ADVERTISEMENT

ಬಾಗೇಪಲ್ಲಿಯ ಜನರುನೆನೆಯುವ ನಾಗಭೂಷಣಂ

ಪಿ.ಎಸ್.ರಾಜೇಶ್
Published 15 ಆಗಸ್ಟ್ 2022, 4:37 IST
Last Updated 15 ಆಗಸ್ಟ್ 2022, 4:37 IST
ಎನ್.ವಿ.ನಾಗಭೂಷಣಂ
ಎನ್.ವಿ.ನಾಗಭೂಷಣಂ   

ಬಾಗೇಪಲ್ಲಿ: ಸ್ವಾತಂತ್ರ್ಯ ಚಳವಳಿ ಮತ್ತು ಹೋರಾಟಗಾರರ ವಿಚಾರಗಳು ಬಂದ ತಕ್ಷಣ ತಾಲ್ಲೂಕಿನ ಜನರಿಗೆ ನೆನಪಾಗುವುದುನೀರಗಂಟಿಪಲ್ಲಿ ಗ್ರಾಮದ ಎನ್.ವಿ.ನಾಗಭೂಷಣಂ.

ವಿದ್ಯಾರ್ಥಿ ಜೀವನದಿಂದ ಸ್ವಾತಂತ್ರ್ಯ ಬರುವವರೆಗೂ ನಡೆದ ವಿವಿಧ ಸ್ವಾತಂತ್ರ್ಯ ಚಳವಳಿಗಳಲ್ಲಿ ಭಾಗಿಯಾದವರು ನಾಗಭೂಷಣಂ. ವಿದುರಾಶ್ವತ್ಥದ ಹೋರಾಟ ಸೇರಿದಂತೆ ಹಲವು ಚಳವಳಿಗಳಲ್ಲಿ ಭಾಗಿಯಾಗಿದ್ದರು.

ಕೃಷಿಕರಾದ ವೆಂಕಟರಾಯಪ್ಪ, ನರಸಮ್ಮ ದಂಪತಿಗೆಗೆ 1922 ಮೇ 25ರಂದು ನಾಗಭೂಷಣಂ ಜನಿಸಿದರು. ಚಿಕ್ಕಬಳ್ಳಾಪುರದಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಮಾಡುವ ಅವಧಿಯಲ್ಲಿ, ವಿದೇಶಿ ವಸ್ತುಗಳನ್ನು ಸುಟ್ಟು ಹಾಕಿದ್ದಾರೆ ಎಂಬ ಆರೋಪದ ಮೇಲೆ ಇವರನ್ನು ಬಂಧಿಸಿ ಜೈಲಿಗೆ ಹಾಕಲಾಯಿತು.

ADVERTISEMENT

1942 ರಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ನೇಮಕವಾದರು. 1943ರಲ್ಲಿ ಗ್ರಾಮಗಳಲ್ಲಿ ಮದ್ಯಪಾನ ನಿಷೇಧದ ಬಗ್ಗೆ ತಾಲ್ಲೂಕಿನ ಅಪ್ಪಸ್ವಾಮಿರೆಡ್ಡಿ, ಎನ್.ವಿ.ಕೃಷ್ಣಾಮಾಚಾರಿ ಜತೆ ಪ್ರಚಾರ ಮಾಡುತ್ತಿದ್ದಾಗ, ಇವರನ್ನು ಬಂಧಿಸಿ ಕೆಜಿಎಫ್‌ನಲ್ಲಿ ಸೆರೆಯಲ್ಲಿ ಇಟ್ಟರು. 1938ರ ವಿದುರಾಶ್ವತ್ಥ ಹೋರಾಟದಲ್ಲಿ ಗಾಯಾಳುವಾದರು.

1944-45ರಲ್ಲಿ ಸ್ವಗ್ರಾಮದಲ್ಲಿ ಸರ್ಕಾರದ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಲು ಸೇತುವೆ ಕೆಡವಿದರು. ವಿದ್ಯುತ್ ತಂತಿ ಕತ್ತರಿಸಿದರು. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಬೆಂಗಳೂರಿನಲ್ಲಿ ಸೆರೆವಾಸ ಅನುಭವಿಸಿದರು.

ಚಂಗಲರಾಯರೆಡ್ಡಿ ನೇತೃತ್ವದ ಮೈಸೂರು ಚಲೋ ಹೋರಾಟದಲ್ಲಿ ಭಾಗಿ ಆಗಿದ್ದಾರೆ. ಸ್ವಾತಂತ್ರ್ಯದ ದಿನದಂದು ಗದ್ದಲ, ಗಲಾಟೆ ಮಾಡಿಸುತ್ತಾರೆ ಎಂಬ ಆರೋಪದ ಮೇಲೆ ಇವರನ್ನು 1947ರ ಆಗಸ್ಟ್ 15ರ ಮುನ್ನಾ 3 ದಿನಗಳ ಹಿಂದೆಯೇ ಪೊಲೀಸರು ಬಂಧಿಸಿ 18 ರಂದು ಬಿಡುಗಡೆ ಮಾಡಿದ್ದರು. 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಇವರಿಗೆ ಟಿಕೆಟ್ ತಪ್ಪಿದ್ದರಿಂದ, ಅಪ್ಪಸ್ವಾಮಿರೆಡ್ಡಿ, ಡಿ.ಎನ್.ವೆಂಕಟರೆಡ್ಡಿ, ನಾಗಭೂಷಣಂ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು. 1953ರಲ್ಲಿ ಲಗುಮದ್ದೇಪಲ್ಲಿ ಗ್ರೂಪ್ ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ಮಾಡಿದರು. 1952ರಲ್ಲಿ ಕಮ್ಯುನಿಸ್ಟ್ ಹೋರಾಟಕ್ಕೆ ಪ್ರಭಾವಿರಾದರು. ನಂತರ ತಾಲ್ಲೂಕಿನಲ್ಲಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ನಡೆದ ಹೋರಾಟಗಳಲ್ಲಿ ಭಾಗಿಯಾದರು.ನಾಗಭೂಷಣಂ ಅವರ ಪತ್ನಿ ಪಾರ್ವತಮ್ಮ ಈಗ ಪಿಂಚಣಿ ಪಡೆಯುತ್ತಿದ್ದಾರೆ.

‘ಮನೆ, ಕುಟುಂಬ, ಮಕ್ಕಳು ಎನ್ನುವುದಕ್ಕಿಂತ ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಟಗಳಲ್ಲಿ ಭಾಗಿಯಾಗಿದ್ದರು.ಅನೇಕ ಬಾರಿ ಬಂಧನಕ್ಕೆ ಒಳಗಾಗಿ ಜೈಲುವಾಸ ಅನುಭವಿಸಿದ್ದಾರೆ. ತಂದೆಯ ಹಾದಿ ನಮಗೆ ಹೆಮ್ಮೆ ಎನಿಸಿದೆ’ ಎಂದು ಎನ್.ವಿ.ನಾಗಭೂಷಣಂ ಅವರ ಹಿರಿಯ ಪುತ್ರ ಎನ್.ಚಂದ್ರನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಸ್ವಾತಂತ್ರ್ಯ ಹೋರಾಟಗಾರರಿಗೆ, ಕುಟುಂಬ ಸದಸ್ಯರನ್ನು ಗೌರವಯುತವಾಗಿ ನೋಡಬೇಕು. ನಿವೃತ್ತ ಯೋಧರ ಕುಟುಂಬಗಳಿಗೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ನಿವೃತ್ತ ಯೋಧ ಅಮರನಾಥಬಾಬು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.