪ ಅನಂತರಾಜು ಅವರ ನೇತೃತ್ವದಲ್ಲಿ ‌ನಡೆದ ಸಾಮಾನ್ಯ ಸಭೆಯ ಆರಂಭದಲ್ಲೇ ಖಲೀಂ ಉಲ್ಲಾ, ವಿ. ರಮೇಶ್, ಆರ್.ಪಿ. ಗೋವಿನಾಥ್ ಸೇರಿದಂತೆ ಇತರ ಸದಸ್ಯರು ತಮಗೆ ನಗರಸಭೆಯಲ್ಲಿ ಸೂಕ್ತ ನ್ಯಾಯ ಮತ್ತು ಗೌರವಗಳು ಸಿಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ನಗರಸಭೆ ಸದಸ್ಯ ರಾಜಕುಮಾರ್, ತಮ್ಮ ವಾರ್ಡ್‌ನಲ್ಲಿ ಮೂಲ ಸೌಕರ್ಯಗಳು ಹಾಗೂ ಈ ಭಾಗದ ಅಂಬೇಡ್ಕರ್ ಭವನ ಅಭಿವೃದ್ಧಿಗೊಳಿಸಿ ಬಡವರ ಸೇವೆಗೆ ಅವಕಾಶ ಮಾಡಿಕೊಡುವಂತೆ ಹಲವು ಬಾರಿ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಮತ್ತೊಬ್ಬ ಸದಸ್ಯ ಡಿ.ಎನ್. ವೆಂಕಟರೆಡ್ಡಿ ಮಾತನಾಡಿ, ‘ನಗರದ 31 ವಾರ್ಡ್‌ಗಳಲ್ಲಿರುವ ಉದ್ಯಾನವನಗಳು ಹಾಗೂ ಅದಕ್ಕಾಗಿ ಮೀಸಲಿಟ್ಟ ಸ್ಥಳ ಗುರುತಿಸಿ ನಾಮಫಲಕ ಅಳವಡಿಸಲು 3 ತಿಂಗಳ ಹಿಂದೆಯೇ ತಿಳಿಸಲಾಗಿದ್ದರೂ, ಸೂಕ್ತ ಕ್ರಮ ಕೈಗೊಂಡಿಲ್ಲ. ವಾಟರ್ ಮೆನ್‌ಗಳ ಕೊರತೆಯಿದ್ದು, ಅದನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ಸದಸ್ಯೆ ಡಿ.ಎ.ಮಂಜುಳಾ ತಮ್ಮ ವಾರ್ಡ್‌ನಲ್ಲಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.

ಗರಸಭೆ ಉಪಾಧ್ಯಕ್ಷೆ ಭಾಗ್ಯಮ್ಮ, ಆಯುಕ್ತೆ ಡಿ.ಎಂ. ಗೀತಾ, ಎಂಜಿನಿಯರ್ ದಾನಿಯಾ, ಜೆ ಇ ರಾಮಚಂದ್ರರೆಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಹೊಸ ಲೇಔಟ್‌ ಅನುಮೋದನೆ ಪಾರದರ್ಶಕವಾಗಿರಲಿ

ನಗರಸಭೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ‌ಹೊಸದಾಗಿ ನಿರ್ಮಾಣವಾಗುತ್ತಿರುವ ಲೇಔಟ್‌ಗಳಲ್ಲಿ ಸಾಕಷ್ಟು ಸಮಸ್ಯೆಗಳು ಕಂಡು ಬರುತ್ತಿವೆ. ಇವುಗಳಲ್ಲಿ ಸಮೀಪದ ಸರ್ಕಾರಿ ಭೂಮಿ ಸೇರಿದಂತೆ ‌ಇತರ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ.

ಕೆಲವರು ತಮ್ಮ ನಿವೇಶನಗಳ ಮಾರಾಟಕ್ಕೆ ಅಧಿಕಾರಿಗಳಿಂದ ಅಕ್ರಮವಾಗಿ ಅನುಮತಿ ಪಡೆದು ಜನರಿಗೆ ಮಾರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.