ADVERTISEMENT

ಪಿಎಲ್‌ಡಿ: ಖಾತೆ ತೆರೆದ ಬಿಜೆಪಿ

ಒಟ್ಟು 12 ನಿರ್ದೇಶಕ ಸ್ಥಾನಗಳ ಪೈಕಿ ಎಂಟು ಬಿಜೆಪಿ ಪಾಲು, ನಾಲ್ಕು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡ ಕಾಂಗ್ರೆಸ್‌–ಬಿಜೆಪಿ ಮೈತ್ರಿ ಪಡೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 15:39 IST
Last Updated 23 ಫೆಬ್ರುವರಿ 2020, 15:39 IST
ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಸಚಿವ ಸುಧಾಕರ್ ಅವರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸಿದರು.
ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಸಚಿವ ಸುಧಾಕರ್ ಅವರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸಿದರು.   

ಚಿಕ್ಕಬಳ್ಳಾಪುರ: ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ನೀಡಿದ್ದ ಮತದಾರರು, ಭಾನುವಾರ ನಡೆದ ಚಿಕ್ಕಬಳ್ಳಾಪುರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕಿನ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ನೀಡಿದ್ದು, ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಗೆ ಹಿನ್ನಡೆಯಾಯಿತು.

ಪಿಎಲ್‌ಡಿ ಬ್ಯಾಂಕ್‌ ಆಡಳಿತ ಮಂಡಳಿ 11 ಸಾಲಗಾರರ ಕ್ಷೇತ್ರ ಮತ್ತು ಒಂದು ಸಾಲಗಾರರಲ್ಲದ ಕ್ಷೇತ್ರಗಳು ಸೇರಿದಂತೆ ಒಟ್ಟು 12 ನಿರ್ದೇಶಕ ಸ್ಥಾನಗಳನ್ನು ಚುನಾವಣೆ ನಡೆದಿತ್ತು. ಆರಂಭದಲ್ಲಿಯೇ ಬಿಜೆಪಿ ಬೆಂಬಲಿತರು ಎರಡು ಸ್ಥಾನಗಳನ್ನು ಅವಿರೋಧವಾಗಿ ತನ್ನ ಮಡಿಲಿಗೆ ಹಾಕಿಕೊಂಡಿದ್ದರು.

ಇನ್ನುಳಿದ 10 ಕ್ಷೇತ್ರಗಳಿಗಾಗಿ ಭಾನುವಾರ ನಡೆದ ಮತದಾನದಲ್ಲಿ ಆರು ಸ್ಥಾನಗಳನ್ನು ಬಿಜೆಪಿ ಮತ್ತು ನಾಲ್ಕು ಸ್ಥಾನಗಳನ್ನು ಮೈತ್ರಿ ಪಡೆ ಬೆಂಬಲಿತರು ಗೆದ್ದುಕೊಂಡರು. ಹೀಗಾಗಿ, ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಬಿಜೆಪಿ ಬೆಂಬಲಿತ ನಿರ್ದೇಶಕರ ಸಂಖ್ಯೆ ಎಂಟಕ್ಕೆ ಏರಿದ್ದು, ಸುಲಭವಾಗಿ ಬ್ಯಾಂಕ್ ಚುಕ್ಕಾಣಿ ಪುನಃ ಸುಧಾಕರ್‌ ಅವರ ಬಣದ ಕೈಸೇರಿತು.

ADVERTISEMENT

ಸುಮಾರು 85 ವರ್ಷಗಳ ಇತಿಹಾಸ ಉಳ್ಳ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಸುಮಾರು ಐದು ದಶಕಗಳಷ್ಟು ಜೆಡಿಎಸ್‌ ಪ್ರಾಬಲ್ಯವಿತ್ತು. ಶಾಸಕ ಡಾ.ಕೆ.ಸುಧಾಕರ್ ಅವರ ತಂತ್ರಗಾರಿಕೆ ಫಲವಾಗಿ ಬ್ಯಾಂಕ್ ಕಳೆದ ಐದು ವರ್ಷದಿಂದ ಕಾಂಗ್ರೆಸ್‌ ತೆಕ್ಕೆಗೆ ಬಂದಿತ್ತು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸುಧಾಕರ್‌ ಬಣದವರೆಲ್ಲ ಬಿಜೆಪಿಗರಾಗಿ ಬದಲಾಗಿ ಇದೇ ಮೊದಲ ಬಾರಿಗೆ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಕೂಡ ಬಿಜೆಪಿ ಖಾತೆ ತೆರೆಯಲು ಸಿದ್ಧತೆ ನಡೆಸಿದ್ದರು. ಇನ್ನೊಂದೆಡೆ, ಇತ್ತೀಚೆಗೆ ನಡೆದ ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್‌ ‘ಹೊಂದಾಣಿಕೆ’ ರಾಜಕೀಯ ಉತ್ತಮ ಪ್ರತಿಫಲ ನೀಡಿದ ಕಾರಣಕ್ಕೆ ಈ ಚುನಾವಣೆಯಲ್ಲೂ ಸುಧಾಕರ್ ಅವರ ನಾಗಾಲೋಟಕ್ಕೆ ತಡೆ ಒಡ್ಡುವ ನಿಟ್ಟಿನಲ್ಲಿ ಉಭಯ ಪಕ್ಷಗಳ ಮುಖಂಡರು ಮೈತ್ರಿ ಮಂತ್ರ ಜಪಿಸಿದ್ದರು. ಈ ಚುನಾವಣೆಯಲ್ಲಿ ಸಚಿವರ ತಂತ್ರಗಾರಿಕೆ ಎದುರು ಮೈತ್ರಿ ‘ಜಾದೂ’ ಫಲ ನೀಡಲಿಲ್ಲ.

ಅಗಲಗುರ್ಕಿ ಕ್ಷೇತ್ರದಿಂದ ಎರಡನೇ ಬಾರಿಗೆ ಪುನರಾಯ್ಕೆ ಬಯಸಿ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದ ಹಾಲಿ ಅಧ್ಯಕ್ಷ ಪಿ.ನಾಗೇಶ್ ಅವರು ತಮ್ಮ ಪ್ರತಿ ಸ್ಪರ್ಧಿ ಕಾಂಗ್ರೆಸ್, ಜೆಡಿಎಸ್ ಬೆಂಬಲಿತ ನಾರಾಯಣಸ್ವಾಮಿ ಅವರ ನಾಮಪತ್ರ ತಾಂತ್ರಿಕ ದೋಷದಿಂದ ತಿರಸ್ಕೃತವಾದ ಪರಿಣಾಮ ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನೊಂದೆಡೆ, ಪೆರೇಸಂದ್ರ ಕ್ಷೇತ್ರದಲ್ಲಿ (ಎಸ್‌ಸಿ) ಬಿಜೆಪಿ ಅಭ್ಯರ್ಥಿ ತಿರುಮಳಪ್ಪ ಅವರ ವಿರುದ್ಧ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗದ ಕಾರಣ ಅವರೂ ಅವಿರೋಧವಾಗಿ ಗೆಲುವಿನ ನಗೆ ಬೀರಿದ್ದರು.

ಭಾನುವಾರ ನಡೆದ ಮತದಾನದಲ್ಲಿ 10 ಸ್ಥಾನಗಳ ಪೈಕಿ ಕುಪ್ಪಹಳ್ಳಿ, ಹಾರೋಬಂಡೆ, ಹೊಸಹುಡ್ಯ, ಮಂಚನಬಲೆ, ದಿಬ್ಬೂರು, ಕೊಳವನಹಳ್ಳಿ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತರು ಮತ್ತು ಕಳವಾರ, ಮಂಡಿಕಲ್ಲು, ನಂದಿ ಕ್ಷೇತ್ರಗಳು ಹಾಗೂ ಸಾಲಗಾರರಲ್ಲದ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಈ ಫಲಿತಾಂಶ ಮೂಲಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯಲ್ಲಿ ತಮಗಾದ ಮುಖಭಂಗಕ್ಕೆ ಸೇಡು ತೀರಿಸಿಕೊಂಡರು ಎಂದೇ ಸ್ಥಳೀಯ ರಾಜಕೀಯ ವಲಯದಲ್ಲಿ ವಿಶ್ಲೇಷಣೆಗಳು ಹರಿದಾಡುತ್ತಿವೆ.

***
ಅಂಕಿಅಂಶಗಳು..

2,795
ಒಟ್ಟು ಮತದಾರರು

2,339
ಮತ ಚಲಾಯಿಸಿದವರು

456
ಮತ ಚಲಾಯಿಸದವರು

ಶೇ 83.68
ಮತದಾನ ಪ್ರಮಾಣ

ಪಟ್ಟಿ...

ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಫಲಿತಾಂಶದ ವಿವರ
ಕ್ಷೇತ್ರ;ವರ್ಗ;ಗೆಲುವು;ಪಡೆದ ಮತ;ಸೋಲು;ಪಡೆದ ಮತ;ಅಂತರ
ಹೊಸಹುಡ್ಯ;ಎಸ್‌ಟಿ;ಮುನಿಶಾಮಿ;57;ವೈ.ಎನ್.ಮಂಜುನಾಥ;56;1
ಸಾಲಗಾರರಲ್ಲದ ಕ್ಷೇತ್ರ;ಬಿಸಿಎಂ-ಎ;ಮಹಮ್ಮದ್ ದಾವೂದ್;644;ನಾಗರಾಜ್;640;4
ಹಾರೋಬಂಡೆ;ಮಹಿಳೆ;ಬಿ.ಎನ್.ಮಂಜುಳಮ್ಮ;61;ಕೆ.ಸಿ.ರತ್ನಮ್ಮ;54;7
ಕುಪ್ಪಹಳ್ಳಿ;ಮಹಿಳೆ;ಸಾವಿತ್ರಮ್ಮ;58;ಟಿ.ಎಸ್.ನಿರ್ಮಲಾ;48;10
ಕಳವಾರ;ಸಾಮಾನ್ಯ;ಬಿ.ಎನ್.ಮುನಿಯಪ್ಪ;66;ಕೆ.ಎನ್.ಕೃಷ್ಣಮೂರ್ತಿ;54;10
ದಿಬ್ಬೂರು;ಸಾಮಾನ್ಯ;ಎನ್‌.ಪ್ರಸಾದ್;60;ಎ.ರವಿಕುಮಾರ್;50;10
ಕೊಳವನಹಳ್ಳಿ;ಸಾಮಾನ್ಯ;ಕೆ.ಕಾಳೇಗೌಡ;69;ಕೆ.ಎಚ್.ತಮ್ಮೇಗೌಡ;44;25
ಮಂಚನಬಲೆ;ಸಾಮಾನ್ಯ;ವಿ.ಆನಂದಮೂರ್ತಿ;92;ಶ್ರೀನಿವಾಸ್;58;34
ನಂದಿ;ಸಾಮಾನ್ಯ;ವೈ.ಮಂಜುನಾಥ;74;ಎನ್.ಆರ್.ಮಂಜುನಾಥ;39;35
ಮಂಡಿಕಲ್ಲು;ಸಾಮಾನ್ಯ;ಎನ್.ನಾರಾಯಣಸ್ವಾಮಿ;71;ಕೆ.ಹರೀಶ್;33;38

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.