ADVERTISEMENT

ಬಾಗೇಪಲ್ಲಿ: ಯುಗಾದಿ, ರಂಜಾನ್ ಆಚರಿಸಿದ ಸರ್ವ ಧರ್ಮಿಯರು

ಸೌಹಾರ್ದ ಸಂಗಮ-2025 ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2025, 14:27 IST
Last Updated 31 ಮಾರ್ಚ್ 2025, 14:27 IST
ಬಾಗೇಪಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಯುಗಾದಿ, ರಂಜಾನ್ ಪ್ರಯುಕ್ತ ಸರ್ವಧರ್ಮಿಯರು ಸಿಹಿ, ಸಮೋಸಾ, ಬಾಳೆಹಣ್ಣು, ಬೇವು, ಬೆಲ್ಲವನ್ನು ಸೇವಿಸಿದರು
ಬಾಗೇಪಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಯುಗಾದಿ, ರಂಜಾನ್ ಪ್ರಯುಕ್ತ ಸರ್ವಧರ್ಮಿಯರು ಸಿಹಿ, ಸಮೋಸಾ, ಬಾಳೆಹಣ್ಣು, ಬೇವು, ಬೆಲ್ಲವನ್ನು ಸೇವಿಸಿದರು    

ಬಾಗೇಪಲ್ಲಿ: ಚಂದ್ರಮಾನ ಯುಗಾದಿ, ಪವಿತ್ರ ರಂಜಾನ್ ಪ್ರಯುಕ್ತ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಭಾನುವಾರ ಸೌಹಾರ್ದ ವೇದಿಕೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಧರ್ಮಗುರುಗಳು, ಪ್ರಗತಿಪರ, ಕನ್ನಡ, ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಸೌಹಾರ್ದ ಸಂಗಮ-2025 ನಡೆಯಿತು.

ಹಿರಿಯ ವಕೀಲ ಎ.ಜಿ.ಸುಧಾಕರ್ ಮಾತನಾಡಿ, ತಾಲ್ಲೂಕಿನಲ್ಲಿ ಗಂಗಮ್ಮ ಕರಗ, ಗಡಿದಂ ವೆಂಕಟರಮಣಸ್ವಾಮಿ ಜಾತ್ರೆ, ಪಟ್ಟಣದ ಸಂತ ಹುಸೇನ್ ಷಾ ವಲಿ ಗಂಧದ ಪೂಜೆ ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ್, ಬುದ್ಧನ ಅನುಯಾಯಿಗಳು ಸೇರಿ ಒಗ್ಗಟ್ಟಿನಿಂದ ಆಚರಿಸಲಾಗುತ್ತಿದೆ. ಹುಸೇನ್ ಷಾ ವಲಿ ಗಂಧದ ಮೆರವಣಿಗೆಯಲ್ಲಿ ಗಂಗಮ್ಮ ದೇವಾಲಯದ ಮುಂದೆ ಅರ್ಚಕರಿಂದ ದೀಪಾದಾರತಿ ಬೆಳಗಿಸಲಾಗುತ್ತದೆ. ಇದೊಂದು ಸೌಹಾರ್ದ ನಡೆ ಎಂದರು.

ಕಮರ್ ಮಸೀದಿ ಧರ್ಮಗುರು ರಿಜ್ವಾನ್ ಮಾತನಾಡಿ, ಬಾಗೇಪಲ್ಲಿಯಲ್ಲಿ ಹಿಂದೂ, ಮುಸ್ಲಿಮರು ಒಗ್ಗಟ್ಟಾಗಿ ಯುಗಾದಿ, ರಂಜಾನ್ ಹಬ್ಬಗಳಲ್ಲಿ ಭಾಗಿಯಾಗಿದ್ದೇವೆ. ದೇಶದಲ್ಲಿ ಧರ್ಮ, ಜಾತಿಗಳ ಆಚರಣೆಗಳಲ್ಲಿ ಭಿನ್ನತೆ ಇದ್ದರೂ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಲಾಗಿದೆ ಎಂದರು. ಸಮಾಜದಲ್ಲಿ ಶಾಂತಿ, ನೆಮ್ಮದಿ ವಾತಾವರಣ ಇರಬೇಕು. ಯಾವುದೇ ಕಾರಣಕ್ಕೂ ಕೋಮುದ್ವೇಷ, ಅಶಾಂತಿ ವಾತಾವರಣ ಸೃಷ್ಟಿಯಾಗದಂತೆ ಎಚ್ಚರ ವಹಿಸಬೇಕಾಗಿದೆ ಎಂದರು.

ADVERTISEMENT

ಹೊಸ ಜೀವನ ಜೀವನ ನಿಲಯದ ಚರ್ಚ್ ಫಾದರ್ ಎಚ್.ಎಚ್.ಪ್ರಕಾಶ್ ಮಾತನಾಡಿ, ಸೌಹಾರ್ದತೆಗೆ ನಾವೆಲ್ಲರೂ ಕೈ ಜೋಡಿಸಬೇಕು. ಎಲ್ಲ ಧರ್ಮಗ್ರಂಥಗಳು ಶಾಂತಿ, ನೆಮ್ಮದಿ ವಾತಾವರಣ ಬಯಸುತ್ತವೆ. ಸರ್ವ ಜನಾಂಗದ ತೋಟದಲ್ಲಿ ಸೌಹಾರ್ದತೆ ಮೆರೆಯಬೇಕು. ಜನರಲ್ಲಿ ಪ್ರೀತಿ, ನಂಬಿಕೆ, ಕೂಡಿಬಾಳುವ ಸಂಸ್ಕೃತಿ ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.

‌ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಚಿನ್ನಕೈವಾರಮಯ್ಯ ಮಾತನಾಡಿ, ಸೌಹಾರ್ದ ವೇದಿಕೆ ಕಾರ್ಯಕ್ರಮ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ, ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟಶಿವಾರೆಡ್ಡಿ, ಶ್ರೀನಿವಾಸತಂತ್ರಿ, ಮಹಮದ್‍ ಎಸ್‍.ನೂರುಲ್ಲಾ, ಜ್ಯೋತಿ, ಶಿಕ್ಷಕ ಎಚ್.ಎಸ್.ಸುಬ್ರಮಣ್ಯಂ, ದಲಿತ ಸಂಘಟನೆ ಮುಖಮಡ ಎಂ.ವಿ.ಲಕ್ಷ್ಮಿನರಸಿಂಹಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ, ಪ್ರಾಂತ ರೈತ ಸಂಘದ ಜಿಲ್ಲಾ ಸಹ ಸಂಚಾಲಕ ಡಿ.ಟಿ.ಮುನಿಸ್ವಾಮಿ, ಸಂಚಾಲಕ ಚನ್ನರಾಯಪ್ಪ, ಎಂ.ಎನ್.ರಘುರಾಮರೆಡ್ಡಿ, ದಲಿತ ಸಂಘಟನೆಯ ಜಿ.ಮೂರ್ತಿ, ಧರ್ಮದರ್ಶಿ ಬಿಳ್ಳೂರು ಕೆ.ಎಂ.ನಾಗರಾಜು, ಉಲೇಮಾ ಸಂಘಟನೆಯ ಆದಿಲ್‍ಖಾನ್, ವಲೀಬಾಷ, ನಿವೃತ್ತ ಶಿಕ್ಷಕ ರಾಮಕೃಷ್ಣಾರೆಡ್ಡಿ, ಪಿ.ಜಿ.ಶಿವಶಂಕರಾಚಾರಿ, ದಲಿತ ಹಕ್ಕುಗಳ ಸಮಿತಿ ಅಶ್ವಥ್ಥಪ್ಪ, ಜಿ.ಕೃಷ್ಣಪ್ಪ, ಮಹಿಳಾ ಮುಖಂಡರಾದ ಬೀಬೀಜಾನ್, ವೆಂಟಕಲಕ್ಷ್ಮಿ, ಚೆಂಡೂರು ವೆಂಕಟೇಶ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.