ಚಿಕ್ಕಬಳ್ಳಾಪುರ: ಸಾರ್ವಜನಿಕರು ಗೃಹ ಆಧಾರಿತ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವಾಗಿ ಮೂಲದಲ್ಲೇ ವಿಂಗಡಿಸಿ ಕಸ ಸಂಗ್ರಹಣೆ ವಾಹನಗಳಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಮನವಿ ಮಾಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ಪೌರಾಡಳಿತ ನಿದೇರ್ಶನಾಲಯ ಸಹಯೋಗದಲ್ಲಿ ಶುಕ್ರವಾರ ನಡೆದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕಮ್ಯುನಿಟಿ ಮೊಬಿಲೈಸರ್‌ಗಳಿಗೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಏಕ ಬಳಕೆ ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆಯನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಕಟ್ಟಡ ನಿರ್ಮಾಣ ಮತ್ತು ಹಳೆ ಕಟ್ಟಡ ಕೆಡವಿದ್ದರಿಂದ ಉಂಟಾಗುವ ತ್ಯಾಜ್ಯವನ್ನು ಮಾರ್ಗಸೂಚಿ ಅನ್ವಯವೇ ವಿಲೇವಾರಿ ಮಾಡಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕರನ್ನು ಸಹ ಜಾಗೃತಗೊಳಿಸಬೇಕು. ಒಟ್ಟಾರೆ ಜಿಲ್ಲೆಯ ನಗರಗಳನ್ನು ಕಸಮುಕ್ತ ಗೊಳಿಸುವುದು, ಸಮಗ್ರ ತ್ಯಾಜ್ಯ ಮತ್ತು ಕಸವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ತ್ಯಾಜ್ಯ ಪುನರ್ಬಳಕೆ, ಮರುಬಳಕೆ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಮ್ಯುನಿಟಿ ಮೊಬಿಲೈಸರ್‌ಗಳು ತಮ್ಮ ವ್ಯಾಪ್ತಿಯ 3 ವಾರ್ಡ್‌ಗಳನ್ನು ವಿಂಗಡಣೆ ಮಾಡಿಕೊಂಡು ಪ್ರತಿ ದಿನಕ್ಕೆ 10ರಿಂದ 15 ಮನೆಗಳಿಗೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು. ಪ್ರತಿ ವಾರ್ಡ್ ಗಳಲ್ಲೂ ಸಮುದಾಯ ಸಭೆ ಏರ್ಪಡಿಸಿ ತ್ಯಾಜ್ಯ ವಿಲೇವಾರಿ ಸ್ವಚ್ಛತಾ ಅಭಿಯಾನದ ಬಗ್ಗೆ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ನಮ್ಮ ಅರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ. ಹಸಿ ಕಸ, ಒಣ ಕಸವನ್ನು ಬೇರ್ಪಡಿಸುವಂತೆ ಪ್ರತಿಯೊಬ್ಬ ಸಾರ್ವಜನಿಕರಿಗೂ ಮನವರಿಕೆ ಮಾಡುವುದು ಅತಿಮುಖ್ಯ. ನಗರ ವ್ಯಾಪ್ತಿಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಮಳಿಗೆಗಳ ಮತ್ತು ಬೀದಿಬದಿ ವ್ಯಾಪಾರಿಗಳಿಗೂ ತಿಳಿ ಹೇಳುವ ಮೂಲಕ ಅರಿವು ಮಾಡಿಸಬೇಕು ಎಂದು ತಿಳಿಸಿದರು.
ಕಸವನ್ನು ಕಡಿಮೆ ಮಾಡುವ ಹಾಗೂ ಪುನರ್ಬಳಕೆ ಮಾಡುವ ಮತ್ತು ಮರುಬಳಕೆ ಮಾಡುವ ತತ್ವಗಳನ್ನು ಅನುಷ್ಠಾನಗೊಳಿಸಲು ಮತ್ತು ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ಆಧುನಿಕ ತಂತ್ರಜ್ಞಾನವನ್ನು ಬೆಂಬಲಿಸಬೇಕು. ಕಸವನ್ನು ಎಲ್ಲೆಂದರೆ ಅಲ್ಲಿ ಎಸೆಯದೆ ಸರಿಯಾಗಿ ವಿಲೇವಾರಿ ಮಾಡಬೇಕು. ಈ ವಿಚಾರವಾಗಿ ಜನರ ವರ್ತನೆಯನ್ನು ಬದಲಾಯಿಸಬೇಕು ಎಂದರು.
ನಾಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ್, ಕಾರ್ಯನಿರ್ವಾಹಕ ಎಂಜಿನಿಯರ್ ಮಾಧವಿ, ಬಾಗೇಪಲ್ಲಿ ಪುರಸಭೆ ಪೌರಾಯುಕ್ತ ಶ್ರೀನಿವಾಸ್, ಟೈಡ್ ಸಂಸ್ಥೆಯ ಪ್ರತಿನಿಧಿಗಳಾದ ಶಶಿಪ್ರಿಯ, ಅಶ್ವಿನ್ ಹಾಗೂ ಕಮ್ಯುನಿಟಿ ಮೊಬಿಲೈಸರ್‌ಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.