ಗೌರಿಬಿದನೂರು: ತಾಯಿಗೆ ಬರುತ್ತಿದ್ದ ಪಿಂಚಣಿ ಹಣ ಹಂಚಿಕೊಳ್ಳುವ ವಿಚಾರವಾಗಿ ಅಣ್ಣ–ತಮ್ಮಂದಿರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲ್ಲೂಕಿನ ಮೇಳ್ಯ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹನುಮಂತರಾಯಪ್ಪನ ಪುತ್ರ ನರಸಿಂಹಮೂರ್ತಿ (40) ಕೊಲೆಯಾಗಿರುವ ವ್ಯಕ್ತಿ. ರಾಮಾಂಜಿ ಹಾಗೂ ಗಂಗಾಧರಪ್ಪ ಬಂಧಿತ ಆರೋಪಿಗಳು.
ಹನುಮಂತರಾಯಪ್ಪ ಲೈನ್‌ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ಮೃತಪಟ್ಟ ನಂತರ ಆತನ ಪತ್ನಿ ಗಂಗಮ್ಮನಿಗೆ ಪಿಂಚಣಿ ಹಣ ಬರುತ್ತಿತ್ತು. ಈ ಹಣ ಹಂಚಿಕೊಳ್ಳುವ ವಿಚಾರದಲ್ಲಿ ನರಸಿಂಹಮೂರ್ತಿ ಹಾಗೂ ಸಹೋದರರ ನಡುವೆ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಬುಧವಾರ ಮಧ್ಯಾಹ್ನ ಜಗಳ ನಡೆದಿದ್ದು, ಸಹೋದರರಾದ ರಾಮಾಂಜಿ ಹಾಗೂ ಗಂಗಾಧರಪ್ಪ ನರಸಿಂಹಮೂರ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಅಸ್ವಸ್ಥಗೊಂಡಿದ್ದ ನರಸಿಂಹಮೂರ್ತಿ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ನರಸಿಂಹಮೂರ್ತಿ ಅವರ ಪತ್ನಿ ಮಹೇಶ್ವರಮ್ಮ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.