ADVERTISEMENT

ರಾಜ್ಯೋತ್ಸವ: ಶಿಡ್ಲಘಟ್ಟ ಕಡೆಗಣನೆಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 6:47 IST
Last Updated 1 ನವೆಂಬರ್ 2025, 6:47 IST

ಶಿಡ್ಲಘಟ್ಟ: ಕನ್ನಡ ರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಸನ್ಮಾನಕ್ಕೆ ಆಯ್ಕೆ ಮಾಡಿರುವವರಲ್ಲಿ ಶಿಡ್ಲಘಟ್ಟ ತಾಲ್ಲೂಕನ್ನು ಜಿಲ್ಲಾ ಉಪವಿಭಾಗಾಧಿಕಾರಿ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಕನ್ನಡ ಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.

ಒಟ್ಟು 15 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಅದರಲ್ಲಿ ಚಿಕ್ಕಬಳ್ಳಾಪುರದವರೇ 8 ಮಂದಿ ಇದ್ದಾರೆ. ಚಿಂತಾಮಣಿಯ ಇಬ್ಬರು, ಬಾಗೇಪಲ್ಲಿಯ 3 ಮಂದಿ ಮತ್ತು ಗೌರಿಬಿದನೂರಿನಿಂದ ಒಬ್ಬರಿದ್ದಾರೆ.

ಶಿಕ್ಷಣ, ಕ್ರೀಡೆ, ಸಮಾಜಸೇವೆ, ಕಲೆ, ನಾದಸ್ವರ ವಿದ್ವಾನ್, ಪತ್ರಕರ್ತ, ಆರ್ಥಿಕ (ವಿಶೇಷ), ಕನ್ನಡ ಪರ ಸೇವೆ ಕ್ಷೇತ್ರ ಪರಿಗಣಿಸಲಾಗಿದೆ. ಈ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವಾರು ಮಂದಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿದ್ದಾರೆ. ಅವರನ್ನು ಏಕೆ ಪರಿಗಣಿಸಿಲ್ಲ. ಇದನ್ನು ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಎಂದು ಕರೆಯಬೇಡಿ, ಕೇವಲ ಚಿಕ್ಕಬಳ್ಳಾಪುರದ ರಾಜ್ಯೋತ್ಸವ ಪ್ರಶಸ್ತಿ ಎಂದು ಕರೆಯಿರಿ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಕಸಾಪ ಮಾಜಿ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಅವರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಸಮಪಾಲಾಗಿ ನೀಡಬೇಕು. ಆದರೆ ಇಲ್ಲಿ ಸೀಮಿತ. ಚಿಕ್ಕಬಳ್ಳಾಪುರ ತಾಲ್ಲೂಕಿನ ಹೆಚ್ಚಿನ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಾಗಾದರೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಯಾವುದೇ ಒಂದು ಕ್ಷೇತ್ರದಲ್ಲಿ ಆಗಲಿ ಸಾಧಕರಿಲ್ಲವೇ ಎಂದೆನಿಸುತ್ತದೆ. ಇದು ಜಿಲ್ಲಾಡಳಿತದ ಪಕ್ಷಪಾತ ಧೋರಣೆಯನ್ನು ತೋರಿಸುತ್ತದೆ ಎಂದು ಬೇಸರ ಹೊರಹಾಕಿದರು.

ರಾಜ್ಯೊತ್ಸವ ಪ್ರಶಸ್ತಿಯಲ್ಲಿ ಶಿಡ್ಲಘಟ್ಟದ ಸಾಧಕರನ್ನು ಆಯ್ಕೆ ಮಾಡದೇ ಕಡೆಗಣಿಸಿರುವುದು ಬೇಸರದ ಸಂಗತಿ. ತಾಲ್ಲೂಕಿನಲ್ಲಿ ಕವಿ, ಸಾಹಿತಿ, ಕಲಾವಿದರು, ಕನ್ನಡಪರ ಹೋರಾಟಗಾರರು ಇದ್ದಾರೆ. ಶಿಡ್ಲಘಟ್ಟವನ್ನು ಕಡೆಗಣಿಸಿರುವುದನ್ನು ಖಂಡಿಸುತ್ತೇವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರದಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.